ದೋಟಿಹಾಳ: ಸದ್ಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದರಿಂದ ಗ್ರಾಮದ ಸುತ್ತಮುತ್ತಲ ಪ್ರದೇಶದ ರೈತರು ತೊಗರೆ ಬೆಳೆ ಬೆಳೆದಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗೆ ಕಾಯಿಕೊರಕ ಕೀಟ ಬಾಧೆ ಕಾಣಿಕೊಂಡಿದರಿಂದ ರೈತರು ಆತಂಕಗೊಂಡಿದ್ದಾರೆ.
ಈ ಭಾಗದ ಗೋತಗಿ, ತೊನಸಿಹಾಳ, ತೊನಸಿಹಾಳ ತಾಂಡಾ, ಕಲಕೇರಿ, ಕಡೇಕೊಪ್ಪ, ಮೇಣಸಗೇರಿ, ಕಿಡದೂರ, ಕಳಮಳ್ಳಿ, ಮುದೇನೂರ, ದೋಟಿಹಾಳ ಹಾಗೂ ಇನ್ನಿತರ ಪ್ರದೇಶದಲ್ಲಿ ಹೆಚ್ಚಾಗಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಕಿಡದೂರು, ಕಳಮಳ್ಳಿ ಭಾಗದಲ್ಲಿ ಎರೆ ಭೂಮಿ ಇದೆ. ಹೆಚ್ಚಿನ ಪ್ರಮಣದಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಈ ಭೂಮಿಯಲ್ಲಿ ಕಳೆದ 8-10 ವರ್ಷಗಳಿಂದ ರೈತರು ತೊಗರಿ ಬೆಳೆ ಬೆಳೆಯುತ್ತಿದ್ದಾರೆ.
ಕಳೆದ ವರ್ಷಕಿಂತ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆ ಚೇತರಿಕೆ ಕಂಡಿತ್ತು. ಕೆಲವೆಡೆ ಬೆಳೆ ಹೂವು ಬಿಟ್ಟಿದೆ. ಇನ್ನೂ ಕೆಲವು ಕಡೆ ಕಾಯಿ ಬಿಡುವ ಹಂತದಲ್ಲಿದೆ. ಆದರೆ ಒಂದು ವಾರದಿಂದ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿದೆ. ಇದರಿಂದ ತೊಗರಿ ಬೆಳೆಯನ್ನು ರಕ್ಷಿಸಿಕೊಳ್ಳಲು ವಿವಿಧ ಔಷಧ ಸಿಂಪರಣೆ ಮಾಡಲಾಗುತ್ತಿದೆ.
ದೋಟಿಹಾಳ ಹೋಬಳಿಯಲ್ಲಿ ಪ್ರಸಕ್ತ ಮುಂಗಾರ ಹಂಗಾಮಿನಲ್ಲಿ ಸುಮಾರು 1800-1900 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.ಕಾಯಿಕೊರಕ ಕೀಟ ಹತೋಟಿಗೂ ಮೊದಲು ರೈತರು ಬೇವಿನ ಎಣ್ಣೆ ಸಿಂಪಡಿಸಬೇಕು. ನಂತರ ಪ್ರನೋಪಾಸ್ ಔಷಧವನ್ನು ಸಿಂಪಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರನೋಪಾಸ್ ಔಷಧ ಮಾರಲಾಗುತ್ತದೆ ಹಾಗೂ ರೈತರಿಗೆರಿಯಾಯಿತಿ ದರದಲ್ಲಿ ಸಿಂಪರಣೆ ಯಂತ್ರಗಳನ್ನೂ ನೀಡಲಾಗುತ್ತಿದೆ
. –ಮಹಾದೇವಪ್ಪ, ಸಹಾಯಕ ಕೃಷಿ ನಿರ್ದೇಶಕ, ಕುಷ್ಟಗಿ
ಸದ್ಯ ಮಳೆಯಿಂದ ತೊಗರಿ ಬೆಳೆಗೆ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ರೈತರು ಔಷಧ ಖರೀದಿ ಪ್ರಮಾಣ ಹೆಚ್ಚಾಗಿದೆ.
–ಕಳಕಪ್ಪ ಗೌಡರ, ಕೀಟನಾಶಕ ಅಂಗಡಿ ಮಾಲೀಕ
ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಾಗೂ ಮುಸುಕಿನ ವಾತಾವರಣದಿಂದ ತೊಗರಿ ಬೆಳೆಗೆ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿ ಕಾಣಿಕೊಂಡಿದೆ. ಹೀಗಾಗಿ ಔಷಧ ಸಿಂಪರಣೆ ಮಾಡಲು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.
ರಾಮಣ್ಣ ಕಮಲಾಪೂರು, ಕಳಮಳ್ಳಿ ರೈತ
-ಮಲ್ಲಿಕಾರ್ಜುನ ಮೆದಿಕೇರಿ