ಕೃಷ್ಣ ಸುಂದರಿ… ಅಚಾನಕ್ಕಾಗಿ ಎದುರಾಗಿ, ಬಚ್ಚಿಟ್ಟಿದ್ದ ಹಳೇ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟುಹೋದೆಯಲ್ಲೇ… ಬದುಕು ಸರಳ ಅಂದುಕೊಂಡಾಗೆಲ್ಲಾ, ಛಕ್ಕನೆ ಎದುರಾದ ಯಾವುದೋ ತಿರುವು, ಮತ್ತೆಲ್ಲೋ ಬಿಟ್ಟು ಬಂದಿದ್ದ ಮರೆವು, ಯಾವುದೋ ಬಣ್ಣದೊಳಗೆ ಅವಿತಿದ್ದ ಚೆಲುವು. ಮತ್ತಾವುದೋ ಕಣ್ಣೊಳಗೆ ಅಡಗಿದ್ದ ಒಲವು. ಈ ಎಲ್ಲ ನೆನಪುಗಳು ಕಿಡಿಯಂತೆ ಕಳೆದುಹೋಗಿದ್ದ ಅರೆ ಕ್ಷಣ, ಒಳಗೆಲ್ಲೋ ಹಿಡಿಹಿಡಿ ಬೆಳಕಾಗಿ ಕಾಣುತ್ತದೆ. ತಕ್ಷಣ, ಮುಗಿಯದ ಹಾದಿಯಿದೆ ಎಂದುಕೊಂಡು ನಡೆಯುವವನಿಗೆ ಕಡಲು ಎದುರಾಗಿ ಕಂಗೆಡಿಸುವಂತೆ, ಈ ಬದುಕ ಪಯಣ. ಅದರಲ್ಲಿ ನಿನ್ನ ನೆನಪು.
ಯಾಕೋ ನಿನ್ನೆದುರು ಮಾತಿಗಿಂತ ಮೌನ ಹೆಚ್ಚು ಮಾತಾಡುತ್ತದೆ ಅನ್ನಿಸಿತು. ಕಂಗೆಟ್ಟ ಕಡಲ ಎದುರು ನಿಂತವನಿಗೊಂದು ಹಾಯಿದೋಣಿ ಸಿಕ್ಕಂತೆ. ಅನೂಹ್ಯ ಕ್ಷಣವೊಂದು ಉಲ್ಲಾಸದ ಜತೆ ನಡೆದು ಬಂದು ಕೈ ಹಿಡಿದಂತೆ. ಏಕತಾನತೆಯ ಬದುಕಿನ ನೀಲಾಕಾಶದಲಿ ಕಾಮನಬಿಲ್ಲೊಂದು ಮೂಡಿಬಂದಂತೆ, ರಾತ್ರಿಯ ನೀರವತೆಯಲ್ಲಿನಕ್ಷತ್ರಗಳು ನಕ್ಕಂತೆ, ಹಗಲಿನ ಗಜಿಬಿಜಿಯ ಸಂತೆಯಲ್ಲೂ ಸ್ವಂತದೊಂದು ದ್ವೀಪ ಸಿಕ್ಕಂತೆ. ಖಾಲಿ ಖಾಲಿಯಿದ್ದ ಚಿತ್ತಭಿತ್ತಿಯಲ್ಲಿ ಹೊಸತೊಂದು ಚಿತ್ರ ಮೂಡಿದಂತೆ. ಬದುಕಿಗೆ ಏನೋ ವಿವರಿಸಲಾಗದ ಹೊಸ ಹುರುಪು, ಮನಸಿಗೆ ಬಣ್ಣಿಸಲಾಗದ ಹೊಸ ಹೊಳಪು,
ಇದೆಲ್ಲಾ ಹೇಗಾಯಿತು ಅಂತ ನನ್ನ ನಾನೇ ಕೇಳಿಕೊಳ್ಳುತ್ತಲೇ ಇದ್ದೇನೆ. ನನ್ನೊಳಗೆ ಇಷ್ಟೊಂದು ಆಳವಾಗಿ ನೀ ಇದ್ದೀಯೆಂಬುದ ತಿಳಿಸಲು ನೀನೇ ಎದುರಿಗೆ ಬರಬೇಕಾಯ್ತು ನೋಡು. ಕಾಲವೆಂಬುದು ಎಂಥಾ ಕ್ರೂರಿಯಲ್ಲವಾ? ಅದು ಸುಳ್ಳು ಸುಳ್ಳೇ ಮರೆವಿನ ಶಾಪ ಕೊಟ್ಟಂತೆ ನಾಟಕವಾಡಿ, ನೆನಪುಗಳ ಬುತ್ತಿಯನ್ನು ಕೈಗಿಟ್ಟುಹೋಗುತ್ತದೆ. ಬದುಕಿನ ಪಯಣದ ಹಾದಿಯಲ್ಲಿ ಇವತ್ತಿನ ಹಸಿವುನೀಗಿಕೊಳ್ಳಲು ಬುತ್ತಿ ಬಿಚ್ಚಿದರೆ, ನೆನಪುಗಳ ಪಕ್ವಾನ್ನ. ನನ್ನ ಪಾಲಿನ ಬದುಕೇ ಹೀಗಿರುವಾಗ, ನಿನ್ನನ್ನು ಮರೆಯುವುದಾರೂ ಹೇಗೆ ಹೇಳು?
-ಜೀವ ಮುಳ್ಳೂರು