Advertisement

OnePlus Pad ಟ್ಯಾಬ್ಲೆಟ್: ಹಲವು ಪ್ಲಸ್ ಗಳ ಸಿಹಿ ಗುಳಿಗೆ!

08:14 PM Jun 14, 2023 | Team Udayavani |

ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ ಗಳನ್ನು ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸುತ್ತಾರೆ. ಒಂದೇ ಕಡೆ ಕುಳಿತು ಕೆಲಸ ಮಾಡುವ ಕಚೇರಿ (ಸ್ಥಾವರ) ಬಳಕೆಗೆ ಪಿ.ಸಿ.ಗಳು ಸೂಕ್ತವಾದರೆ, ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುವ ಜಂಗಮ ಬಳಕೆದಾರರಿಗೆ ಲ್ಯಾಪ್ ಟಾಪ್ ಅನುಕೂಲಕರ. ಲ್ಯಾಪ್ ಟಾಪ್ ಸ್ವಲ್ಪ ದೊಡ್ಡದಾಯಿತು, ಅದಕ್ಕಿಂತಲೂ ಹ್ಯಾಂಡಿಯಾದ, ಮೊಬೈಲ್ ಗಿಂತ ದೊಡ್ಡದಾದ ಡಿವೈಸ್ ಬೇಕೆನ್ನುವವರಿಗೆ ಟ್ಯಾಬ್ಲೆಟ್ (ಪ್ಯಾಡ್) ಗಳು ಉಪಕಾರಿ. ಇದು ವಿದ್ಯಾರ್ಥಿಗಳಿಗೂ ಅನುಕೂಲಕರ.

Advertisement

ಹುವಾವೇ, ಆನರ್, ಲೆನೊವೋ, ಸ್ಯಾಮ್ ಸಂಗ್ ಬ್ರಾಂಡ್ ಗಳಿಗೆ ಸೀಮಿತವಾಗಿದ್ದ ಟ್ಯಾಬ್ ತಯಾರಿಕೆಯತ್ತ ಶಿಯೋಮಿ, ರಿಯಲ್ ಮಿ ಮತ್ತಿತರ ಬ್ರಾಂಡ್ ಗಳು ದೃಷ್ಟಿ ಹರಿಸಿವೆ. ಅಂತೆಯೇ ಈಗ, ಮೊಬೈಲ್ ಫೋನ್ ತಯಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಒನ್ ಪ್ಲಸ್ ಬ್ರಾಂಡ್ ಇದೀಗ ಟ್ಯಾಬ್ಲೆಟ್ ಗಳ ಮಾರುಕಟ್ಟೆಗೆ ಕಾಲಿರಿಸಿದೆ. ಇತ್ತೀಚಿಗೆ ತಾನೇ ಬಿಡುಗಡೆಯಾಗಿರುವ ಒನ್ ಪ್ಲಸ್ ನ ಮೊದಲ ಟ್ಯಾಬ್ಲೆಟ್ ಒನ್ ಪ್ಲಸ್ ಪ್ಯಾಡ್.

ಇದರ ದರ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 37,999 ರೂ. 12 ಜಿಬಿ+256 ಜಿಬಿ ಮಾದರಿಗೆ 39,999 ರೂ. ಇದೆ.

