ಬೆಂಗಳೂರು: “15ನೇ ಬೆಂಗಳೂರು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ’ ಫೆ.29ರಿಂದ ಮಾ.7ರ ವರೆಗೆ ನಡೆಯಲಿದ್ದು, ಗುರುವಾರ ಸಂಜೆ 5ಕ್ಕೆ ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಂ.ರಾಜೀವ ಚಂದ್ರಶೇಖರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸ್ಪೀಕರ್ ಯು.ಟಿ.ಖಾದರ್ ಇತರರು ಉಪಸ್ಥಿತರಿರಲಿದ್ದಾರೆ.
ಖ್ಯಾತ ಕಲಾವಿದ ಮತ್ತು ರಂಗ ನಿರ್ದೇಶಕ ಡಾ.ಜಬ್ಟಾರ್ ಪಟೇಲ್ “ಬೆಂಗಳೂರು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ’ದ ಕೈಪಿಡಿ, ನಟ ಶಿವರಾಜಕುಮಾರ್ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಜೆಕ್ ರಿಪಬ್ಲಿಕ್‌ನ ಖ್ಯಾತ ಶಿಕ್ಷಣ ತಜ್ಞೆ, ಚಿತ್ರ ವಿಮರ್ಶಕಿ ವಿಯೆರಾ ಲಾಂಗೆರೊವಾ, ಬಾಂಗ್ಲಾದ ಖ್ಯಾತ ನಟ ಅಜಮೇರಿ ಎಚ್.ಬಾಧೋನ್ ವಿಶೇಷ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಚಲನ ಚಿತ್ರೋತ್ಸವ’ದ ಉದ್ಘಾಟನೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಸಿ ಕೊಡಲಿದ್ದು, ಪೀಟರ್ ಲುಯಿಸಿ ನಿರ್ದೇಶನದ ಸ್ವಿಜರ್ಲೆಂಡ್‌ನ “ಬೋಷೋ ಸ್ವಿಜರ್ಲೆಂಡ್’ ಉದ್ಘಾಟನಾ ಸಿನಿಮಾವಾಗಿ ಪ್ರದರ್ಶನವಾಗಲಿದೆ.
ಪ್ರದರ್ಶನಗೊಳ್ಳುವ ಚಿತ್ರಗಳು: ಕನ್ನಡ, ಭಾರತೀಯ ಹಾಗೂ ಏಷಿಯನ್ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾ ಕಣಕ್ಕಿಳಿಯುತ್ತಿವೆ. ಉಳಿದಂತೆ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಮನರಂಜನಾ ಸಿನಿಮಾಗಳು, ವಿಮರ್ಶಕರ ವಾರ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟದ ಆಯ್ಕೆಯ ಸಿನಿಮಾಗಳು), ಬಯೋಪಿಕ್ ಗಳು, ದೇಶ ಕೇಂದ್ರಿತ ಸಿನಿಮಾ, ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪ ಭಾಷೆಗಳಲ್ಲಿ ತಯಾರಾದ ಚಿತ್ರಗಳು ಪ್ರದರ್ಶನ ಗೊಳ್ಳಲಿವೆ.
ಅಗಲಿದವರಿಗೆ ಶ್ರದ್ಧಾಂಜಲಿ: ಪುನರಾವಲೋಕನ ವಿಭಾಗದಲ್ಲಿ ಮೃಣಾಲ್ ಸೇನ್ ಅವರ ಚಿತ್ರಗಳು ಪ್ರದರ್ಶನ ಆಗಲಿದೆ. ಶತಮಾನೋತ್ಸವ ನೆನಪು ಹಾಗೂ ಶ್ರದ್ಧಾಂಜಲಿ ವಿಭಾಗದಲ್ಲಿ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್, ನಟ ಸಾಬು ದಸ್ತಗೀರ್, ನಿರ್ದೇಶಕ ಭಗವಾನ್, ನಟಿ ಲೀಲಾವತಿ, ನಿರ್ಮಾಪಕ ಸಿ.ವಿ.ಶಿವಶಂಕರ್, ಗಾಯಕಿ ವಾಣಿ ಜಯರಾಂಗೆ ಶ್ರದ್ಧಾಂಜಲಿ ಸಲ್ಲಿಕೆ ಆಗಲಿದೆ.
ಸಿನಿಮಾ ವೀಕ್ಷಣೆಗೆ ದರ ನಿಗದಿ
ಸಿನಿಮಾಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ 800 ರೂ., ಚಿತ್ರೋದ್ಯಮದ ಸದಸ್ಯರಿಗೆ 400 ರೂ., ಹಿರಿಯ ನಾಗರಿಕರಿಗೆ 400 ರೂ. ಪ್ರವೇಶದರ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.