Advertisement

ಬೆದರು ಬೊಂಬೆ ನೋಡಿ ಹೆದರದಿರಿ!

11:06 AM Mar 03, 2018 | |

ಹಾರರ್‌ ಚಿತ್ರ ಅಂದಮೇಲೆ, ಸಿನಿಮಾದೊಳಗಿನ ದೆವ್ವಕ್ಕೆ ಹೆದರಬೇಕು ಇಲ್ಲವೇ, ಸರಕ್‌, ಪರಕ್‌ ಅಂತ ಸಡನ್‌ ಆಗಿ, ಹಿನ್ನೆಲೆ ಸಂಗೀತದ ಎಫೆಕ್ಟ್ನೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳುವ ನೆರಳಿಗಾದರೂ ಹೆದರಬೇಕು. ಆದರೆ, “ಚಿನ್ನದ ಗೊಂಬೆ’ಯಲ್ಲಿ ಹೆದರಿಸೋದೇ ತೆರೆ ಮೇಲಿನ ಪಾತ್ರಗಳು! ಕಾಣಿಸಿಕೊಳ್ಳುವ ಒಂದೊಂದು ಪಾತ್ರಗಳಿಗೂ ನಗಬೇಕೋ, ಅಳಬೇಕೋ ಎಂಬ ಗೊಂದಲ ನೋಡುಗನದು.

Advertisement

ಅಷ್ಟರಮಟ್ಟಿಗೆ ಪ್ರೇಕ್ಷಕನನ್ನು ಹಿಂಡಿ ಹಿಪ್ಪೆ ಮಾಡುವಂತಹ ಸ್ಕ್ರಿಪ್ಟ್ ಮೂಲಕ “ಭಯಂಕರ’ ಹೆದರಿಸಿದ್ದಾರೆ ನಿರ್ದೇಶಕರು.  ಇಲ್ಲಿ ಹೊಸದಾಗಿ ಯಾವುದಾದರೊಂದು ಅಂಶ ಕಾಣಸಿಗುತ್ತಾ ಎಂಬ ಭ್ರಮೆ ಇಟ್ಟುಕೊಂಡು ಚಿತ್ರ ನೋಡುವಂತಿಲ್ಲ. ತಿರುಗ ಮುರುಗ ಅದೇ ಅಪಹಾಸ್ಯ ಎನಿಸುವ “ಕೆಟ್ಟ’ ಕಾಮಿಡಿಯೇ ಚಿತ್ರದ ವೀಕ್‌ನೆಸ್ಸು ಮತ್ತು ಮೈನಸ್ಸು. ಒಂದು ಚೌಕಟ್ಟಿನ ಕಥೆ ಇಲ್ಲ, ಚಿತ್ರಕಥೆ ಬಗ್ಗೆಯಂತೂ ಹೇಳುವಂತಿಲ್ಲ.

ಹೋಗಲಿ, ನಿರೂಪಣೆಯಾದರೂ ನೋಡುಗನನ್ನು ಹಿಡಿದು ಕೂರಿಸುತ್ತಾ? ಅದೂ ಇಲ್ಲಿ ಕೇಳಂಗಿಲ್ಲ. ನೋಡುಗನ ತಾಳ್ಮೆ ಪರೀಕ್ಷಿಸುವುದೇ “ಪರಮ’ ಗುರಿ ಅಂದುಕೊಂಡೇ ನಿರ್ದೇಶನ ಮಾಡಿದ್ದಾರೆ ಪಂಕಜ್‌ ಬಾಲನ್‌. ಇಲ್ಲಿ ರಾತ್ರಿಗಿಂತ ಹಗಲಿನಲ್ಲೇ ದೆವ್ವ ಹೆಚ್ಚು ಓಡಾಡುತ್ತೆ. ಎಲ್ಲರ ಕಣ್ಣಿಗೂ ಸಲೀಸಾಗಿ ಕಾಣುತ್ತೆ ಮತ್ತು ಮಾತನಾಡುತ್ತೆ. ಅಷ್ಟೇ ಅಲ್ಲ, ಹಗಲಲ್ಲಿ ನಡೆಯೋ ಶೂಟಿಂಗ್‌ ನೋಡಿ ನಗುತ್ತೆ. ಆದರೆ ಹೆದರಿಸುತ್ತೆ ಎಂಬುದೆಲ್ಲಾ ಸುಳ್ಳು.