ವಿನ್ಯಾಸ: ಈ ಟ್ಯಾಬ್ 552 ಗ್ರಾಂ ತೂಕ ಹೊಂದಿದೆ. ಕೇವಲ 0.62 ಸೆಂ.ಮೀ. ನಷ್ಟು ಮಂದವಾಗಿದೆ. ಹೀಗಾಗಿ ಟ್ಯಾಬ್ ತೆಳು ಮತ್ತು ಹಗುರವಾಗಿದೆ. ಆದರೆ ಅಷ್ಟೇ ಗಟ್ಟಿಮುಟ್ಟಾಗಿದೆ. ಇದರ ಅಲ್ಯುಮಿನಿಯಂ ಮೆಟಲ್ ಯುನಿಬಾಡಿ ವಿನ್ಯಾಸವು ತುಂಬಾ ಪ್ರೀಮಿಯಂ ಆಗಿ ಕಾಣುತ್ತದೆ. ಮೂಲೆಯ ಅಂಚುಗಳು ಅರ್ಧ ವೃತ್ತಾಕಾರವಾಗಿವೆ. ಈ ಟ್ಯಾಬ್ ಲೆಟ್ ಗೆ ಹೆಚ್ಚುವರಿಯಾಗಿ ಕೀಬೋರ್ಡ್ ಅಳವಡಿಸಿಕೊಳ್ಳುವ ಸೌಲಭ್ಯವನ್ನು ಒನ್ ಪ್ಲಸ್ ನೀಡಿದೆ. ಇದಕ್ಕೆ ಹೊಂದಿಕೊಳ್ಳುವ ಕೀಬೋರ್ಡ್ ಅನ್ನು ಸಹ ಬಿಡುಗಡೆ ಮಾಡಿದೆ. ಆದರೆ ಅದನ್ನು ಗ್ರಾಹಕ ಪ್ರತ್ಯೇಕವಾಗಿ ಕೊಳ್ಳಬೇಕು. ಅದರ ದರ 7,999 ರೂ.  ಇದಲ್ಲದೇ ಸ್ಟೈಲಸ್ ಪೆನ್ ಸಹ ಇದೆ. ಅದರ ದರ 4,999 ರೂ. ಇದು ಮ್ಯಾಗ್ನೆಟಿಕ್ ಸಂಪರ್ಕ ಹೊಂದಿರುವ ಕೀಬೋರ್ಡ್ ಆಗಿದ್ದು,ಟ್ಯಾಬ್ ಮತ್ತು ಕೀ ಬೋರ್ಡ್ ನಲ್ಲಿ ಮೂರು ಚುಕ್ಕಿಗಳಿರುವ ಆಯಸ್ಕಾಂತೀಯ ಜಾಗದಲ್ಲಿ ಸುಲಭವಾಗಿ ಸಂಪರ್ಕಗೊಳ್ಳುತ್ತದೆ.

Advertisement

ಮ್ಯಾಗ್ನೆಟಿಕ್ ಕೀಬೋರ್ಡ್‌ ನಲ್ಲಿರುವ ಕೀಗಳು ಉತ್ತಮವಾದ ಸ್ಪರ್ಶ ಸಂವೇದನೆ ಹೊಂದಿವೆ. ತಪ್ಪಿಲ್ಲದೇ ಟೈಪ್ ಮಾಡಲು ಸಹಕಾರಿಯಾಗಿವೆ. ಸಾಮಾನ್ಯವಾಗಿ ಹೆಚ್ಚಿನ ಟ್ಯಾಬ್ ಗಳಿಗೆ ಕೀಬೋರ್ಡ್ ಸಂಪರ್ಕಿಸಲಾಗದ ಕಾರಣ ಟೈಪಿಂಗ್ ನಂತಹ ಕೆಲಸಗಳಿಗೆ ಸಮಸ್ಯೆಯಾಗುತ್ತದೆ. ಆದರೆ ಈ ಟ್ಯಾಬ್ ನಲ್ಲಿ ಕೀಬೋರ್ಡ್ ಅಳವಡಿಸಿಕೊಳ್ಳುವ ಆಯ್ಕೆ ಇರುವುದು ಟೈಪಿಂಗ್ ಕೆಲಸಗಳನ್ನು ಮಾಡಬೇಕಾದವರಿಗೆ ಅನುಕೂಲಕರವಾಗಿದೆ. ಇದರಿಂದಾಗಿ ಒಂದು ಪುಟ್ಟದಾದ ಲ್ಯಾಪ್ ಟಾಪ್ ಬಳಸಿದ ಅನುಭವ ದೊರಕುತ್ತದೆ.

