Advertisement
ಅವನು ನನ್ನ ಮೊದಲ ಮಲಯಾಳಂ ಗುರು. ಹೊಸ ಭಾಷೆಯಲ್ಲಿ ಕುಶಲೋಪರಿ ವಿಚಾರಿಸುವುದನ್ನು ಕಲಿತ ನನಗೆ ಎಲ್ಲೇ ಮಲಯಾಳಿಗಳು ಸಿಕ್ಕರೂ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. “ನೀವು ಮಲಯಾಳಿಗಳಾ?’ ಎಂದು ಪ್ರಾರಂಭವಾಗುತ್ತಿದ್ದ ಮಾತು ಮುಗಿಯುತ್ತಲೇ ಇರಲಿಲ್ಲ. ಈಗಲೂ ನನ್ನ ಭಾಷಾ ಕಲಿಕೆ ನಡೆಯುತ್ತಲೇ ಇದೆ. ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿರುವ ಬಹುತೇಕ ಮಲಯಾಳಿಗಳು ನನ್ನ ಸ್ನೇಹಿತರು. ಕಾಲೇಜು, ಪರೀಕ್ಷೆ, ಓದು, ಹಾಸ್ಟೆಲ್‌ನಲ್ಲಿ ಇರುವ ನನಗೆ ಮನೆಯ ನೆನಪು ಇವೆಲ್ಲದರ ನಡುವೆ ಹೊಸಬರೊಬ್ಬರ ಪರಿಚಯವಾದಾಗ ಏನೋ ಸಂತೋಷ, ಮನಸ್ಸಿಗೆ ನೆಮ್ಮದಿ. ನನ್ನ ಹಾಗೂ ಮಲಯಾಳಿಗಳ ನಂಟು ಕೇವಲ ಹರಟೆ, ಅಥವಾ ವಾಟ್ಸಾಪ್ ಗ್ರೂಪಿಗೆ ಸೀಮಿತವಾಗಿಲ್ಲ. ಹೊಸ ವಿಷಯಗಳ ಕುರಿತು ಚರ್ಚೆ, ಕೇರಳ ಹಾಗೂ ಕರ್ನಾಟಕದ ನಡುವಿನ ವ್ಯತ್ಯಾಸಗಳ ವಿಮರ್ಶೆ, ಅಲ್ಲಿನ ಸಂಸ್ಕೃತಿ, ರಾಜಕೀಯ ಬೆಳವಣಿಗೆ, ಸಿನಿಮಾ ರಂಗದಲ್ಲಾಗುವ ಬೆಳವಣಿಗೆ ಹೀಗೆ ಹಲವಾರು ವಿಷಯಗಳ ವಿನಿಮಯವೂ ನಡೆಯುತ್ತದೆ. ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷವನ್ನು ಭಾಷಾ ಕಲಿಕೆಗಾಗಿ ಮೀಸಲಿಟ್ಟಿರುವ ನನಗೆ ಆಗಿರುವ ಲಾಭಗಳು ಹಲವು. ಈಗ ಮಲಯಾಳಿಗಳಿಗೆ ಕನ್ನಡ ಕಲಿಸುತ್ತ ಅವರಿಂದ ದಿನವೂ ಹೊಸ ಶಬ್ದಗಳನ್ನು ಕಲಿಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪರಿಚಿತರೂ ನಮ್ಮನ್ನು ಸರಿಯಾಗಿ ಮಾತನಾಡಿಸದ ಈ ಕಾಲದಲ್ಲಿ ಭಾಷೆಯಿಂದಾಗಿ ಅಪರಿಚಿತರೂ ನನ್ನವರಾಗಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.
ಪ್ರಥಮ ಬಿ. ಎ.ಎಸ್‌ಡಿಎಮ್ ಕಾಲೇಜು, ಉಜಿರೆ.