ಇಲ್ಲಿ ಹೆದರಿಸೋದು, ನಿರ್ದೇಶಕರ ಸ್ಕ್ರಿಪು! ಹೇಗಾದರೂ ಒಂದು ಚಿತ್ರ ಮಾಡಿಬಿಡಬೇಕು ಎಂಬ ಧಾವಂತ ನಿರ್ದೇಶಕರದ್ದು. ಆ ಕಾರಣಕ್ಕೆ, ಚಿನ್ನದ ಗೊಂಬೆ, ಬೆದರು ಗೊಂಬೆಯಂತಾಗಿದೆ. ಕಥೆಯಲ್ಲಿ ಹೊಸತನಲ್ಲ, ಯಾವುದೇ ಟ್ವಿಸ್ಟುಗಳಿಲ್ಲ. ಸೇಡು ತೀರಿಸಿಕೊಳ್ಳುವ ದೆವ್ವದ ಕಥೆ ಇಲ್ಲಿದೆ. ಆದರೆ, ಸೇಡಿಗೊಂದು ಬಲವಾದ ಕಾರಣವೂ ಇಲ್ಲಿಲ್ಲ. ಇದ್ದರೂ, ಅದು ಪರಿಣಾಮಕಾರಿಯಾಗಿಲ್ಲ. “ಚಿನ್ನದ ಗೊಂಬೆ’ಯಲ್ಲಿ ಹೊಸತನಕ್ಕೆ ಅರ್ಥವಿಲ್ಲ.

ಎಂದೋ ನೋಡಿರುವ ದೃಶ್ಯಗಳು, ಎಲ್ಲೋ ಕೇಳಿಬರುವ ಮಾತುಗಳೇ ತುಂಬಿವೆ. ಅಲ್ಲಲ್ಲೇ ಸುತ್ತುವ ಪಾತ್ರಗಳಿಗೆ ಲಂಗು-ಲಗಾಮೇ ಇಲ್ಲ. ಇಂತಹ ಇನ್ನೂ ಅನೇಕ ಕಾರಣಗಳು ಚಿತ್ರದ ಹಿನ್ನೆಡೆಗೆ ಸಾಕ್ಷ್ಯ ಒದಗಿಸುತ್ತವೆ. ಮೊದಲೇ ಹೇಳಿದಂತೆ, ಚಿತ್ರದ ಶೀರ್ಷಿಕೆಗೂ ಕಥೆಗೂ ಸಂಬಂಧವಿಲ್ಲ. ತುಂಬ ಸರಳ ಕಥೆಗೆ ಅಷ್ಟೇ ಸೋಮಾರಿತನದ ಚಿತ್ರಕಥೆಯೂ ಇಲ್ಲುಂಟು. ತಡಬುಡವಿಲ್ಲದ ದೃಶ್ಯಗಳು ನೋಡುಗನನ್ನು ಅತ್ತಿತ್ತ ತಿರುಗಾಡುವಂತೆ ಮಾಡುವುದು ಸುಳ್ಳಲ್ಲ.

Advertisement

ನಾಯಕ ರಣಧೀರನಿಗೆ ತಾನೊಬ್ಬ ನಟನಾಗಬೇಕೆಂಬ ಆಸೆ. ನಾಯಕಿ ಐಶೂಗೆ ನಟಿಯಾಗುವ ಆಸೆ. ಇಬ್ಬರೂ ಅವಕಾಶಕ್ಕಾಗಿ ಅಲೆದಾಡುತ್ತಾರೆ. ಕೊನೆಗೊಬ್ಬ ನಿರ್ದೇಶಕ ಇವರಿಗೆ ಆಡಿಷನ್‌ ಮಾಡಿ ಆಯ್ಕೆ ಮಾಡಿಕೊಂಡು, ಹಳ್ಳಿಯೊಂದಕ್ಕೆ ಚಿತ್ರೀಕರಣಕ್ಕಾಗಿ ಕರೆದೊಯ್ಯುತ್ತಾನೆ. ಆ ಹಳ್ಳಿಯಲ್ಲೊಬ್ಬ ಮುಖಂಡ. ಅದಾಗಲೇ ಆ ಊರಲ್ಲಿ ಹಿಂದೆ ಶೂಟಿಂಗ್‌ಗೆ ಬಂದಿದ್ದ ನಾಯಕಿ ಮೇಲೆ ಕಣ್ಣು ಹಾಕಿ, ಅವಳ ಸಾವಿಗೆ ಕಾರಣವಾಗಿರುತ್ತಾನೆ.

