Advertisement

ಫಿಲ್‌ ದ ಫೇಲ್‌ “ಡುಮ್ಕಿ”ಹೇಳುವ ಫಿಲಾಸಫಿ

08:35 AM Aug 04, 2020 | mahesh |

ವ್ಯಂಗ್ಯಚಿತ್ರಕಾರ, ಸಿನೆಮಾ ಪತ್ರಕರ್ತ, ಗೀತೆರಚನೆಕಾರ, ಸಂಗೀತ ನಿರ್ದೇಶಕ, ನಿರ್ದೇಶಕ, ನಟ- ಇವೆಲ್ಲಾ ಕ್ಷೇತ್ರಗಳಲ್ಲೂ ಮಿಂಚಿದವರು ವಿ. ಮನೋಹರ್‌. ಅಂಥವರೂ ಕೂಡ ಡಿಗ್ರಿಯಲ್ಲಿ ಡುಮ್ಕಿ ಹೊಡೆದಿದ್ದರು ಅಂದರೆ… ತಮ್ಮ ಬದುಕಿನಲ್ಲಿ ಫೇಲೇ ಗೆಲುವಿನ ಸೋಪಾನ ಆದದ್ದು ಹೇಗೆಂದು ಅವರು ಇಲ್ಲಿ ವಿವರವಾಗಿಯೇ ಹೇಳಿಕೊಂಡಿದ್ದಾರೆ…

Advertisement

ಅಕ್ಕನಿಗೆ, ನಾನು ಚೆನ್ನಾಗಿ ಓದಬೇಕು ಅಂತಿತ್ತು. ಕಾರಣ, ಮನೆಯಲ್ಲಿದ್ದ ಬಡತನ. ಅಪ್ಪನನ್ನು ನಾನು 6ನೇ ವಯಸ್ಸಿನಲ್ಲೇ ಕಳೆದುಕೊಂಡಿದ್ದೆ. ಅಮ್ಮನಿಗೆ ಹೇಳಿಕೊಳ್ಳುವಂಥ ವಿದ್ಯಾಭ್ಯಾಸ ಇರಲಿಲ್ಲ. ಆಕೆಯ ಒಂದೇ ಹಾರೈಕೆ ಅಂದರೆ, ಮಕ್ಕಳು ಚೆನ್ನಾಗಿರಬೇಕು, ಸುಖವಾಗಿ ಬದುಕಬೇಕು ಅನ್ನೋದು. ಇದರ ಹೊರತಾಗಿ ನೀನು ಡಾಕ್ಟ್ರು, ಎಂಜಿನಿಯರ್‌ ಆಗಬೇಕು ಅಂತ ಎಂದೂ ನನ್ನ ಹೆಗಲ ಮೇಲೆ ಕುಳಿತವಳಲ್ಲ. ಮಕ್ಕಳ ನೆಮ್ಮದಿಯ ಕನಸು ಬಿಟ್ಟರೆ, ಆಕೆಗೆ ಬೇರೇನೂ ಇರಲಿಲ್ಲ. ಹೀಗಾಗಿ, ಕುಟುಂಬದಿಂದ ನನ್ನ ಓದಿನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನನಗೂ ಬಹಳ ಚೆನ್ನಾಗಿ ಓದಬೇಕು ಅಂತೇನೋ ಇತ್ತು. ಆದರೆ, ಆವರೇಜ್‌ ಸ್ಟೂಡೆಂಟ್‌ ಪಟ್ಟದಿಂದ ಮಾತ್ರ ಮೇಲೂ ಏರಲಿಲ್ಲ. ಕೆಳಗೂ ಬೀಳಲಿಲ್ಲ. ಹಾಗೇ, ಓದಿನ ಬಂಡಿ ಓಡಿಸಿಕೊಂಡು ಹೋಗುತ್ತಿದ್ದೆ.

