Advertisement

ದೇಶದೆಲ್ಲೆಡೆ ಬಿಸಿಗಾಳಿ ಪ್ರಕೋಪದ ಭೀತಿ: ಮುಂಜಾಗ್ರತೆ ಅಗತ್ಯ

09:15 PM Feb 28, 2023 | Team Udayavani |

ಚಳಿಗಾಲ ಮುಗಿಯುವುದಕ್ಕೂ ಮುನ್ನವೇ ದೇಶದ ಹಲವೆಡೆ ತಾಪಮಾನ ಒಂದೇ ಸಮನೆ ಏರಿಕೆಯಾಗುತ್ತಿದೆ. ಉತ್ತರ ಭಾರತದಲ್ಲಿನ್ನೂ ಬೇಸಗೆ ಋತು ಆರಂಭಗೊಳ್ಳದಿದ್ದರೂ ಬಿಸಿಲಿನ ತೀವ್ರತೆ ಅಧಿಕವಾಗಿದೆ.

Advertisement

ಫೆಬ್ರವರಿ ತಿಂಗಳ ಕೊನೆಯ ಎರಡು ವಾರಗಳ ಅವಧಿಯಲ್ಲಿ ದೇಶದ ಹಲವೆಡೆ ಜನರು ಏಪ್ರಿಲ್‌ ತಿಂಗಳಿನಲ್ಲಿರುವಷ್ಟು ತೀವ್ರತೆಯ ತಾಪಮಾನವನ್ನು ಅನುಭವಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯನ ಪ್ರಖರತೆ ಇನ್ನಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳಿದ್ದು ಮುಂದಿನ ಎರಡು ವಾರಗಳ ಅವಧಿಯಲ್ಲಿ ಬೇಸಗೆ ಋತುವಿನ ಅಂತ್ಯದಲ್ಲಿರುವಷ್ಟು ತಾಪಮಾನ ದಾಖಲಾಗುವ ಅಂದಾಜಿದೆ. ಭಾರತೀಯ ಹವಾಮಾನ ಇಲಾಖೆ ಮಾತ್ರವಲ್ಲದೆ ಖಾಸಗಿ ಹವಾಮಾನ ಸಂಸ್ಥೆಗಳು ಕೂಡ ಇದೇ ಮುನ್ಸೂಚನೆಯನ್ನು ನೀಡಿದ್ದು ದೇಶದ ಜನತೆ ಈ ಬಾರಿ “ಬಾಣಲೆಯಿಂದ ಬೆಂಕಿಗೆ’ ಎಂಬ ಪರಿಸ್ಥಿತಿಯನ್ನು ಎದುರಿಸಲೇಬೇಕಾದ ಎಲ್ಲ ಲಕ್ಷಣಗಳೂ ಗೋಚರಿಸತೊಡಗಿವೆ.

ಕಳೆದೊಂದು ವಾರದ ಅವಧಿಯಲ್ಲಿ ದೇಶದ ಕೆಲವೊಂದು ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 11 ಡಿಗ್ರಿ ಸೆಲ್ಸಿಯ ಸ್‌ಗಳಷ್ಟು ಅಧಿಕವಾಗಿತ್ತು. ಈ ಬಾರಿ ಕೇವಲ ವಾಯವ್ಯ ಮತ್ತು ಪಶ್ಚಿಮ ಭಾರತ ಮಾತ್ರವಲ್ಲದೆ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲೂ ಬಿಸಿಲಿನ ಕಾವು ಏರಿಕೆಯಾಗತೊಡಗಿದ್ದು ಕರಾವಳಿ ಪ್ರದೇಶಗಳಂತೂ ಈಗಾಗಲೇ ಸುಡಲಾರಂಭಿಸಿವೆ. ದೇಶದ ಕೆಲವೊಂದು ಭಾಗಗಳಲ್ಲಿ ಈಗಾಗಲೇ ಬಿಸಿಲಿನ ಝಳದಿಂದಾಗಿ ಜನರನ್ನು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡತೊಡಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಇಲಾಖೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವೊಂದನ್ನು ಬರೆದು, ಬೇಸಗೆಯಲ್ಲಿ ಜನರನ್ನು ಕಾಡಬಹುದಾದ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳು ಮತ್ತು ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

