ಬುದ್ಧಿ ಬಂದಾಗಿನಿಂದ ಮನೆಯಿಂದ ಹೊರಗಡೆ ಒಬ್ಬಳೇ ಹೋಗುವ ಅಭ್ಯಾಸವಿದ್ದರೂ ಹೊಸ ಊರಿಗೆ ಹೋಗುವ ವೇಳೆ ಮನದಲ್ಲಿ ಹೆದರಿಕೆ, ತಳಮಳ. ಕೆಲವೊಂದು ಬಾರಿ ಈ ಹಿಂದೆ ಹೋದ ಊರಿಗೆ ಮತ್ತೆ ಹೋಗಬೇಕು ಎಂದಾಗಲು ಕೊಂಚ ಗಾಬರಿ. ಹೀಗೆ ಒಂದು ದಿನ ಮಣಿಪಾಲದಿಂದ ಕಟೀಲು ದೇವಸ್ಥಾನ ಏಕಾಂಗಿಯಾಗಿ ಹೊರಡಲು ನಿರ್ಧರಿಸಿದ್ದೆ. ಈ ಮೊದಲು ಹೋಗಿದ್ದರೂ ಮಣಿಪಾಲದಿಂದ ಹೋಗುವ ದಾರಿ ಮಾತ್ರ ಹೊಸದಾಗಿತ್ತು.
ದಾರಿಯನ್ನು ಮೊದಲೇ ಕೇಳಿಕೊಂಡಾಗಿತ್ತು. ಹೀಗಾಗಿ ದೈರ್ಯ ಮಾಡಿ ಮಂಗಳೂರಿನ ಬಸ್ ಹಿಡಿದು ಮೂಲ್ಕಿ ತಲುಪಿದೆ.
ಅಲ್ಲಿಂದ ಕಟೀಲು ಕಡೆ ಸಾಗುವ ಬಸ್‌ಗಳ ದಾರಿಯನ್ನು ತಿಳಿದು ಅಲ್ಲಿ ಬಂದು ನಿಂತೆ. ತುಂಬಾ ಹೊತ್ತಾದರೂ ಬಸ್ ಬರಲಿಲ್ಲ. ಅತ್ತ ಇತ್ತ ನೋಡುತ್ತಾ, ಸಮಯ ನೋಡುತ್ತಾ ಕಟೀಲು ತಲುಪುವುದು ತಡವಾಗುವುದೇ ಎಂದು ಯೋಚಿಸುತ್ತಾ ಇದ್ದೆ. ಕಾದು ಸುಸ್ತಾಗಿದ್ದ ನಾನು ಅಲ್ಲೇ ಬಸ್ಸಿಗಾಗಿ ಕಾಯುತ್ತಿದ್ದ ಹಿರಿಯ ವ್ಯಕ್ತಿ ಬಳಿ ಹೋಗಿ ಬಸ್ಸಿನ ಸಮಯದ ಬಗ್ಗೆ ವಿಚಾರಿಸಿದೆ. ತುಳುವಿನಲ್ಲೇ ಮಾತನಾಡಲಾರಂಭಿಸಿದ ಅವರು ಯಾವ ಊರು ಎಂದೆಲ್ಲ ಪ್ರಶ್ನಿಸಿ ಇಲ್ಲೇ ಇರು ಕಟೀಲು ಬಸ್ ಇಲ್ಲೇ ಬರುತ್ತೆ. ನಾನು ಅತ್ತ ಕಡೆಯೇ ಹೋಗುವವನು ಭಯ ಪಡಬೇಡ. ನನಗೂ ಮೊಮ್ಮಗಳಿದ್ದಾಳೆ. ಅವರು ಹೊರ ಹೋದಾಗಲೂ ಭಯ ಆಗುತ್ತೆ ಎಂದು ಹೇಳಿದರು.
ಅಷ್ಟರಲ್ಲೇ ಬಸ್ಸಿನ ಆಗಮನವಾಯಿತು. ಬಸ್ ಬಂದ ತತ್‌ಕ್ಷಣ ಇದು ಕಟೀಲು ಹೋಗುವ ಬಸ್ ಹತ್ತಿಕೋ, ನಾನು ಬಸ್‌ನ ಹಿಂದಿನಿಂದ ಹತ್ತುವೇ ಎಂದು ಹೇಳಿ ಅತ್ತ ಸಾಗಿದರು. ಬಸ್ ಹತ್ತಿ ಸೀಟಿನಲ್ಲಿ ಕೂತು ನಿರಾಳತೆಯ ಉಸಿರುಬಿಟ್ಟಾಗ ಹಿಂಬದಿ ಯಿಂದ ಮಗಾ,ಮಗಾ ಎಂಬ ಧ್ವನಿ ಕೇಳಿತು. ಹಿಂತಿರುಗಿ ನೋಡಿದಾಗ ಅಜ್ಜ ಇದು ಕಟೀಲು ಹೋಗುವ ಬಸ್ಸು. ನಾನು ಕಿನ್ನಿಗೋಳಿವರೆಗೆ ಇದ್ದೇನೆ ಎಂದು ಹೇಳಿ ಕುಳಿತುಕೊಂಡರು. ಕಿನ್ನಿ ಗೋಳಿ ಬರುತ್ತಿದ್ದಂತೆ ಅಜ್ಜ ಮತ್ತೆ ನನ್ನ ಹತ್ತಿರ ಬಂದು “ನಾನು ಇಳಿಯುತ್ತೇನೆ. ಕಟೀಲು ಲಾಸ್ಟ್ ಸ್ಟಾಪ್. ದೇವರ ದರ್ಶನ ಮಾಡಿಕೊಂಡು ಬೇಗ ಮನೆ ಸೇರು’ ಎಂದು ಹೇಳಿ ಮಾಯವಾದರು. ಮನದ ಅಳುಕಿನೊಂದಿಗೆ ಪಯಣ ಬೆಳೆಸಿದ್ದ ನನಗೆ ಆ ಅಜ್ಜನ ಮಾತುಗಳು ದೈರ್ಯ ತುಂಬಿದ್ದವು. ಪರಿಚಯವಿಲ್ಲದ ಊರಿನಲ್ಲೂ ಧೈರ್ಯ ತುಂಬುವ ಮನಸ್ಸುಗಳಿವೆ ಎಂದು ತಿಳಿದು ಅಜ್ಜನಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದೆ.
– ರಮ್ಯಾ ಕೆದಿಲಾಯ