ಪರದೆ: ಇದು 11.61 ಇಂಚಿನ ಎಲ್ ಸಿ ಡಿ ಪರದೆ ಹೊಂದಿದೆ. ಪರದೆ ಮತ್ತು ಬೆಜೆಲ್ ಅನುಪಾತ ಶೇ. 88.14 ರಷ್ಟಿದೆ. ಬೆಜೆಲ್ ಗಳು ಕೇವಲ 6.7 ಮಿ.ಮೀ. ಅಗಲ ಹೊಂದಿವೆ. ಹೀಗಾಗಿ ಟ್ಯಾಬ್ ನಲ್ಲಿ 11.6 ಇಂಚಿನ ಪರದೆ ಇದ್ದರೂ 12 ಇಂಚಿನ ಟ್ಯಾಬ್ ಗಳಲ್ಲಿ ದೊರಕುವಷ್ಟೇ ಡಿಸ್ ಪ್ಲೇ ಮೂಡಿಬರುತ್ತದೆ. ಪರದೆಯ ರೆಸ್ಯೂಲೇಷನ್ 2800*2000 ಪಿಕ್ಸಲ್ ಗಳಿವೆ. 296 ಪಿಪಿಐ ಇದೆ. 144 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಹೀಗಾಗಿ ಪರದೆಯನ್ನು ವೇಗವಾಗಿ ಸರಿಸಿದರೂ ಮೃದುವಾಗಿ ಚಲಿಸುತ್ತದೆ. 500 ನಿಟ್ಸ್ ನಷ್ಟು ಪ್ರಕಾಶಮಾನವಾದ ಪರದೆ ಹೊಂದಿದೆ. ಹೀಗಾಗಿ ಒಳಾಂಗಣವಿರಲಿ, ಹೊರಾಂಗಣವಿರಲಿ ಪರದೆ ಚೆನ್ನಾಗಿ ಕಾಣುತ್ತದೆ. 10 ಬಿಟ್ ಟ್ರೂ ಕಲರ್ ನಿಂದಾಗಿ ಚಿತ್ರ, ವಿಡಿಯೋಗಳಲ್ಲಿ ಸಹಜ, ನೈಜ ಬಣ್ಣ ತೋರಿಬರುತ್ತದೆ.

ಸ್ಪೀಕರ್ ಗಳು: ಇದರಲ್ಲಿ ಓಮ್ನಿಬೇರಿಂಗ್ ಸೌಂಡ್ ಫೀಲ್ಡ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ ನಾಲ್ಕು ಸ್ಪೀಕರ್ ಗಳನ್ನು ಒಳಗೊಂಡಿದ್ದು, ನಾಲ್ಕು ಕೋನಗಳಿಂದಲೂ ಧ್ವನಿಯನ್ನು ಆಲಿಸಬಹುದಾಗಿದೆ. ಡಾಲ್ಬಿ ವಿಷನ್ ಎಚ್‌ಡಿಆರ್ ಇಮೇಜಿಂಗ್ ಹಾಗೂ ಡಾಲ್ಬಿ ಅಟ್ಮೋಸ್ ಸೌಂಡ್ ಸೌಲಭ್ಯವನ್ನು ಈ ಟ್ಯಾಬ್ ಹೊಂದಿರುವುದು ವಿಶೇಷ. ಚಲನಚಿತ್ರಗಳನ್ನು ವೀಕ್ಷಿಸುವಾಗ ಧ್ವನಿ ಮತ್ತು ಚಿತ್ರಗಳ ಗುಣಮಟ್ಟ ಚೆನ್ನಾಗಿರುತ್ತದೆ.

ಪ್ರೊಸೆಸರ್ ಮತ್ತು ಕಾರ್ಯಾಚರಣೆ: ಇದರಲ್ಲಿರುವುದು ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಫ್ಲಾಗ್ ಶಿಪ್ ಪ್ರೊಸೆಸರ್. ಇದನ್ನು ಫ್ಲಾಗ್ ಶಿಪ್ ಫೋನ್ ಗಳಲ್ಲಿ ಬಳಸಲಾಗುತ್ತದೆ. 12 ಜಿಬಿ ಎಲ್ಪಿಡಿಡಿಆರ್ 5 ರ್ಯಾಮ್ ಎರಡೂ ಸೇರಿರುವುದರಿಂದ ಟ್ಯಾಬ್ ಯಾವುದೇ ಅಡೆತಡೆಯಿಲ್ಲದೇ ಕಾರ್ಯಾಚರಿಸುತ್ತದೆ. ಹಿನ್ನೆಲೆಯಲ್ಲಿ 24 ಅಪ್ಲಿಕೇಷನ್ ಗಳು ಕಾರ್ಯಾಚರಿಸುತ್ತಿದ್ದರೂ, ಟ್ಯಾಬ್ ಕಾರ್ಯಾಚರಣೆಯಲ್ಲಿ ತಡವರಿಸುವುದಿಲ್ಲ.