ಮೊದಲಿಂದಲೂ ನನಗೆ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಅಂದರೆ ಭಯ. ಅದರಲ್ಲೂ, ರಾಜ್ಯನೀತಿ ಶಾಸ್ತ್ರ, ಅರ್ಥಶಾಸ್ತ್ರ ಇದೆಯಲ್ಲ, ಆ ವಿಷಯಗಳು ತಲೆಗೇ
ಹೋಗುತ್ತಿರಲಿಲ್ಲ. ಈ ಭಯದಿಂದಲೇ ಸೈನ್ಸ್ ತಗೊಂಡೆ. ಡಿಗ್ರಿಯಲ್ಲಿ ಬಾಟ್ನಿ, ಜೂಯಾಲಜಿ, ಕೆಮೆಸ್ಟ್ರಿ ಕಾಂಬಿನೇಷನ್‌. ನಾನು ಡ್ರಾಯಿಂಗ್‌ ಬರೀತಾ ಇದ್ದುದರಿಂದ ಸಸ್ಯಶಾಸ್ತ್ರ, ಜೀವಸಾಸ್ತ್ರಗಳು ಇಷ್ಟ ಆಗೋದು.

ಇವತ್ತಿಗೂ ಯಾವುದಾದರೂ ಕೀಟಗಳನ್ನು ನೋಡಿದರೆ, ಜೀವಿ ಅನಿಸೋಲ್ಲ. ಅದರ ರಚನೆ ಹೇಗಿದೆ ಅಂತ ಕುತೂಹಲದಿಂದ ನೋಡ್ತೀನಿ. ನಮ್ಮ ತಾಯಿಗೆ ವಿದ್ಯಾಭ್ಯಾಸ ಕಡಿಮೆ. ಆದರೆ ಆಕೆಗೆ ಸಂಸ್ಕಾರ, ಮಾನವೀಯತೆ, ಅಂತಃಕರಣ ಜಾಸ್ತಿ. ಆಕೆ ಯಾರನ್ನೂ ನೋಯಿಸುತ್ತಿರಲಿಲ್ಲ. ಗಿಡ, ಮರಗಳು ಅಂದರೆ ಪ್ರೀತಿ. ಆಕೆ, ಮನೆ ಮುಂದಿದ್ದ ಗಿಡಗಳನ್ನು ಮಕ್ಕಳಂತೆ ದಿನಾ ಸವರಿ, ಮಾತನಾಡಿಸಿಕೊಂಡು ಬರುತ್ತಿದ್ದಳು. ಅಮ್ಮನ ಈ ಗುಣ ನನಗೂ ಬಂದುಬಿಟ್ಟಿತು. ಡಿಗ್ರಿಯಲ್ಲಿ ಈ ಕಾಂಬಿನೇಷನ್‌ ತೆಗೆದುಕೊಳ್ಳಲು ಅವಳು ಪರೋಕ್ಷವಾಗಿ ಕಾರಣಳಾದಳು.

ಹೀಗಿದ್ದ ನನ್ನ ಬದುಕಲ್ಲಿ ಫೇಲು ಎಂಬ ದುರ್ಘ‌ಟನೆ ಸಂಭವಿಸಿದ್ದು ಡಿಗ್ರಿ ಕೊನೆ ವರ್ಷದಲ್ಲಿ. ಕೆಮಿಸ್ಟ್ರಿ ವಿಷಯದಲ್ಲಿ ಫೇಲಾದೆ. ಜೀವನದ ಬಹು ದೊಡ್ಡ ಶಾಕ್‌ ಇದು. ಅಕ್ಕನಿಗೆ ಸ್ವಲ್ಪ ಬೇಜಾರಾಗಿತ್ತು. ಆ ಹೊತ್ತಿಗೆ ಅವಳಿಗೆ ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿತ್ತು. ನಾನು ಪದವಿ ಪೂರೈಸಿದ ಮೇಲೆ ಅಲ್ಲಿಗೆ ಎಳೆದುಕೊಳ್ಳುವ ಯೋಚನೆ ಇತ್ತು ಅನಿಸುತ್ತದೆ. ನಾನು ನೋಡಿದರೆ ಡುಮ್ಕಿ ಹೊಡೆದೆ. ಹೀಗಾಗಿ, ನಾಲ್ಕು ದಿನ ಮಾತುಬಿಟ್ಟಳು. ಅಮ್ಮನಿಗೆ ಏನೂ ಅರ್ಥವಾಗಲಿಲ್ಲ. ಪಾಪ, ಮಗ ಫೇಲಾಗಿದ್ದಾನೆ ಅಂತ ಕನಿಕರ ತೋರಿಸುತ್ತಿದ್ದಳು ಅಷ್ಟೇ.

