ಎಚ್.ಡಿ.ಕೋಟೆ: ಶಿಕ್ಷಣ ಇಲಾಖೆ ಎಷ್ಟೆಲ್ಲಾ ಕಠಿಣ ಕಾನೂನು ರೂಪಿಸಿದ್ದರೂ ಖಾಸಗಿ ಶಾಲೆಗಳ ವಸೂಲಿ ದಂಧೆ ನಿಲ್ಲುತ್ತಿಲ್ಲ. ಯಾವ ಶಾಲೆ ಕೂಡ ನಿಯಮಗಳನ್ನು ಪಾಲಿಸುತ್ತಿಲ್ಲ. ಪೋಷಕರ ಮುಗªತೆಯನ್ನು ಬಂಡವಾಳ ಮಾಡಿಕೊಂಡು ಬೇಕಾಬಿಟ್ಟಿ ವಸೂಲಿಗೆ ನಿಂತಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ಹದಿನೈದು ದಿನಗಳ ಹಿಂದೆ ಖಾಸಗಿ ಶಾಲೆಗಳು ನಿಗದಿಪಡಿಸಿದ ಶುಲ್ಕ ಹಾಗೂ ಆರ್‌ಟಿಇ ಕಾಯ್ದೆ ಪಾಲನೆ ಬಗ್ಗೆ ಸುತ್ತೋಲೆ ಹೊರಡಿಸಿದರೂ ತಾಲೂಕಿನಲ್ಲಿ ಪಾಲನೆಯಾಗುತ್ತಿಲ್ಲ.
ಸುತ್ತೋಲೆ: ಕಳೆದ ಹದಿನೈದು ದಿನಗಳ ಹಿಂದೆ ರಾಜ್ಯಾದ್ಯಂತ ಇರುವ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶುಲ್ಕದ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಜೊತೆಗೆ ಅದರ ಪ್ರತಿಯೊಂದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೀಡಿ ಸಂಬಂಧಪಟ್ಟ ಅಧಿಕಾರಿಯಿಂದ ದೃಢೀಕರಿಸಿದ ಶುಲ್ಕದ ಸ್ವ-ವಿವರವನ್ನು ಮಕ್ಕಳ ಪೋಷಕರಿಗೆ ಗೋಚರಿಸುವಂತೆ 6*10 ಫ್ಲೆಕ್ಸ್‌ನಲ್ಲಿ ಮುದ್ರಿಸಿ ಏ.15 ರೊಳಗೆ ತಮ್ಮ ಶಾಲೆಯ ಆವರಣದಲ್ಲಿ ಅಳವಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.
ನಿಯಮಗಳ ಉಲ್ಲಂಘನೆ: ಸುತ್ತೋಲೆ ಹೊರಡಿಸಿ ತಿಂಗಳು ಸಮೀಪಿಸುತ್ತಿದ್ದರೂ ತಾಲೂಕಿನ ಯಾವ ಖಾಸಗಿ ಶಾಲೆಗಳು ಪಾಲಿಸುತ್ತಿಲ್ಲ. ಇನ್ನು ತಾಲೂಕಿನಲ್ಲಿ 31 ಪ್ರಾಥಮಿಕ ಮತ್ತು 18 ಪ್ರೌಢಶಾಲೆ ಸೇರಿ 49 ಖಾಸಗಿ ಶಾಲೆಗಳಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ದಾಖಲಾತಿ ಪ್ರಾರಂಭಿಸಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಗಾಳಿಗೆ ತೋರಿ ತಮ್ಮಗಿಷ್ಟ ಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಈ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮವಹಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಆರ್ಹ ಶಿಕ್ಷಕರನ್ನು ನೇಮಿಸಿ: ಎಲ್ಲಾ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಕಾಯ್ದೆಯಡಿ ಆರ್ಹ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲೆ ನಿಗದಿಪಡಿಸಿರುವ ಶುಲ್ಕಕ್ಕೆ ಅನುಗುಣವಾಗಿ ಆರ್‌ಟಿಇ ಕಾಯ್ದೆ ಅನ್ವಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ವೇತನ ನೀಡಬೇಕು. ಆರ್‌ಟಿಇ ಕಾಯ್ದೆಯನ್ನು ಉಲ್ಲಂಘಿಸಿದರೆ ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಶಾಲೆಗಳ ವ್ಯವಸ್ಥಾಪಕ ಮಂಡಳಿಗೆ ಎಚ್ಚರಿಕೆ ನೀಡಿದ್ದರೂ ತಾಲೂಕಿನ ಯಾವ ಖಾಸಗಿ ಶಾಲೆಗಳಲ್ಲಿಯೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಆರ್‌ಟಿಇ ಕಾಯ್ದೆಯಡಿ ವೇತನ ನೀಡುತ್ತಿಲ್ಲ.
ಜೊತೆಗೆ ಕೆಲ ಶಾಲೆಗಳಲ್ಲಿ ಕಾಯ್ದೆಯಡಿ ಆರ್ಹ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳದೇ, ಅನನುಭವಿ ಶಿಕ್ಷಕರಿಗೆ ಕಡಿಮೆ ವೇತನ ನೀಡಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ತಾಲೂಕಿನಾದ್ಯಂತ ಪೋಷಕರಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲು ಮುಂದಾಗದೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಪ್ಪಟ ಪ್ರವೇಶಾತಿ ಶುಲ್ಕ: ತಾಲೂಕಿನಲ್ಲಿರುವ ಬಹುತೇಕ ಎಲ್ಲಾ ಖಾಸಗಿ ಶಾಲೆಗಳು ವಾರ್ಷಿಕವಾಗಿ ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೆ ಪ್ರವೇಶಾತಿ ಶುಲ್ಕ ಪಡೆಯುತ್ತಿರುವುದು ಕಂಡು ಬಂದಿದೆ. ಇನ್ನಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರತಂದಿರುವ ಕಾಯ್ದೆಯನ್ನು ಪಾಲನೆ ಮಾಡದ, ಶಿಕ್ಷಣ ಇಲಾಖೆಯ ಸುತ್ತೋಲೆಗೆ ಕಿಮ್ಮತ್ತು ನೀಡದ ಖಾಸಗಿ ಶಾಲೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಎಲ್ಲಾ ಖಾಸಗಿ ಶಾಲೆಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಕ್ಕಳ ಪ್ರವೇಶಾತಿ ವೇಳೆ ದೃಢೀಕರಿಸಿದ ಶುಲ್ಕವನ್ನೇ ಪಡೆಯಬೇಕು. ಒಂದು ವೇಳೆ ಹೆಚ್ಚಿನ ಶುಲ್ಕ ಕಟ್ಟಿಸಿಕೊಂಡಿರುವ ಬಗ್ಗೆ ಏನಾದರೂ ಪೋಷಕರಿಂದ ದೂರು ಬಂದಲ್ಲಿ ಅಂತಹ ಶಾಲೆಗಳ ಮೇಲೆ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಡೇರಾ ಕಮಿಟಿ ಮುಂದೆ ಮಂಡಿಸಲಾಗುವುದು.
-ಎಸ್.ಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ
* ಬಿ.ನಿಂಗಣ್ಣಕೋಟೆ