Wi-Fi 6, ಬ್ಲೂಟೂತ್ 5.3 ಸಂಪರ್ಕ ಹೊಂದಿದೆ. ಈ ಟ್ಯಾಬ್ ಗೆ ಸಿಮ್ ಹಾಕಲಾಗುವುದಿಲ್ಲ. OnePlus  ಸೆಲ್ಯುಲಾರ್ ಡೇಟಾ ಹಂಚಿಕೆ ವೈಶಿಷ್ಟ್ಯ ಹೊಂದಿದೆ. ಇದರ ಮೂಲಕ ಟ್ಯಾಬ್ಲೆಟ್ ಅನ್ನು OnePlus ಸ್ಮಾರ್ಟ್‌ಫೋನ್‌ಗೆ ಸ್ವಯಂ-ಸಂಪರ್ಕಿಸುತ್ತದೆ. ಸೆಲ್ಯುಲರ್ ಡಾಟಾ ಶೇರ್ ಮೂಲಕ ಫೋನ್ ನಲ್ಲಿರುವ ನೆಟ್ ವರ್ಕ್ ವೇಗವೇ ಟ್ಯಾಬ್ ಗೂ ದೊರಕುತ್ತದೆ.

ಸಿಮ್ ಇಲ್ಲದಾಗ್ಯೂ OnePlus ಪ್ಯಾಡ್‌ನಿಂದ WhatsApp ಮೂಲಕ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು. ಸೆಲ್ಫಿ ಕ್ಯಾಮೆರಾ ಒನ್‌ ಪ್ಲಸ್‌ನ ಲೈಮ್‌ ಲೈಟ್ ಕ್ಯಾಮೆರಾ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ವೀಡಿಯೊ ಕರೆಗಳ ಸಮಯದಲ್ಲಿ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

OnePlus Pad ಕೆಲವು ಟ್ಯಾಬ್ಲೆಟ್ ಸ್ನೇಹಿ ಕಸ್ಟಮೈಸೇಶನ್‌ಗಳ ಜೊತೆಗೆ Android 13 ಅನ್ನು ಆಧರಿಸಿದ OxygenOS 13.1 ಇಂಟರ್ ಫೇಸ್ ಹೊಂದಿದೆ.

ಮರುಗಾತ್ರಗೊಳಿಸಬಹುದಾದ ಫ್ಲೋಟಿಂಗ್ ವಿಂಡೋದಲ್ಲಿ ಒಂದು ಅಪ್ಲಿಕೇಶನ್ ಅನ್ನು ತೆರೆಯಬಹುದು ಮತ್ತು ಸ್ಪ್ಲಿಟ್ ವಿಂಡೋ ವೈಶಿಷ್ಟ್ಯವನ್ನು ಬಳಸಿಕೊಂಡು ಎರಡು ಅಪ್ಲಿಕೇಶನ್‌ಗಳನ್ನು ಅಕ್ಕಪಕ್ಕದಲ್ಲಿ ತೆರೆಯಬಹುದು. ಹೀಗೆ ಒಂದೇ ಬಾರಿಗೆ ಒಟ್ಟು ಮೂರು ಅಪ್ಲಿಕೇಶನ್‌ಗಳನ್ನು ತೆರೆಯಬಹುದಾಗಿದೆ.

ಈ ಪ್ಯಾಡ್ AnTuTu (v10) ನಲ್ಲಿ  8,29,370 ಸ್ಕೋರ್ ಹೊಂದಿದೆ.

