Advertisement

ಫೆ. 24ರಿಂದ ಮಹಾರಾಷ್ಟ್ರ ಬಿಜೆಟ್‌ ಅಧಿವೇಶನ

10:18 AM Feb 23, 2020 | Sriram |

ಮುಂಬಯಿ: ಫೆಬ್ರವರಿ 24ರಿಂದ ಪ್ರಾರಂಭವಾಗಲಿರುವ ಮಹಾರಾಷ್ಟ್ರ ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ಬಿಜೆಪಿಯು ಕೃಷಿ ಬಿಕ್ಕಟ್ಟು, ಮಹಿಳೆಯರ ಮೇಲಿನ ಅಪರಾಧ, ಎಲ್ಗರ್‌ ಪರಿಷತ್‌ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸುವ ವಿಚಾರದಲ್ಲಿ ಆಡಳಿತರೂಢ ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮಹಾ ವಿಕಾಸ ಆಘಾಡಿ (ಎಂವಿಎ) ಸರಕಾರವನ್ನು ಮೂಲೆಗುಂಪು ಮಾಡುವ ಸಾಧ್ಯತೆಯಿದೆ.

Advertisement

ಸಾಮಾನ್ಯವಾಗಿ ಆರು ವಾರಗಳವರೆಗೆ ನಡೆಯುವ ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನವು ಈ ಬಾರಿ ಸುಮಾರು ನಾಲ್ಕು ವಾರಗಳಿಗೆ ಮೊಟಕುಗೊಳ್ಳಲಿದ್ದು, ಮಾ. 20ರಂದು ಕೊನೆಗೊಳ್ಳುವ ಸಾಧ್ಯತೆಯಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರವು ಮಾ.6ರಂದು ತನ್ನ ಚೊಚ್ಚಲ ಬಜೆಟ್‌ ಮಂಡಿಸಲಿದೆ. ಠಾಕ್ರೆ ಮತ್ತು ರಾಜ್ಯ ಹಣಕಾಸು ಸಚಿವರಾಗಿರುವ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಬಜೆಟ್‌ಗೆ ಪೂರ್ವಭಾವಿಯಾಗಿ ಕಳೆದ ಕೆಲವು ದಿನಗಳಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ದೇವೇಂದ್ರ ಫಡ್ನವೀಸ್‌ ನೇತೃತ್ವದ ವಿಪಕ್ಷ ಬಿಜೆಪಿಯು ಮೂರು ಪಕ್ಷಗಳ ಆಡಳಿತವನ್ನು ಮುಖ್ಯವಾಗಿ ಶಿವಸೇನೆಯನ್ನು ಪೌರತ್ವ (ತಿದ್ದುಪಡಿ) ಕಾಯಿದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌), ಕೃಷಿ ಸಾಲ ಮನ್ನಾ ಮತ್ತು ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳಂತಹ ವಿಷಯಗಳಲ್ಲಿ ಹಣಿಯಲಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ನಾಗಪುರ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸರಕಾರವು ಮಹಾತ್ಮ ಜ್ಯೋತಿರಾವ್‌ ಫುಲೆ ರೈತ ಸಾಲ ಮನ್ನಾ ಯೋಜನೆಯನ್ನು ಘೋಷಿಸಿತ್ತು, ಇದರ ಅಡಿಯಲ್ಲಿ, 2015ರ ಎ. 1 ಮತ್ತು 2019ರ ಮಾ. 31ರ ನಡುವೆ ತೆಗೆದುಕೊಂಡ 2 ಲಕ್ಷ ರೂ.ಗಳವರೆಗಿನ ಸಾಲ ಮತ್ತು 2019ರ ಸೆ. 30ರವರೆಗೆ ಮರುಪಾವತಿಸದ ಸಾಲಗಳು ಮನ್ನಾಕ್ಕೆ ಅರ್ಹವಾಗಿರುತ್ತವೆ. ಆದರೆ, ರೈತರು ಈ ಯೋಜನೆಯ ಲಾಭವನ್ನು ಇನ್ನೂ ಪಡೆದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಮುಂದಿನ ವಾರದಿಂದ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ಸರಕಾರ ಹೇಳಿದೆ. ಅಕಾಲಿಕ ಮಳೆಯಿಂದ ಬಳಲುತ್ತಿರುವ ರೈತರಿಗೆ ಹೆಕ್ಟೇರ್‌ಗೆ 25 ಸಾವಿರ ರೂ.ಗಳನ್ನು ನೀಡಬೇಕು ಎಂದೂ ಬಿಜೆಪಿ ಒತ್ತಾಯಿಸಿದೆ.