Advertisement

ಖುಷಿಯ ವಿಚಾರ ಅಂದರೆ, ನನ್ನ ಸ್ನೇಹಿತರು ನನ್ನಂತೆಯೇ ಫೇಲಾಗಿದ್ದದ್ದು. ಸೋಲಿಗೆ ಸಿಕ್ಕ ಈ ಬೆಂಬಲ, ತಲೆಯಲ್ಲಿದ್ದ ಸಿನಿಮಾ ಹುಚ್ಚು ಎಲ್ಲವೂ ಡಿಗ್ರಿಯ ಸೋಲನ್ನೇ ಸೋಲಿಸಿಬಿಟ್ಟಿತು. ಆಮೇಲೆ, ನಾನು ವಿಟ್ಲದಲ್ಲಿ ಬೆನಕ ಪವರ್‌ ಪ್ರಸ್‌ಗೆ ಸೇರಿಕೊಂಡೆ. ಬೆಂಗಳೂರಲ್ಲಿ ಬ್ಯಾಂಕ್‌ ನಲ್ಲಿ ಕೆಲಸದಲ್ಲಿದ್ದ ನಮ್ಮಕ್ಕ ನನ್ನನ್ನೂ, ಅಮ್ಮನನ್ನೂ ಕರೆಸಿಕೊಂಡಳು. ಅಲ್ಲಿ ನಾನು ಜನವಾಹಿನಿ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರನಾದೆ. ತಿಂಗಳಿಗೆ 300 ರೂ. ಸಂಬಳ. ತಲೆಯಲ್ಲಿ ಸಿನಿಮಾ ಹುಚ್ಚಿನ ವಾಸ. ಆಗಾಗ, ಗಾಂಧಿನಗರದ ಸಿನಿಮಾ ವಿತರಕರ ಬಳಿ ಹೋಗಿ, ನಾನು ಹಾಡು ಬರೀತೀನಿ, ಕಥೆ ಬರೀತೀನಿ ಅವಕಾಶ ಕೊಡಿಸಿ ಅಂತ ಕೇಳಿಕೊಳ್ಳುತ್ತಿದ್ದೆ. ಅವರು ನನ್ನ ವೇದನೆ ನೋಡಿ, ವಿಳಾಸ ಪಡೆದು ಕಳುಹಿಸುತ್ತಿದ್ದರೇ ಹೊರತು, ಅವಕಾಶ ಮಾತ್ರ ಕೊಡುತ್ತಿರಲಿಲ್ಲ.

ಒಂದು ಸಲ ನಾನು ಕೆಲಸ ಮಾಡುತ್ತಿದ್ದ ಆಫಿಸಿಗೆ “ಶಂಖನಾದ’ ಚಿತ್ರದ ನಟ ಅರವಿಂದ್‌ ಬಂದಿದ್ದರು. ಹಿಂದಿನ ದಿನವಷ್ಟೇ “ಅಪರಿಚಿತ’ ಸಿನಿಮಾ ನೋಡಿ, ಕಾಶಿನಾಥರ ಸಿನಿಮಾ ಮಾಡುವ ಶೈಲಿಗೆ ಫಿದಾ ಆಗಿ, ಏನಾದರೂ ಮಾಡಿ ಅವರನ್ನು ಹಿಡಿಯಬೇಕಲ್ಲ ಎಂದುಕೊಳ್ಳುವ ಹೊತ್ತಿಗೆ ಅರವಿಂದ್‌ ಸಿಕ್ಕರು. ಅವರ ಹಿಂದೆ ಬಿದ್ದು, ಕಾಶೀನಾಥರ ಪರಿಚಯ ಮಾಡಿಕೊಂಡೆ. ಮುಂದೆ ನಿಧಾನಕ್ಕೆ ಸಿನಿಮಾ ರಂಗಕ್ಕೆ ಅಂಬೆಗಾಲಿಡುತ್ತಾ ಬಂದೆ… ಇವೆಲ್ಲ ಹೇಳಿದ್ದು ಏಕೆ ಎಂದರೆ, ನನ್ನ ಪದವಿಯಿಂದ ಯಾವತ್ತೂ ನನಗೆ ಕೆಲಸ ಸಿಗೋಲ್ಲ ಅನ್ನೋದು ನನಗೆ ಗೊತ್ತಿತ್ತು. ನನ್ನ ತಲೆಯಲ್ಲಿ ಆಗಲೇ ಸಿನಿಮಾ ಓಡುತ್ತಿತ್ತು. ಒಂದು ಪಕ್ಷ ನನ್ನ ಡಿಗ್ರಿ ನನಗೆ ಕೆಲಸ ಕೊಡಿಸಿದರೂ, ಅದರೊಂದಿಗೆ ಸಿನಿಮಾದಲ್ಲಿ ಏನಾದರೂ ಮಾಡುವ ನೀಲನಕ್ಷೆ ತಯಾರು ಮಾಡಿಕೊಂಡಿದ್ದೆ.

