Advertisement

ಮತ್ತೆ ಬದುಕು ಕಟ್ಟಿಕೊಳ್ಳುವ ಹಂಬಲಕ್ಕೂ ಭಯದ ನೆರಳು ಕಾಡುತ್ತಿದೆ!

01:43 AM Aug 18, 2019 | sudhir |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು
ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.

Advertisement

ಬೆಳ್ತಂಗಡಿ: ನಾನು ಐವತ್ತು ವರ್ಷ ಇಲ್ಲಿ ಬದುಕಿದೆ. ನನ್ನ ಮಕ್ಕಳು ಇನ್ನೂ ಬಾಳಿ ಬದುಕಬೇಕಾದವರು. ಈ ಊರೇ ಬೇಡ ಎನ್ನುತ್ತಾ ಹೊರಟು ನಿಂತವರು 103 ವರ್ಷದ ಸೀತಜ್ಜಿ.

ಮೊನ್ನೆಯಷ್ಟೇ ಸುರಿದ ಮಳೆಗೆ ಪಶ್ಚಿಮ ಘಟ್ಟದ ದುರ್ಗಾದ ಕೋಟೆ ಬೆಟ್ಟ ಜರಿದ ಪರಿಣಾಮ ಈ ನಿರ್ಧಾರಕ್ಕೆ ಬಂದಿದ್ದಾರೆ ಅಜ್ಜಿ. ಮಲವಂತಿಗೆ ಗ್ರಾಮದ ಮಕ್ಕಿ, ಪರ್ಲ, ಇಲ್ಯರಕಂಡ, ಬೈಲುಗಳ ಹಲವಾರು ಕುಟುಂಬಗಳದ್ದು ಇದೇ ಕಥೆ.

ಇರುವ ಅರ್ಧ ಎಕ್ರೆ ಜಾಗದಲ್ಲಿ ಪತಿ, ಎರಡು ಮಕ್ಕಳ ಜತೆ 3 ವರ್ಷದಿಂದ ವಾಸಿಸುತ್ತಿದ್ದ ಅಪ್ಪಂದೊಡ್ಡು ಸುಮಿತ್ರಾ ಅವರಿಗೆ ಶುಕ್ರವಾರ ಮತ್ತೆ ಬದುಕಿ ಬಂದ ಅನುಭವ. ಅಂದು ಆ.9. ಸಂಜೆ ಒಂದೂವರೆ ಮತ್ತು ಎರಡೂವರೆ ವರ್ಷದ ಮಕ್ಕಳನ್ನು ಜೋಗುಳ ಹಾಡಿ ಮಲಗಿಸಿದ್ದರಷ್ಟೆ. ಮಕ್ಕಳಿಬ್ಬರು ಅರ್ಧ ನಿದ್ರೆಗೆ ಜಾರಿದ್ದರು. ಮನೆಯ ಒಂದು ಮೆಟ್ಟಿಲು ಇಳಿದಾಗ ಪಕ್ಕದಲ್ಲಿದ್ದ ಹಳ್ಳ ರೌದ್ರ ನರ್ತನ ತೋರುತ್ತಾ ಬಾಗಿಲ ಕಾದು ನಿಂತಿದ್ದುದು ಕಾಣಿಸಿತಂತೆ.
“”ಪತಿಯನ್ನು ಕೂಗಿ ಮಕ್ಕಳಿಬ್ಬರನ್ನು ಬಾಚಿ ಹೆಗಲಿಗೆ ಹಾಕುವಷ್ಟರಲ್ಲಿ ನೆರೆ ಕಂಕುಳ ತನಕ ಏರಿತ್ತು. ಪತಿ ಎರಡು ದನ, ಎರಡು ಕರು ಬಿಚ್ಚಿ ಓಡಿದರು. ಮಗಳು ಕೆಸರು ನೀರು ಕುಡಿದರೂ ದೇವರು ಕೈಬಿಡಲಿಲ್ಲ; ಜೀವ ಉಳಿಸಿದ. ಓಡೋಡಿ ಗುಡ್ಡ ಏರಿದವರು ಅಗರಿಮನೆಯಲ್ಲಿ ಆಶ್ರಯ ಪಡೆದೆವು. ಮತ್ತೆ ಮನೆ ಕಡೆ ಹೋಗಲು ಭಯ” ಎನ್ನುವಾಗ ಸುಮಿತ್ರಾ ಕಣ್ಣಾಲಿ ತೇವವಾಗಿತ್ತು.