ಆಕಸ್ಮಿಕ ನಿಧಿಯ ಮಿತಿಯನ್ನು 10,000 ಕೋಟಿ ರೂ.ಗೆ ಹೆಚ್ಚಿಸುವ ಕ್ಯಾಬಿನೆಟ್‌ ನಿರ್ಧಾರಕ್ಕೆ ರಾಜ್ಯಪಾಲ ಬಿ. ಎಸ್‌. ಕೋಶ್ಯಾರಿ ಅವರು ಫೆ. 24ರೊಳಗೆ ಸಹಿ ಹಾಕಿದರೆ, ಸಾಲ ಮನ್ನಾ ಮೊತ್ತವನ್ನು ಸುಮಾರು 19 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು, ಇಲ್ಲದಿದ್ದರೆ ಅನುಷ್ಠಾನವು ವಿಳಂಬವಾಗಲಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

Advertisement

ಈ ನಿರ್ಧಾರದಿಂದ ಸುಮಾರು 33 ಲಕ್ಷ ರೈತರು ಲಾಭ ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಯ ಪ್ರಯೋಜನ‌ವನ್ನು ಪಡೆಯಲು ರೈತರು ತಮ್ಮ ಆಧಾರ್‌ ಕಾರ್ಡ್‌ ಅನ್ನು ತಮ್ಮ ಬ್ಯಾಂಕ್‌ ಖಾತೆಗಳೊಂದಿಗೆ ಲಿಂಕ್‌ ಮಾಡಬೇಕಾಗುತ್ತದೆ.

ಸರಕಾರವು 2 ಲಕ್ಷ ರೂ.ಗಿಂತ ಹೆಚ್ಚಿನ ಸಾಲ ಹೊಂದಿರುವ ರೈತರಿಗೆ ನೂತನ ಸಾಲ ಮನ್ನಾ ಯೋಜನೆ ಮತ್ತು ನಿಯಮಿತವಾಗಿ ಸಾಲ ಬಾಕಿ ಪಾವತಿಸುವ ರೈತರಿಗೆ ಮತ್ತೂಂದು ಯೋಜನೆಯನ್ನು ಪರಿಚಯಿಸುವ ನಿರೀಕ್ಷೆಯಿದೆ.

ಇತ್ತೀಚೆಗೆ ವಾರ್ಧಾ ಜಿಲ್ಲೆಯ ಹಿಂಗನ್‌ಘಾಟ್‌ನಲ್ಲಿ ನಡೆದ ಉಪನ್ಯಾಸಕಿಗೆ ಬೆಂಕಿ ಹಚ್ಚಿದ ಘಟನೆ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳ ವಿಷಯದಲ್ಲಿ ಬಿಜೆಪಿಯು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಜಕೀಯ ವೀಕ್ಷಕರು ನುಡಿದಿದ್ದಾರೆ.

ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು ನಿಯಂತ್ರಿಸಲು ರಾಜ್ಯ ಸರಕಾರವು ಆಂಧ್ರಪ್ರದೇಶದ ದಿಶಾ ಕಾಯಿದೆಯನ್ನು ಅಧ್ಯಯನ ಮಾಡುತ್ತಿದ್ದು, ಇದು ತಪ್ಪಿತಸ್ಥರಿಗೆ ಮರಣದಂಡನೆಯ ಜೊತೆಗೆ 21 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ. ಬಜೆಟ್‌ ಅಧಿವೇಶನದಲ್ಲಿ ಇದೇ ರೀತಿಯ ಕಾನೂನುನನ್ನು ಹೊರತರಲು ಸರಕಾರವು ಯೋಚಿಸಿದೆ ಎಂದು ಗೃಹ ಸಚಿವ ಅನಿಲ್‌ ದೇಶು¾ಖ್‌ ಹೇಳಿದ್ದಾರೆ.

ಸಿಎಎ ಕುರಿತ ನಿಲುವಿನ ವಿಚಾರದಲ್ಲೂ ಬಿಜೆಪಿಯು ಆಡಳಿತಾರೂಢ ಎಂವಿಎ ಸರಕಾರವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿಚಾರದಲ್ಲಿ ಯಾರಿಗೂ ಭಯ ಬೇಡ. ಇವು ಯಾರೊಬ್ಬರನ್ನೂ ದೇಶದಿಂದ ಹೊರದಬ್ಬುವುದಿಲ್ಲ ಎಂದು ಹೇಳಿದ್ದಾರೆ.

ಆದರೆ, ಎಂವಿಎ ಸರಕಾರದ ಭಾಗವಾಗಿರುವ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬಂದಿವೆ. ಸಿಎಎ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ಮೂರಕ್ಕೂ ಅವಕಾಶ ನೀಡಬಾರದು ಎಂದು ಅವು ಪ್ರತಿಪಾದಿಸಿವೆ. ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಎನ್‌ಆರ್‌ಸಿಗೆ ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next