ಆ ನಾಯಕಿ ದೆವ್ವವಾಗಿ ಸೇಡು ತೀರಿಸಿಕೊಳ್ಳಲು ರಾತ್ರಿ-ಹಗಲೆನ್ನದೆ ಓಡಾಡುತ್ತಿರುತ್ತಾಳೆ. ಆ ಊರಿಗೆ ಹೋಗುವ ಚಿತ್ರತಂಡಕ್ಕೆ ಆ ದೆವ್ವ ಹೇಗೆ ಕಾಡುತ್ತೆ, ಹೇಗೆಲ್ಲಾ ಕಾಪಾಡುತ್ತೆ ಎಂಬುದೇ ತಿರುಳು. ಇಲ್ಲಿ ದೆವ್ವ ಇದೆ ಅಂದಾಕ್ಷಣ ಹೆದರಬೇಕಿಲ್ಲ. ಹಾಗಂತ, ಮನಸಾರೆ ನಗುವಂಥದ್ದೂ ಇಲ್ಲ. ಆದರೆ, ಮನಬಂದಂತೆ ಮಾತಾಡಿಕೊಳ್ಳುವಂತಹ ಚಿತ್ರವಂತೂ ಹೌದು. ಕೀರ್ತಿಕೃಷ್ಣ ಇನ್ನೂ ನಟನೆಯಲ್ಲಿ ಪಳಗಬೇಕು.

ಡೈಲಾಗ್‌ ಹರಿಬಿಡುವುದೊಂದೇ ನಟನೆ ಅಂದುಕೊಂಡಂತಿದೆ. ಕೃಷ್ಣಪ್ಪ ಅವರ ನಾಟಕೀಯತೆ ಹೆಚ್ಚಾಯ್ತು. ಪಂಕಜ್‌ ಬಾಲನ್‌ ತೆರೆ ಹಿಂದೆಯೂ ಇಲ್ಲ, ತೆರೆ ಮುಂದೆಯೂ ಇಲ್ಲವೆಂಬಂತಿದ್ದಾರೆ. ಲೀನಾ ಖುಷಿ, ಅಂಜಶ್ರೀ, ಇಬ್ಬರು ನಾಯಕಿಯರ ನಟನೆ ಅವರಿಗೇ ಪ್ರೀತಿ. ಗಡ್ಡಪ್ಪ, ಸೆಂಚುರಿಗೌಡ ಅವರನ್ನಿಲ್ಲಿ ಸರಿಯಾಗಿ ಬಳಸಿಕೊಂಡಿಲ್ಲವೆಂಬುದೇ ಬೇಸರ. ಉಳಿದಂತೆ ಬರುವ ಪಾತ್ರಗಳ್ಯಾವೂ ಗಮನಸೆಳೆಯಲ್ಲ. ಧನಶೀಲನ್‌ ಸಂಗೀತದಲ್ಲಿ ಹಾಡಿರಲಿ, ಹಿನ್ನೆಲೆ ಸಂಗೀತವೇ ವೀಕು. ವೆಂಕಿ ದರ್ಶನ್‌ ಕ್ಯಾಮೆರಾ ಕೈಚಳಕ ಬಗ್ಗೆ ಹೇಳುವುದೇನೂ ಇಲ್ಲ.

ಚಿತ್ರ: ಚಿನ್ನದ ಗೊಂಬೆ
ನಿರ್ಮಾಣ: ಪಿ. ಕೃಷ್ಣಪ್ಪ
ನಿರ್ದೇಶನ: ಪಂಕಜ್‌ ಬಾಲನ್‌
ತಾರಾಗಣ: ಕೀರ್ತಿ ಕೃಷ್ಣ, ಲೀನಾ ಖುಷಿ, ಅಂಜಶ್ರೀ, ಗಡ್ಡಪ್ಪ, ಸೆಂಚುರಿ ಗೌಡ, ಪೇನಮಣಿ, ಪಂಕಜ್‌ ಬಾಲನ್‌, ಕೃಷ್ಣಪ್ಪ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next