ಒಟ್ಟಾರೆ ಗೇಮಿಂಗ್ ಕಾರ್ಯಕ್ಷಮತೆ ಉತ್ತಮವಾಗಿದೆ. ಸತತವಾಗಿ 30 ನಿಮಿಷಗಳ ಕಾಲ ಗೇಮಿಂಗ್ ಆಡಿದ ನಂತರವೂ ಬಿಸಿಯಾಗಲಿಲ್ಲ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ಯಾಬ್ಲೆಟ್-ಆಪ್ಟಿಮೈಸ್ಡ್ ಅಪ್ಲಿಕೇಶನ್‌ಗಳ ಕೊರತೆಯಿದೆ. ಆದರೆ ಈ ಪ್ಯಾಡ್ ನಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳ ಅಪ್ಲಿಕೇಶನ್‌ಗಳು ಸಹ ಕಾರ್ಯ ನಿರ್ವಹಿಸುವ ಮೂಲಕ ಕೊರತೆಯನ್ನು ನಿಭಾಯಿಸುತ್ತದೆ.

ಕ್ಯಾಮೆರಾ: OnePlus Pad 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾದಲ್ಲಿ ಚಿತ್ರದ ಗುಣಮಟ್ಟವು ಉತ್ತಮವಾಗಿದೆ. ಸೆಲ್ಫಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಹಿಂಬದಿ ಕ್ಯಾಮರಾಕ್ಕೆ ಹೋಲಿಸಿದರೆ ಸೆಲ್ಫಿ ಕ್ಯಾಮರಾ ಗುಣಮಟ್ಟ ಕಡಿಮೆ. ಆದರೆ ಟ್ಯಾಬ್ ಗಳಲ್ಲಿ ಮೊಬೈಲ್ ಫೋನ್ ಗಳಲ್ಲಿ ಬರುವಂತಹ ಗುಣಮಟ್ಟದ ಕ್ಯಾಮರಾದ ಅವಶ್ಯಕತೆಯಿಲ್ಲ. ಟ್ಯಾಬ್ ಗಳಲ್ಲಿ ಕ್ಯಾಮರಾ ಬಳಕೆ ಕಡಿಮೆಯಿರುವುದರಿಂದ ಸಾಧಾರಣ ಕ್ಯಾಮರಾ ಇದ್ದರೂ ಸಾಕಾಗುತ್ತದೆ.

ಬ್ಯಾಟರಿ: ಇದರಲ್ಲಿ 9,510 mAh ಬ್ಯಾಟರಿ ಇದೆ. ಬಾಕ್ಸ್ ನಲ್ಲಿ 100W ಚಾರ್ಜರ್ ನೀಡಲಾಗಿದೆ. OnePlus ಪ್ಯಾಡ್‌ನ ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಎರಡು ದಿನಗಳ ಕಾಲ ಬರುತ್ತದೆ.

30 ನಿಮಿಷಗಳಲ್ಲಿ ಶೇ. 47ರಷ್ಟು ಒಂದು ಗಂಟೆಯಲ್ಲಿ ಶೇ. 85 ಮತ್ತು 1 ಗಂಟೆ 30 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. 9 ಸಾವಿರ ಎಂಎಎಚ್ ಬ್ಯಾಟರಿಗೆ ಈ ಚಾರ್ಜಿಂಗ್ ವೇಗ ಅತ್ಯುತ್ತಮ ಎಂದೇ ಹೇಳಬಹುದು.

ಸಾರಾಂಶ: ಒಟ್ಟಾರೆಯಾಗಿ ಹೇಳುವುದಾದರೆ, ಒನ್ ಪ್ಲಸ್ ನ ಪ್ರೀಮಿಯಂ ಫೋನ್ ಗಳಂತೆಯೇ ಅದರ ಮೊದಲ ಒನ್ ಪ್ಲಸ್ ಪ್ಯಾಡ್ ಸಹ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುತ್ತದೆ. ಲ್ಯಾಪ್ ಟಾಪ್ ಗಿಂತ ಕಿರಿದಾದ, ಮೊಬೈಲ್ ಗಿಂತಲೂ ದೊಡ್ಡದಾದ ಹ್ಯಾಂಡಿಯಾಗಿರುವ ಉತ್ತಮ ಟ್ಯಾಬ್ ಇದೆಂದು ಹೇಳಬಹುದು.

-ಕೆ.ಎಸ್. ಬನಶಂಕರ ಆರಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next