ಕುದೂರು: ವರಮಹಾಲಕ್ಷ್ಮೀ ಹಬ್ಬ ಹತ್ತಿರ ಬರುತ್ತಿದ್ದಂತೆ ಉತ್ತಮ ವ್ಯಾಪಾರ ಮಾಡುವ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ವೀಳ್ಯದೆಲೆಗೆ ಬಿಳಿಹುಳು ಕಾಟ ಹೆಚ್ಚಾಗಿದೆ. ಇದರಿಂದ ವೀಳ್ಯದೆಲೆಗಳು ಉದುರಿ ಹೋಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಕೀಟ ಬಾಧೆಯಿಂದ ರೈತರಿಗೆ ನಿರಾಸೆ: ಕುದೂರು ಹೋಬಳಿಯ ಕಾಗಿಮಡು, ರಂಗಯ್ಯನಪಾಳ್ಯದ ಸುತ್ತಮುತ್ತ ವೀಳ್ಯದೆಲೆ ತೋಟಗಳಿಗೆ ರೋಗ ಅವರಿಸಿಕೊಂಡ ಕಾರಣ ಬಳ್ಳಿಯ ಕಾಂಡಗಳು ಕೊಳೆಯುತ್ತಿವೆ. ಬಿಳಿ ಹುಳುಗಳು ಎಲೆಯೊಳಗೆ ಗೂಡು ಕಟ್ಟಿ ಹಂತ ಹಂತವಾಗಿ ಕಾಂಡವನ್ನು ತಿನ್ನುತ್ತಿರುವುದರಿಂದ ವೀಳ್ಯದೆಲೆ ಉದುರುವುದರ ಜೊತೆಗೆ ಬಳ್ಳಿಗಳು ಒಣಗುತ್ತಿರುವುದರಿಂದ ರೈತರು ಚಿಂತಜನಕರಾಗಿದ್ದಾರೆ.
ಪ್ರತಿ ನಿತ್ಯ ಒಂದು ವೀಳ್ಯದೆಲೆ ಹಂಬಿನಿಂದ ಸುಮಾರು 300ರಿಂದ 400 ರೂ. ಲಾಭಗಳಿಸುತ್ತಿದ್ದ ರೈತರು, ವರಮಹಾಲಕ್ಷ್ಮೀ ಹಬ್ಬದಲ್ಲಿ ಉತ್ತಮ ವ್ಯಾಪಾರ ಮತ್ತು ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಕೀಟ ಬಾಧೆಯಿಂದ ರೈತರಿಗೆ ನಿರಾಸೆ ಮೂಡಿಸಿದೆ.
ಮೊದಲ ಬಾರಿಗೆ ಕೀಟ ಬಾಧೆ: 20 ವರ್ಷಕ್ಕೆ ಇದೇ ಮೊದಲ ಬಾರಿಗೆ ವೀಳ್ಯದೆಲೆಗೆ ಕೀಟ ಬಾಧೆ ಕಾಣಿಸಿದೆ. ವೀಳ್ಯದೆಲೆ ಬರುತ್ತಿಲ್ಲ, ಬಳ್ಳಿ ಚಿಗುರುತ್ತಿಲ್ಲ ಹಾಗೂ ಬಳ್ಳಿ ಹಬ್ಬುತ್ತಲೂ ಇಲ್ಲ. ಇದರ ನಿಯಂತ್ರಣ ಹೇಗೆ ಎಂದು ತೋಚದೆ ರೈತರು ವೀಳ್ಯದೆಲೆ ಬಳ್ಳಿಗಳನ್ನು ಬುಡಸಮೇತ ಕಿತ್ತು ಹಾಕುತ್ತಿದ್ದಾರೆ.
ವೀಳ್ಯದೆಲೆಗೆ ಹೆಚ್ಚಿನ ಬೇಡಿಕೆ: ರಂಗಯ್ಯನಪಾಳ್ಯದ ರೈತರು ಬೆಳೆಯುವ ವೀಳ್ಯದೆಲೆಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರು, ತುಮಕೂರು, ಮೈಸೂರು, ಧರ್ಮಪುರಿ ಭಾಗದಿಂದ ವೀಳೆದಲೆ ಖರೀದಿಸಲು ಇಲ್ಲಿಗೆ ಬರುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬಕ್ಕೆ ವ್ಯಾಪಾರ ಕುದುರಿಸಿಕೊಂಡು ಹೋಗೋಣ ಎಂದು ಬರುತ್ತಿರುವ ವ್ಯಾಪಾರಿಗಳಿಗೆ ವೀಳ್ಯದೆಲೆ ಪರಿಸ್ಥಿತಿ ನೋಡಿ, ವಾಪಾಸ್ಸಾಗುತ್ತಿರುವುದರಿಂದ ರೈತರಿಗೆ ಚಿಂತಾಜನಕವಾಗಿದೆ.
ಕೀಟ ಬಾಧೆ ನಿಯಂತ್ರಣಕ್ಕೆ ಹರಸಾಹಸ: ವೀಳ್ಯದೆಲೆ ತಗುಲಿರುವ ಕೀಟ ಬಾಧೆ ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಂಗಯ್ಯನಪಾಳ್ಯದ ಸುತ್ತಮುತ್ತ ಇರುವ ತೋಟಗಳಿಗೆ ಭೇಟಿ ನೀಡಿ, ಹುಳುಗಳ ನಿಯಂತ್ರಣಕ್ಕೆ ಸಲಹೆ ನೀಡುವ ಮೂಲಕ ರೈತರ ಕಷ್ಟವನ್ನು ದೂರ ಮಾಡಬೇಕಿದೆ ಎಂದು ರಂಗಯ್ಯನಪಾಳ್ಯದ ರೈತ ವಿಜಯಕುಮಾರ್ ತಿಳಿಸಿದ್ದಾರೆ.
● ಕೆ.ಎಸ್.ಮಂಜುನಾಥ್ ಕುದೂರು