ಉಡುಪಿ: ಅಂಚೆ ಇಲಾಖೆಯ ಸೇವೆ ಮಹತ್ವದ್ದಾಗಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ರವಿವಾರ ಉಡುಪಿಯ ಮಥುರಾ ಕಂಫರ್ಟ್ಸ್ನ ಜಯಕೃಷ್ಣ ಸಭಾಭವನದಲ್ಲಿ ಜರಗಿದ ಅಂಚೆ ನೌಕರರ ರಾಷ್ಟ್ರೀಯ ಸಂಘಗಳ ಒಕ್ಕೂಟದ 11ನೇ ಬಹಿರಂಗ ಅಧಿವೇಶನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಂಚೆ ಇಲಾಖೆಯು ಹೊಂದಾಣಿಕೆ ಮಾಡಿಕೊಂಡು ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇಂತಹ ಅನುಭವ ನಮಗೂ ಆಗಿದೆ. ಮಠದಿಂದ ಅಂಚೆ ಮೂಲಕ ಕಳುಹಿಸಬೇಕಾಗಿರುವ ಪುಸ್ತಕಗಳನ್ನು ಕೆಲವೊಮ್ಮೆ ತರಾತುರಿಯಲ್ಲಿ ಕೊನೆಯ ಗಳಿಗೆಯಲ್ಲಿ ಅಂಚೆ ಕಚೇರಿಗೆ ತಲುಪಿಸಿದರೂ ಅಂಚೆ ಇಲಾಖೆ ಹೊಂದಾಣಿಕೆ ಮಾಡಿಕೊಂಡು ಅದನ್ನು ಸಕಾಲದಲ್ಲಿ ನಿರ್ದಿಷ್ಟ ಸ್ಥಳಗಳಿಗೆ ತಲುಪಿಸಿದೆ. ಅಂಚೆ ನೌಕರರ ಬೇಡಿಕೆಗಳಿಗೆ ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಶ್ರೀಗಳು ಹೇಳಿದರು.
ಅಧಿವೇಶನ ಸ್ವಾಗತ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಪೋಸ್ಟಲ್ ಸರ್ವೀಸಸ್ ಬೋರ್ಡ್‌ನ ಆಪರೇಷನ್ಸ್ ವಿಭಾಗದ ಸದಸ್ಯೆ ಅರುಂಧತಿ ಘೋಷ್, ರಾಜ್ಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ, ಎಸ್.ಕೆ. ರೀಜನ್‌ನ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ ಭಟ್, ಸುಧಾಕರ ಜಿ.ದೇವಾಡಿಗ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಎನ್. ರಹಾತೆ, ಒಕ್ಕೂಟದ ಪ್ರಮುಖರಾದ ಡಿ. ತ್ಯಾಗರಾಜನ್, ಡಿ. ಕಿಶನ್ ರಾವ್, ಶಿವಾಜಿ ವಾಸಿ ರೆಡ್ಡಿ, ಪಿ.ಯು.ಮುರಳೀಧರನ್, ಪಿ.ಡಿ. ಭವಿಕರ್, ರಾಕR…àಶ ಭಟಿಯಾ, ಕೆ. ಶಿವದಾಸನ್ ಉಪಸ್ಥಿತರಿದ್ದರು.
ವಲಯ ಕಾರ್ಯದರ್ಶಿ ಬಿ. ಶಿವಕುಮಾರ್ ಸ್ವಾಗತಿಸಿ, ವಿಭಾಗೀಯ ಕಾರ್ಯದರ್ಶಿ ಸುರೇಶ್ ಕೆ. ಪ್ರಸ್ತಾವನೆಗೈದರು. ರಾಮಕೃಷ್ಣ ಜೋಷಿ ಮತ್ತು ವಿಜಯಾ ವಿ. ಶೆಣೈ ಕಾರ್ಯಕ್ರಮ ನಿರ್ವಹಿಸಿದರು.