ಅಲ್ಲಿವರೆಗೆ ವಾಸುವಿನ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆದುಕೊಂಡು ಹೋಗಿರುತ್ತದೆ. ತುಂಬಾನೇ ಪ್ರೀತಿಸುವ ಅಪ್ಪ-ಅಮ್ಮ, ಅಕ್ಕ, ಕರೆದಾಗ ಓಡಿ ಬರೋ ಫ್ರೆಂಡ್ಸ್ … ವಾಸುವಿನ ಲೈಫ್ ಕಲರ್‌ಫುಲ್ ಆಗಿರುತ್ತದೆ. ಕಟ್ ಮಾಡಿದರೆ ಸುಲಭದಲ್ಲೊಂದು ಲವ್ ಬೇರೆ ಆಗಿಬಿಡುತ್ತದೆ. ವಾಸುವಿನ ಕಲರ್, ಖದರ್ರು ಬಗ್ಗೆ ಹೇಳ್ಳೋದೇ ಬೇಡ. ಆದರೆ, ಪ್ರೀತಿಸಿದ ಹುಡುಗಿ ಬಂದು “ಬ್ರೇಕಪ್ ಅಂದ್ರೆ ಬ್ರೇಕಪ್ ಅಷ್ಟೇ’ ಎನ್ನುವ ಮೂಲಕ ವಾಸುವಿವ “ಫೀಲಿಂಗ್ ಸ್ಟೋರಿ’ ತೆರೆದುಕೊಳ್ಳುತ್ತದೆ.
ಹಾಗಾದರೆ, ಮುಂದೆ ಕಣ್ಣೀರ ಕಥೆನಾ, ವಾಸುವಿನ ಲವ್ ಏನಾಗುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು “ವಾಸು’ವನ್ನು ನೋಡಬೇಕು. ನಾಯಕ ಅನೀಶ್ ತೇಜೇಶ್ವರ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಯಾವತ್ತಿಗೂ ಈ ರೀತಿಯ ಕಮರ್ಷಿಯಲ್ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ತಮ್ಮ ಬಹಳ ದಿನಗಳ ಆಸೆಯನ್ನು “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದಾರೆ.
ಒಂದು ಕಮರ್ಷಿಯಲ್ ಸಿನಿಮಾ ಹೇಗಿರಬೇಕೋ ಹಾಗಿದೆ “ವಾಸು’ವಿನ ಕಥೆ. ಒಂದು ಮಧ್ಯಮ ವರ್ಗದ ಸುಖೀ ಕುಟುಂಬದೊಂದಿಗೆ ತೆರೆದುಕೊಳ್ಳುವ ಸಿನಿಮಾ, ನಾಯಕನ ಫ್ರೆಂಡ್ಸ್, ಬಿಲ್ಡಪ್, ಲವ್, ಸಾಂಗ್ … ಹೀಗೆ ಸಾಗುತ್ತದೆ. ಮೊದಲೇ ಹೇಳಿದಂತೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನೇನೂ ನಿರೀಕ್ಷಿಸಬಹುದೋ ಅವೆಲ್ಲವೂ ವಾಸುವಿನಲ್ಲಿ ಇದೆ. ಆ ಕಾರಣದಿಂದ ಮಾಸ್ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗಬಹುದು.