ದಿಢೀರನೆ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರ ಪರಿಣಾಮ ಕೃಷಿ ವಲಯದ ಮೇಲೂ ಬೀಳತೊಡಗಿದ್ದು ಇನ್ನೇನು ಕಟಾವು ಹಂತದಲ್ಲಿರುವ ರಬಿ ಋತುವಿನ ಬೆಳೆಗಳ ಇಳುವರಿಯಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ದೇಶದ ಬಹುತೇಕ ಎಲ್ಲೆಡೆ ಈ ವಿಚಿತ್ರ ಹವಾಮಾನ ಪರಿಸ್ಥಿತಿ ಕಂಡುಬರುತ್ತಿದ್ದು ಕಡುಬಿಸಿಲಿನಿಂದಾಗಿ ಕೃಷ್ಯುತ್ಪನ್ನಗಳ ಸಾಗಣೆ, ದಾಸ್ತಾನು, ಕೃಷಿ ಸಂಸ್ಕರಣ ಕೈಗಾರಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಕೃಷ್ಯುತ್ಪನ್ನಗಳ ಸಾಗಾಟ ಮತ್ತು ದಾಸ್ತಾನಿಗೆ ಸಾಕಷ್ಟು ಪ್ರಮಾಣದಲ್ಲಿ ಶೀಥಲೀಕರಣ ವ್ಯವಸ್ಥೆಗಳು, ಶೀಥಲೀಕೃತ ಗೋದಾಮುಗಳ ಲಭ್ಯತೆ ಇಲ್ಲವಾಗಿದ್ದು ಭಾರೀ ಪ್ರಮಾಣದಲ್ಲಿ ಆಹಾರ ಬೆಳೆಗಳು ನಷ್ಟವಾಗುವ ಆತಂಕವೂ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರಿದದ್ದೇ ಆದಲ್ಲಿ ದೇಶದಲ್ಲಿ ಆಹಾರ ಪದಾರ್ಥಗಳ ಅದರಲ್ಲೂ ಮುಖ್ಯವಾಗಿ ಏಕದಳ ಧಾನ್ಯಗಳ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದು ಆರ್ಥಿಕತೆಯ ಮೇಲೂ ಹೊಡೆತ ಬೀಳಲಿದೆ.

Advertisement

ಇನ್ನು ಬಿಸಿಲಿನ ತೀವ್ರತೆಯ ಪರಿಣಾಮ ವಿದ್ಯುತ್‌ಗೆ ಬೇಡಿಕೆ ಹೆಚ್ಚಲಿದೆ. ಸದ್ಯದ ಅಂದಾಜಿನಂತೆ ಕಳೆದ ಬೇಸಗೆಗಿಂತ ಈ ಬಾರಿ ವಿದ್ಯುತ್‌ ಬೇಡಿಕೆ ಶೇ. 20-30ರಷ್ಟು ಅಧಿಕವಾಗಲಿದ್ದು ಜನತೆ ವಿದ್ಯುತ್‌ ಕಡಿತವನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಇವೆಲ್ಲದರ ನಡುವೆ ಮುಂದಿನ ಮುಂಗಾರು ಅವಧಿಯಲ್ಲಿ ಎಲ್‌-ನಿನೋದ ಪರಿಣಾಮ ಮಳೆಯ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ಜಾಗತಿಕ ಹವಾಮಾನ ಸಂಸ್ಥೆಗಳು ನೀಡಿವೆ.

ಈ ಎಲ್ಲ ವಿಚಿತ್ರ ಹವಾಮಾನ ಬೆಳವಣಿಗೆಗಳು ದೇಶದ ಜನತೆಯನ್ನು ಒಂದಿಷ್ಟು ಆತಂಕಕ್ಕೀಡುಮಾಡಿದೆ. ಒಂದೆಡೆಯಿಂದ ಆರ್ಥಿಕ ಹಿಂಜರಿಕೆಯ ಭೀತಿ ಇಡೀ ವಿಶ್ವವನ್ನು ಕಾಡುತ್ತಿದ್ದರೆ ಹವಾಮಾನ ವಿಪ್ಲವಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂದಿಗ್ಧಗೊಳಿಸಿವೆ. ಇಡೀ ಬೆಳವಣಿಗೆಗಳ ಮೇಲೆ ಸರಕಾರ ಹದ್ದುಗಣ್ಣಿರಿಸುವ ಜತೆಯಲ್ಲಿ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸರಕಾರ ದೂರದೃಷ್ಟಿಯ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರವೇ ಸಂಭಾವ್ಯ ಅಪಾಯದಿಂದ ಪಾರಾಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next