ಚಳ್ಳಕೆರೆ: ತಾಲೂಕಿನ ದೊಡ್ಡ ಉಳ್ಳಾರ್ತಿ ಗೋಶಾಲೆಗೆ ಮೇವು ನೀಡಬೇಕು ಎಂದು ಒತ್ತಾಯಿಸಿ ರೈತರು ಜಾನುವಾರುಗಳೊಂದಿಗೆ ರಸ್ತೆ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖೀಲ ಭಾರತ ಕಿಸಾನ್ ಸಭಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಾನುವಾರುಗಳಿಗೆ ತಿನ್ನಲು ಮೇವಿಲ್ಲದೆ ನಿತ್ರಣಗೊಂಡಿವೆ. ಮೇವು ಪೂರೈಸುವಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಕ್ಕೆ ಲಿಖೀತ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಸರಬರಾಜು ಮಾಡಿರುವ ಮೇವು ಗುತ್ತಿಗೆದಾರರಿಗೆ ಸರ್ಕಾರ ನೀಡಬೇಕಾದ ಬಾಕಿಯನ್ನು ಪಾವತಿಸಿಲ್ಲ. ಗುತ್ತಿಗೆದಾರರು ಮೇವು ತರಲು ನಿರಾಕರಿಸಿದ್ದಾರೆ. ಜಾನುವಾರುಗಳು ಗೋಶಾಲೆಯಲ್ಲಿ ಅಸುನೀಗಿದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ಹೊರಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಟಿ.ಸಿ. ಕಾಂತರಾಜು ಪ್ರತಿಭಟನಕಾರರೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಮಳೆಯಿಲ್ಲದೆ ಮೇವಿನ ಕೊರತೆ ಉಂಟಾಗಿದೆ. ಜಾನುವಾರುಗಳನ್ನು ರಕ್ಷಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಬಾಕಿ ಇರುವ ಹಣ ಸರ್ಕಾರ ಬಿಡುಗಡೆ ಮಾಡಿದ ಕೂಡಲೇ ಗುತ್ತಿಗೆದಾರರನ್ನು ಕರೆಸಿ ಮೇವು ಪೂರೈಸಲು ಸೂಚನೆ ನೀಡಲಾಗುವುದು ಎಂದರು.
ತಾತ್ಕಾಲಿಕವಾಗಿ 16 ಕೋಟಿ ರೂ. ಬಾಕಿಯಲ್ಲಿ 5 ಕೋಟಿ ರೂ. ಜಿಲ್ಲಾಡಳಿತಕ್ಕೆ ತಲುಪಿದೆ. ನೂತನ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದು, ಎರಡೂರು ದಿನಗಳಲ್ಲಿ ಇಲ್ಲಿನ ಪರಿಸ್ಥಿತಿ ತಿಳಿಸಿ ಹಣ ಬಿಡುಗಡೆ ಮಾಡಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು ಮೇವು ಪೂರೈಸುವ ತನಕ ಬಾರ್ಕ್ ಸಂಸ್ಥೆಯ ಒಳ ಆವರಣದಲ್ಲಿ ಜಾನುವಾರುಗಳನ್ನು ಮೇಯಲು ಅವಕಾಶ ಮಾಡಿಕೊಡಬೇಕು. ಮಳೆ ಬಂದಲ್ಲಿ ಗೋಶಾಲೆಗಳಲ್ಲಿನ ಎಲ್ಲ ಜಾನುವಾರುಗಳು ಖಾಲಿಯಾಗುತ್ತವೆ ಎಂದರು. ಇದಕ್ಕೆ
ಧ್ವನಿಗೂಡಿಸಿದ ತಹಶೀಲ್ದಾರ್ ಕಾಂತರಾಜು ಬಾರ್ಕ್ ಸಂಸ್ಥೆಯ ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ತಿಳಿಸಿ ಅನುಮತಿ ನೀಡುವಂತೆ ಮನವಿ ಮಾಡಿದರು. ತಹಶೀಲ್ದಾರ್ ಕೋರಿಕೆ ಮೇರೆಗೆ ಪ್ರಭಾರ ವ್ಯವಸ್ಥಾಪಕ ಸಾಯಿಕುಮಾರ್ ಮಾತನಾಡಿ, ಇದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಅವರ ಅನುಮತಿ ಸಿಕ್ಕ ನಂತರ ಜಾನುವಾರುಗಳನ್ನು ಮೇಯಲು ಬಿಡಲಾಗುವುದು.ಇದಕ್ಕೆ ಬಾರ್ಕ್ ಸಂಸ್ಥೆ ವಿಧಿಸುವ ಷರತ್ತುಗಳಿಗೆ ರೈತರು ಒಪ್ಪಿಗೆ
ನೀಡಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಜಿಲ್ಲಾ ಆಡಳಿತ ತಾಲೂಕಿನ ಎಲ್ಲ ಗೋಶಾಲೆಗಳನ್ನು ಮುಚ್ಚದೆ ಸಾಧ್ಯವಾದಷ್ಟು ಮಟ್ಟಿಗೆ ಮೇವು ಸರಬರಾಜು ಮಾಡಿ, ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷ ಗೋವಿಂದರಾಜು,
ಗ್ರಾಮದ ಮುಖಂಡರಾದ ಕರಿಯಣ್ಣ, ಶ್ರೀಕಂಠಮೂರ್ತಿ, ದುಗ್ಗಾವರ ರಂಗಣ್ಣ, ವರವಿನ ಬೋರಯ್ಯ, ತಿಮ್ಮಾರೆಡ್ಡಿ, ಗಂಗಾಧರ, ಓಂಕಾರಪ್ಪ, ನಾಗರಾಜು, ಬೋರಯ್ಯ, ವರದರಾಜು, ಓಬಯ್ಯ, ಚನ್ನಕೇಶವ ಮೂರ್ತಿ, ಅಜ್ಜಯ್ಯ ಇತರರು ಇದ್ದರು.