ಅದು ಬಿಟ್ಟು, ಸಿನಿಮಾದಲ್ಲೊಂದು ಗಟ್ಟಿಕಥೆ ಬೇಕು, ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಸಿನಿಮಾವಾಗಿರಬೇಕು, ಕಥೆ ತುಂಬಾನೇ ಅಪ್‌ಡೇಟ್ ಆಗಿರಬೇಕು ಎಂದರೆ ನಿಮಗೆ “ವಾಸು’ ಅಷ್ಟೊಂದು ರುಚಿಸೋದು ಕಷ್ಟ. ಇಲ್ಲಿ ಹೇಳಿಕೊಳ್ಳುವಂತಹ ಗಟ್ಟಿಕಥೆಯಿಲ್ಲ. ಇಡೀ ಸಿನಿಮಾದಲ್ಲಿ ಇರೋದು ಒನ್‌ಲೈನ್ ಕಥೆ. ಅದು ಲವ್‌ಟ್ರ್ಯಾಕ್. ಅದನ್ನು ಬೆಳೆಸಿಕೊಂಡು ಹೋಗಿದ್ದಾರೆ. ಹಾಗಾಗಿ, ಇಲ್ಲಿ ಕಥೆಗಿಂತ ಸನ್ನಿವೇಶಗಳ ಮೂಲಕ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಕಥೆಯ ಹಂಗಿಲ್ಲದೇ ಒಂದು ಕಮರ್ಷಿಯಲ್ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಾದರೆ ನಿಮಗೆ “ವಾಸು’ ಅಡ್ಡಿಪಡಿಸುವುದಿಲ್ಲ. ಚಿತ್ರದಲ್ಲಿ ಲವ್ ಜೊತೆಗೆ ತಂದೆ-ಮಗನ ಸೆಂಟಿಮೆಂಟ್ ಅನ್ನು ಬಿಂಬಿಸಿದ್ದಾರೆ. ಒಂದು ಲವ್‌ಸ್ಟೋರಿಯನ್ನು ಅತಿಯಾದ ಸೆಂಟಿಮೆಂಟ್‌ನಿಂದ ಮುಕ್ತವಾಗಿಸಿ, ಕಮರ್ಷಿಯಲ್ ಆಗಿ, ರಗಡ್ ಆಗಿ ಕಟ್ಟಿಕೊಟ್ಟರೆ ಹೇಗಿರಬಹುದೋ ಹಾಗಿದೆ, “ವಾಸು’ವಿನ ಕಥೆ.
ಚಿತ್ರ ನೋಡುತ್ತಿದ್ದಂತೆ ಕಥೆಯನು ಬೆಳೆಸಿದ್ದರೆ, ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನವಿದ್ದರೆ “ವಾಸು’ವಿನ ಕಮರ್ಷಿಯಲ್ ಆಗಿ ಹೆಚ್ಚು ಸದೃಢನಾಗುತ್ತಿದ್ದ. ಆದರೆ, ನಿರ್ದೇಶಕರು ಆ ಬಗ್ಗೆ ಹೆಚ್ಚು ಗಮನಹರಿಸಿದಂತಿಲ್ಲ. ಅನೀಶ್‌ಗೆ “ವಾಸು’ ಒಂದು ಒಳ್ಳೆಯ ವೇದಿಕೆಯಾಗಿದ್ದು ಸುಳ್ಳಲ್ಲ. ಕಮರ್ಷಿಯಲ್ ಹೀರೋ ಆಗಿ ತಮ್ಮ ಸಾಮರ್ಥ್ಯ ತೋರಿಸಲು ಅನೀಶ್ ಕೂಡಾ “ವಾಸು’ವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಲವ್, ಸೆಂಟಿಮೆಂಟ್, ಫೈಟ್, ಡ್ಯಾನ್ಸ್ … ಹೀಗೆ ಎಲ್ಲಾ ವಿಭಾಗಗಳಲ್ಲೂ ಅನೀಶ್ ಮಿಂಚಿದ್ದಾರೆ. ನಟನೆಯಲ್ಲೂ ಅನೀಶ್ ಹಿಂದೆ ಬಿದ್ದಿಲ್ಲ. ನಾಯಕಿ ನಿಶ್ವಿಕಾ ಕೂಡಾ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಹಿಸಿದ್ದಾರೆ. ಉಳಿದಂತೆ ದೀಪಕ್ ಶೆಟ್ಟಿ, ಮಂಜುನಾಥ ಹೆಗ್ಡೆ, ಅರುಣಾ ಬಾಲರಾಜ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡಗಳು ಇಷ್ಟವಾಗುತ್ತವೆ.
ಚಿತ್ರ: ವಾಸು ನಾನ್ ಪಕ್ಕಾ ಕಮರ್ಷಿಯಲ್
ನಿರ್ಮಾಣ: ಅನೀಶ್ ತೇಜೇಶ್ವರ್
ನಿರ್ದೇಶನ: ಅಜಿತ್ ವಾಸನ್ ಉಗ್ಗಿನ
ತಾರಾಗಣ: ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅರುಣಾ ಬಾಲರಾಜ್, ಮಂಜುನಾಥ ಹೆಗ್ಡೆ, ದೀಪಕ್ ಶೆಟ್ಟಿ ಮತ್ತಿತರರು.
* ರವಿಪ್ರಕಾಶ್ ರೈ