Advertisement

ಫೆ.7ರಿಂದ ರುಬೆಲ್ಲಾ ನಿಯಂತ್ರಣಕ್ಕೆ ಲಸಿಕೆ: ಸಂತೋಷ್‌ಕುಮಾರ್‌

12:25 PM Jan 05, 2017 | Team Udayavani |

ದಾವಣಗೆರೆ: ಭಾರತ ಸರ್ಕಾರ 2020ರ ವೇಳೆಗೆ ಮೀಸಲ್ಸ್‌ ರೋಗಾಣು ನಿರ್ಮೂಲನೆ ಮಾಡುವ ಹಾಗೂ ರುಬೆಲ್ಲಾ ರೋಗಾಣು ನಿಯಂತ್ರಿಸುವ ಕಾರ್ಯ ಯೋಜನೆಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿದೆ ಎಂದು ದಾವಣಗೆರೆ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ತಿಳಿಸಿದರು. 

Advertisement

ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಟಾಸ್ಕ್ಫೋರ್ಸ್‌ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆ. 7 ರಿಂದ 28 ರವರೆಗೆ ನಡೆಯುವ ಲಸಿಕಾ ಅಭಿಯಾನದಲ್ಲಿ ತಾಲೂಕಿನ ಎಲ್ಲ ಅಂಗನವಾಡಿ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿ ಪೋಷಕರಿಗೆ ಸೂಕ್ತ ಮಾಹಿತಿ ನೀಡಿ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವ ಬಗ್ಗೆ ಕ್ರಮ ವಹಿಸಬೇಕು ಎಂದರು. 

ಈ ಲಸಿಕೆಯನ್ನು 9 ತಿಂಗಳ ಮಗುವಿನಿಂದ ಹಿಡಿದು 15 ವರ್ಷದವರಿಗೆ ನೀಡಲಾಗುತ್ತಿದೆ. ತಾಲ್ಲೂಕಿನ ಒಟ್ಟು 492 ಅಂಗನವಾಡಿಗಳ 16,665 ಹಾಗೂ 63,168 ಶಾಲಾ ಮಕ್ಕಳಿಗೆ ಲಸಿಕೆ ನೀಡಬೇಕಾಗಿದ್ದು, ಎಲ್ಲ ಅಂಗನವಾಡಿ ಹಾಗೂ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು.

ಮೊದಲ ವಾರ ಶಾಲಾ ಮಕ್ಕಳಿಗೆ, ಎರಡನೇ ವಾರ ಅಂಗನವಾಡಿ ಮಕ್ಕಳಿಗೆ ಹಾಗೂ ಮೂರನೇ ವಾರ ಅಂಗನವಾಡಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. 

ಅಭಿಯಾನದ ಬಗ್ಗೆ ಪ್ರತಿದಿನ ಶಾಲೆಯಲ್ಲಿ ಪ್ರಾರ್ಥನಾ ಸಮಯದಲ್ಲಿ ತಿಳಿಸಬೇಕು. ಶಾಲೆಯಲ್ಲಿ ಲಸಿಕೆ ಕಾರ್ಯಕ್ರಮದ ದಿನ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ಹಾಜರಿದ್ದು ಶಾಲಾ ಒಳ ಮತ್ತು ಹೊರ ಆವರಣವನ್ನು ಶುಚಿಗೊಳಿಸುವ ವ್ಯವಸ್ಥೆ ಮಾಡಬೇಕು. ಮೀಸಲ್ಸ್‌ ಮತ್ತು ರುಬೆಲ್ಲಾ ಕುರಿತು ಪೋಸ್ಟರ್, ಬ್ಯಾನರ್ಗಳನ್ನು ಪ್ರದರ್ಶಿಸಲು ಆದೇಶ ನೀಡಲು ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ ಸೂಚಿಸಿದರು. 

Advertisement

ತಾಲೂಕಿನ ಹೋಬಳಿ ಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ಏರ್ಪಡಿಸಲು ದಿನಾಂಕ, ಸ್ಥಳ ನಿಗದಿಪಡಿಸುವುದು, ಮೀಸಲ್ಸ್‌ ಮತ್ತು ರುಬೆಲ್ಲಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಫೆ.7ರಿಂದ 28 ರವರೆಗೆ ಹೆಚ್ಚಿನ ಪ್ರಚಾರ ನಡೆಸಬೇಕು ಎಂದು ಸೂಚಿಸಿದರು. 

ಶಾಲಾ ಮಕ್ಕಳಿಗೆ ಲಸಿಗೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಎಂ.ಆರ್‌. ಲಸಿಕೆ ಹಾಕಿಸುತ್ತೇನೆ ಎಂದು ಪ್ರತಿಜ್ಞಾ ವಿಧಿ ಬೋಧಿಸುವುದು, ತರಗತಿಯಲ್ಲಿ, ಕಚೇರಿ ಸೂಚನಾ ಫಲಕದಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ದಪ್ಪ ಅಕ್ಷರಗಳಲ್ಲಿ ಬರೆಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು. 

ಪ್ರತಿ ವರ್ಷ ಸುಮಾರು 49 ಸಾವಿರ ಮಕ್ಕಳು ಈ ರೋಗಾಣುವಿಗೆ ತುತ್ತಾಗುತ್ತಿದ್ದಾರಲ್ಲದೆ, 10 ಸಾವಿರ ಹೊಸ ಪ್ರಕರಣ ಸೇರ್ಪಡೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ನುರಿತ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದು ಎಲ್ಲಾ ಪೋಷಕರು ನಿರ್ಭೀತರಾಗಿ ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ಮನವಿ ಮಾಡಿದರು. ಆರ್‌ಸಿಎಚ್‌ ಅಧಿಕಾರಿ ಡಾ| ಶಿವಕುಮಾರ್‌,  ಡಾ|ಮಂಜುನಾಥ ಪಾಟಿಲ್‌, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next