ನವದೆಹಲಿ: ವರದಕ್ಷಿಣೆಗೆ ಸಂಬಂಧಿಸಿದ ಜಗಳದಲ್ಲಿ ಪತ್ನಿಯನ್ನೇ ಗುಂಡಿಕ್ಕಿ ಹತ್ಯೆಗೈದು, ಆಕೆಯ ಶವವನ್ನು ಹರ್ಯಾಣ ಸಮೀಪದ ಪಾಣಿಪತ್ ನಲ್ಲಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಪತಿ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಸಂತ್ರಸ್ತೆಯ ಪತಿ ಸಾಹಿಲ್ ಚೋಪ್ರಾ (21ವರ್ಷ), ಆತನ ಉದ್ಯೋಗಿ ಶುಭಂ (24ವರ್ಷ) ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಮೂರನೇ ಆರೋಪಿ ಶುಭಂ ಸಂಬಂಧಿ ಬಾದಲ್ ನನ್ನು ಆತನ ಊರಾದ ಕಾರ್ನಾಲ್ ಹಳ್ಳಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
20 ವರ್ಷದ ನ್ಯಾನ್ಸಿ ಇವೆಂಟ್ ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಮಂಗಳವಾರ ಪೊಲೀಸ್ ಠಾಣೆಗೆ ನ್ಯಾನ್ಸಿ ತಂದೆ ದೂರು ನೀಡಿದ್ದರು. ನವೆಂಬರ್ 11ರಿಂದ ತನ್ನ ಮಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಏನು ಅವಘಡ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿರುವುದಾಗಿ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
2019ರ ಮಾರ್ಚ್ 27ರಂದು ನ್ಯಾನ್ಸಿ ಸಾಹಿಲ್ ಚೋಪ್ರಾನ ಜತೆ ವಿವಾಹ ನಡೆದಿತ್ತು. ಅಂದಿನಿಂದ ಅತ್ತೆ, ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಜನಕ್ ಪುರಿ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯಲ್ಲಿ ಸಿಡಿಆರ್ (ಕಾಲ್ ಡಾಟಾ ರೆಕಾರ್ಡ್ಸ್ ) ಆಧಾರದ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದಿನಂಪ್ರತಿ ಜಗಳದಿಂದ ರೋಸಿ ಹೋಗಿದ್ದು, ಇಬ್ಬರ ನೆರವಿನೊಂದಿಗೆ ಪತ್ನಿಯನ್ನು ಗುಂಡಿಟ್ಟು ಹತ್ಯೆಗೈದಿರುವುದಾಗಿ ಸಾಹಿಲ್ ಚೋಪ್ರಾ ಪೊಲೀಸರಿಗೆ ತನಿಖೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಆರೋಪಿಗಳನ್ನು ದ್ವಾರಕಾ ಕೋರ್ಟ್ ಗೆ ಹಾಜರುಪಡಿಸಿದ್ದು, ಮೂವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.