Advertisement

ದಾಖಲೆ ಪ್ರಶಸ್ತಿ ನಿರೀಕ್ಷೆಯಲ್ಲಿ ಫೆಡರರ್‌

03:50 AM Jul 14, 2017 | Team Udayavani |

ಲಂಡನ್‌: ಏಳು ಬಾರಿಯ ಚಾಂಪಿ ಯನ್‌ ಸ್ವಿಟ್ಸರ್‌ಲ್ಯಾಂಡಿನ ರೋಜರ್‌ ಫೆಡರರ್‌ ಅವರು 12ನೇ ಬಾರಿ ವಿಂಬಲ್ಡನ್‌ ಟೆನಿಸ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದ್ದಾರೆ. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌  ಪಂದ್ಯದಲ್ಲಿ ಅವರು ಮಿಲೋಸ್‌ ರೋನಿಕ್‌ ಅವರನ್ನು ನೇರ ಸೆಟ್‌ಗಳಿಂದ ಕೆಡಹಿದ್ದಾರೆ. 

Advertisement

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ತನ್ನ 100ನೇ ಪಂದ್ಯವನ್ನಾಡಲಿರುವ 35ರ ಹರೆಯದ ಫೆಡರರ್‌ ಶುಕ್ರವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ 2010ರ ರನ್ನರ್‌ ಅಪ್‌ ಥಾಮಸ್‌ ಬೆರ್ಡಿಶ್‌ ಅವರನ್ನು ಎದುರಿಸಲಿದ್ದಾರೆ. ಬೆರ್ಡಿಶ್‌ ವಿರುದ್ಧ ಫೆಡರರ್‌ 18 ಗೆಲುವು ಮತ್ತು 6 ಸೋಲಿನ ದಾಖಲೆ ಹೊಂದಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಬೆರ್ಡಿಶ್‌ ಅವರ ಎದುರಾಳಿ ಮೂರು ಬಾರಿಯ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಬಲ ಮೊಣಕೈಯ ಗಾಯದಿಂದಾಗಿ ಪಂದ್ಯ ತ್ಯಜಿಸಿದ್ದರಿಂದ ಮುನ್ನಡೆದಿದ್ದರು. ಜೊಕೋವಿಕ್‌ ಪಂದ್ಯ ತ್ಯಜಿಸಿದಾಗ ಬೆರ್ಡಿಶ್‌ 7-6 (7-2), 2-0 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದರು. ಒಂದು ವೇಳೆ ಜೊಕೋವಿಕ್‌ ಇಲ್ಲಿ ಪ್ರಶಸ್ತಿ ಜಯಿಸಿದ್ದರೆ ನೂತನ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸುವ ಸಾಧ್ಯತೆಯಿತ್ತು.

ಇನ್ನೊಂದು ಸೆಮಿಫೈನಲ್‌ ಪಂದ್ಯವು ಸ್ಯಾಮ್‌ ಕ್ವೆರಿ ಮತ್ತು ಮರಿನ್‌ ಸಿಲಿಕ್‌ ಅವರ ನಡುವೆ ನಡೆಯ ಲಿದೆ. ಕ್ವೆರಿ ಅವರು ವಿಶ್ವದ ನಂಬರ್‌ ವನ್‌ ಬ್ರಿಟನ್‌ನ ಆ್ಯಂಡಿ ಮರ್ರೆ ಅವರಿಗೆ ಸೋಲುಣಿಸಿದ್ದರೆ ಸಿಲಿಕ್‌ ಅವರು ರಫೆಲ್‌ ನಡಾಲ್‌ ಅವರನ್ನು ಕೆಡಹಿದ್ದ ಗಿಲ್ಲಿಸ್‌ ಮುಲ್ಲರ್‌ ಅವರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಸೋಲಿಸಿದ್ದರು.

ಫೆಡರರ್‌ ಫೇವರಿಟ್‌: ವಿಶ್ವ ಖ್ಯಾತರಾದ ನಂಬರ್‌ ವನ್‌ ಆ್ಯಂಡಿ ಮರ್ರೆ. ಜೊಕೋವಿಕ್‌ ಮತ್ತು ನಡಾಲ್‌ ಮುಂತಾದವರು ಈಗಾಗಲೇ ಸೋಲನ್ನು ಕಂಡಿರುವ ಕಾರಣ ಫೆಡರರ್‌ ದಾಖಲೆ ಎಂಟನೇ ಬಾರಿ ವಿಂಬಲ್ಡನ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಟಗಾರರಾಗಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ರೋನಿಕ್‌ ಅವರನ್ನು 6-4, 6-2, 7-6 (7-4) ಸೆಟ್‌ಗಳಿಂದ  ಫೆಡರರ್‌ ಅವರು ಕೆನ್‌ ರೋಸ್‌ವೆಲ್‌ ಬಳಿಕ ಇಲ್ಲಿ ಸೆಮಿಫೈನಲಿಗೇರಿದ ಅತೀ ಹಿರಿಯ ಆಟಗಾರರಾಗಿದ್ದಾರೆ. ರೋಸ್‌ವೆಲ್‌ 1974ರಲ್ಲಿ ತನ್ನ 39ನೇ ಹರೆಯದಲ್ಲಿ ಸೆಮಿಫೈನಲ್‌ ತಲುಪಿದ್ದರು.

100ನೇ ಪಂದ್ಯ, ನನಗೆ ನಂಬಲಿಕ್ಕೆ ಸಾಧ್ಯವಾಗು ತ್ತಿಲ್ಲ. ಇದೊಂದು ಶ್ರೇಷ್ಠ ಅನುಭವ ಎಂದು ಫೆಡರರ್‌ ಹೇಳಿದ್ದಾರೆ. ಇಷ್ಟು ವರ್ಷಗಳವರೆಗೆ ಶ್ರೇಷ್ಠಮಟ್ಟದ ಆಟ ಪ್ರದರ್ಶಿಸಲು ನನ್ನ ದೇಹ ಸಹಕರಿಸಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಆಟದ ಗುಣಮಟ್ಟದಿಂದ ಖುಷಿಯಾಗಿದೆ. ಇಲ್ಲಿನ ಪರಿಸ್ಥಿತಿ, ಹವಾಮಾನ ನನ್ನ ಆಟಕ್ಕೆ ಸಹಕರಿಸುತ್ತಿದೆ ಎಂದು ಫೆಡರರ್‌ ಹೇಳಿದ್ದಾರೆ.
ಕೆನಡದ ಆರನೇ ಶ್ರೇಯಾಂಕದ ರೋನಿಕ್‌ 2016ರ ಸೆಮಿಫೈನಲ್‌ನಲ್ಲಿ ಫೆಡರರ್‌ ಅವರನ್ನು ಸೋಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next