ಮುಂಬಯಿ: ನಗರದ ಕನ್ನಡ ಸಂಘ-ಸಂಸ್ಥೆಗಳು ಒಗ್ಗೂಡಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಸಂಸ್ಥೆಯ ಸಹಯೋಗ ದಿಂದಿಗೆ ಬೃಹನ್ಮುಂಬಯಿಯಲ್ಲಿ ಫೆ. 10 ಮತ್ತು ಫೆ. 11ರಂದು ಅಖೀಲ ಭಾರತ ಹೊರನಾಡ ಕನ್ನಡಿಗರ ಸಮಾವೇಶವನ್ನು ಆಯೋಜಿಸಲಾಗಿದೆ.
ಮುಂಬಯಿಯ ಮೊಟ್ಟ ಮೊದಲ ಕನ್ನಡ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಸಿರುವ ಮೊಗವೀರ ವ್ಯವಸ್ಥಾಪಕ ಮಂಡಳಿ ತಮ್ಮ ಅಂಧೇರಿ ಪಶ್ಚಿಮದ ವೀರಾ ದೇಸಾಯಿ ರಸ್ತೆಯಲ್ಲಿರುವ ಮೊಗವೀರ ಭವನದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡಿರುವ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಕನ್ನಡ ಸಂಸ್ಥೆಗಳು ಸಹಯೋಗ ನೀಡಲು ಮುಂದೆ ಬಂದಿವೆ. ಜೊತೆಗೆ ಮುಂಬಯಿಯ ಹೆಸರಾಂತ ಹಾಗೂ ಅತಿ ಹಳೆಯ ಕನ್ನಡ ಸಂಸ್ಥೆಗಳಾದ ಮೈಸೂರು ಅಸೋಸಿಯೇಶನ್, ಬಿಎಸ್‌ಕೆಬಿ ಅಸೋಸಿಯೇಶನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಕರ್ನಾಟಕ ಸಂಘ ಮುಂಬಯಿ, ಬಂಟರ ಸಂಘ ಮುಂಬಯಿ, ಕನ್ನಡ ಸಂಘ ಮುಂಬಯಿ ಹಾಗೂ ನವಿಮುಂಬಯಿ ಕನ್ನಡ ಸಂಘಗಳು ಈ ಸಮಾವೇಶದ ಯಶಸ್ವಿಗಾಗಿ ತಮ್ಮ ಸಹಯೋಗ ನೀಡಿದ್ದು ಈಗಾಗಲೇ ಸಮಾವೇಶದ ರೂಪರೇಷೆಗಳು ರೂಪುಗೊಂಡಿವೆ.
ಸಮಾವೇಶವು ಮುಂಬಯಿ ಕನ್ನಡ ಶಾಲಾ ಮಕ್ಕಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರೊಡಗೂಡಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ಪಾಂಡುರಂಗ ವಿಠuಲನ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡು ಆನಂತರ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರತಿದಿನ ಮೂರು ವಿವಿಧ ವಿಚಾರ ಗೋಷ್ಠಿಗಳು ನಡೆಯಲಿದ್ದು, ಮಧ್ಯೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊನೆಗೆ ಸಮಾರೋಪದೊಂದಿಗೆ ಮುಕ್ತಾಯ ಕಾಣಲಿದೆೆ.
ಸಮಾವೇಶದ ಅಂಗವಾಗಿ ಹೊರನಾಡ ಕನ್ನಡ ಸಂಘ ಸಂಸ್ಥೆಗಳ ನಡೆದು ಬಂದ ದಾರಿಯ ಬಗೆಗೆ ಛಾಯಾ ಚಿತ್ರಪ್ರದರ್ಶನ, ಹೊರನಾಡ ಸಾಹಿತಿಗಳ ಪುಸ್ತಕ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಮಾರಾಟ ಮಳಿಗೆ ಹಾಗೂ ನೆನಹೊತ್ತಿಗೆಯ ಬಿಡುಗಡೆ ಕಾರ್ಯಕ್ರಮ ಒಳಗೊಂಡಿವೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದ ಎಲ್ಲ ನಗರಗಳಿಂದ ಸುಮಾರು 300 ಕ್ಕೂ ಅಧಿಕ ಕನ್ನಡ ಪ್ರತಿನಿಧಿಗಳು, ಖ್ಯಾತ ಸಾಹಿತಿಗಳು, ಚಿಂತಕರು ಆಗಮಿಸಲಿದ್ದಾರೆ. ಕರ್ನಾಟಕದ ಒಳನಾಡಿನಿಂದಲೂ ಹಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ನಗರದ 25ಕ್ಕೂ ಮಿಕ್ಕಿದ ಸಂಘಗಳು ಸಹಭಾಗಿಗಳಾಗಲು ಒಪ್ಪಿಕೊಂಡಿದ್ದು ಈ ವರೆಗೆ ಇನ್ನೂ ಸಹಭಾಗಿಗಳಾಗದ ಸಂಘ ಸಂಸ್ಥೆಗಳು ಕೂಡಲೇ ಸಮಿತಿಯನ್ನು ಸಂಪರ್ಕಿಸಿ ತಾವೂ ಈ ವಿಶೇಷ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂದೆ ಬರುವಂತೆ ಮುಂಬಯಿ ಸಮಾವೇಶ ಸಮಿತಿಯು ತಿಳಿಸಿದೆ. ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಡಾ| ಗಣಪತಿ ಶಂಕರಲಿಂಗ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ. ಎಲ್. ಬಂಗೇರ, ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತಕುಮಾರ್ ಪೊಲಿಪು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮತ್ತಿತರ ಸಂಸ್ಥೆಗಳ ಮುಖ್ಯಸ್ಥರು ಮುಂಬಯಿ ಸಮಾವೇಶ ಸಮಿತಿಯಲ್ಲಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸ್ಥಳೀಯ ಸಮಿತಿ ಮೈಸೂರು ಅಸೋಸಿಯೇಶನ್ ಮುಂಬಯಿ (24024647, 24037065) ಇಲ್ಲಿ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.