ನಾನು ಫೇಲಾದಾಗ ನೆರವಿಗೆ ಬಂದದ್ದು ಸಿನಿಮಾ ಹುಚ್ಚು. ಆ ಹುಚ್ಚು ಸೋಲಿನ ನೋವಿಗೆ ಮುಲಾಮಾಯಿತು. ಆದರೆ, ಯಾವ ಕಾರಣಕ್ಕೂ ಈಗಿನ ವಿದ್ಯಾರ್ಥಿಗಳಂತೆ ಆತ್ಮಹತ್ಯೆ, ಖನ್ನತೆ ಇವ್ಯಾವೂ ನನ್ನ ಹತ್ತಿರ ಸುಳಿಯಲೇ ಇಲ್ಲ. ನನಗೆ ಗೊತ್ತಿತ್ತು; ಇವತ್ತು ಕೈಗೆ ಸಿಗದ ಅಂಕ ನಾಳೆ ಸಿಕ್ಕೇ ಸಿಗುತ್ತದೆ ಅಂತ. ಆದರೆ, ಪ್ರಾಣ ಸಿಗಬೇಕಲ್ಲಾ ಹೀಗಾಗಿ, ಡಿಗ್ರಿಯಲ್ಲಿ ಫೇಲಾಗಿದ್ದು ಒಂಥರಾ ಒಳ್ಳೇದೇ ಆಯ್ತು. ಬದುಕು ಇನ್ನೊಂದು ಕಡೆಗೆ ಹೊರಳಲು, ಸಿನಿಮಾ ಹುಚ್ಚೇ ಬದುಕಾಗಲು ನೆರವಾಯಿತು.

ಫೇಲ್ಯೂರ್‌ಗಳು ಜೀವನದಲ್ಲಿ ಬರ್ತವೆ, ಹೋಗ್ತವೆ. ಅದೊಂಥರಾ ನಿಲ್ದಾಣದಲ್ಲಿ ಬಂದು ಹೋಗುವ ಪ್ರಯಾಣಿಕ ಇದ್ದಂತೆ. ನಾವು ಅದನ್ನು ಸೀರಿಯಸ್ಸಾಗಿ ತಗೊಂಡ್ರೆ, ನಮ್ಮನ್ನು ಅದೂ ಸೀರಿಯಸ್ಸಾಗಿ ತಗೊಳ್ತದೆ. ಆಗಲೇ ದುರಂತವಾಗೋದು. ಜೀವನದಲ್ಲಿ ಗೆದ್ದವರ ಕತೆ ಕೇಳಿ. ಅವರ ಬದುಕಿನ ಫೇಲ್‌ಗ‌ಳು ನಮಗಿಂತ ಕಠೊರ. ಆದರೆ, ಈಗ ಅವನ್ನು ನೋಡಿ ಅವರು ನಗ್ತಾರೆ. ಈ ರೀತಿ ನಗೋಕೆ ಮೊದಲು ನಾವು ಇರಬೇಕಲ್ಲಾ ಫಿಲ್‌ ದ ಫೇಲ್.

Advertisement

Udayavani is now on Telegram. Click here to join our channel and stay updated with the latest news.

Next