ಸೂತಕದಲ್ಲೂ ಬರೆ ಎಳೆದ ನೆರೆ
12 ಮಕ್ಕಳ ಒಡತಿಯಾದ ಮಕ್ಕಿಮನೆ ಸೀತಮ್ಮ ಅಜ್ಜಿಯ ಮಗ ತೀರಿ ನಾಲ್ಕು ದಿನವಾಗಿರಲಿಲ್ಲ. ಸೂತಕ ಕಳೆದು ಮತ್ತೆ ಹೊಸಬದುಕಿಗೆ ನಾಂದಿ ಹಾಡಬೇಕೆನ್ನುವಷ್ಟರಲ್ಲಿ ಗುಡ್ಡ ಜರಿದು ಮನೆ ಹಿಂಬದಿ ನಿಂತಿತ್ತು. “”ನಾನು ಮನೆಯಲ್ಲಿ ಕುಳಿತಿದ್ದೆ, ಮನೆಮುಂದೆ ಚಪ್ಪರ ಹಾಕಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲಾಗಲೇ ದೊಡ್ಡ ಶಬ್ದ ಕೇಳಿತು. ಮಗಳು ಓ ಅಮ್ಮ ಬಲಿಪುಲೆ ಎಂದಳು . ನಾನು ನಡೆಯಲಾಗದವಳು ಎಲ್ಲಿಗೆ ಓಡಲಿ? ನನ್ನನ್ನು ಎತ್ತಿಕೊಂಡೇ ಓಡಿ ಬಂದರು. ನಮ್ಮ ಹಿಂದೆಯೇ ನಮ್ಮ ಕೃಷಿಭೂಮಿಯನ್ನೆಲ್ಲ ಗುಡ್ಡದ ಮಣ್ಣು ಆವರಿಸಿತ್ತು. ಪ್ರತಿ ವರ್ಷ ಆನೆ ಹಾವಳಿಯಿಂದ ತತ್ತರಿಸಿದ ನಮಗೆ ಈಗ ನೆರೆ ಬೆಚ್ಚಿ ಬೀಳಿಸಿದೆ. ನಾನು 50 ವರ್ಷ ಜೀವ ಸವೆಸಿದೆ. ನನ್ನ ಮಕ್ಕಳು ಬದುಕಿ ಬಾಳಬೇಕಾದವರು. ಆ ಊರೇ ನಮಗೆ ಬೇಡ’ ಎಂದು ಮಗುವಿನಂತೆ ಅಜ್ಜಿ ಪಟ್ಟು ಹಿಡಿಯುವಾಗ ಆ ಹಿರಿ ಜೀವದ ಕಣ್ಣುಗಳಲ್ಲಿ ಲಯ ತಪ್ಪಿದರೆ ನುಂಗಿ ನೊಣೆಯಬಲ್ಲ ಪ್ರಕೃತಿಯ ರೌದ್ರಾವತಾರವನ್ನು ಪ್ರತ್ಯಕ್ಷ ಕಂಡ ಭೀತಿ ಕುಣಿಯುತ್ತಿತ್ತು.

Advertisement

ನೆರೆ ಸಂತ್ರಸ್ತರಿಗೆ ಅಗರಿಮನೆ ನೆಲೆ
ಮಲವಂತಿಗೆ ಗ್ರಾಮದ ಪರ್ಲ, ಇಲ್ಯರಕಂಡ, ಬೈಲು, ಬೈಪಿತ್ತಿಲು, ಕೆಳಗಿನಮಕ್ಕಿ ಸೇರಿದಂತೆ ಸುಮುತ್ತಲ 14 ಮನೆಗಳ 57 ಮಂದಿ ಮಕ್ಕಳು ಹಿರಿಯರು ಮಿತ್ತಬಾಗಿಲು ಗ್ರಾಮದ ಅಗರಿಮಾರು ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. 23 ಮಂದಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಎಲ್ಲರೂ ಶಾಲೆಗೆ ತೆರಳುತ್ತಿದ್ದಾರೆ. ಶಿಕ್ಷಣ ಇಲಾಖೆ ಸಕಲ ವ್ಯವಸ್ಥೆ ಕಲ್ಪಿಸಿದೆ.

ಬದುಕು ಒಡೆದ ದುರ್ಗದ ಕೋಟೆ
ಪಶ್ಚಿಮ ಘಟ್ಟದ ದುರ್ಗದ ಕೋಟೆ ವೈರಿಗಳ ರಕ್ಷಣೆಗೆ ಕಟ್ಟಿದ ಕಟ್ಟಾಳುಗಳಿಂದಲೂ ಬಲಿಷ್ಟವಾಗಿತ್ತು. ತನ್ನ ಪಾದದಡಿ ಬದುಕು ಕಟ್ಟಿದ್ದವರನ್ನು ಇಷ್ಟು ದಿನ ರಕ್ಷಿಸಿತ್ತು. ಆನೆ ಹಾವಳಿಗೂ ಜಗ್ಗದ ಮಂದಿ ಪ್ರಕೃತಿ ವಿಕೋಪಕ್ಕೆ ಕುಗ್ಗಿದ್ದಾರೆ. ದುರ್ಗದ ಕೋಟೆ ನಡುಗುತ್ತಿದೆ. ಸರಿಸುಮಾರು ಐದಾರು ಕಡೆ ಗುಡ್ಡೆ ಜರಿಯುತ್ತಿದೆ. ಇದು ವಿನಾಶದ ಮುನ್ನುಡಿ ಎಂದು ಪರಿಸರದ ನಿವಾಸಿಗಳು ಭಯಭೀತರಾಗಿದ್ದಾರೆ.

ಮತ್ತೆ ನಿರ್ಮಾಣ ಅಸಾಧ್ಯ
“”ನಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದೆ. ಭಯಾನಕ ಸ್ಫೋಟವಾಯಿತು. ಯುದ್ಧ ಭೂಮಿಯ ಚಿತ್ರಣ, ಸದ್ದು ಟಿವಿಯಲ್ಲಿ ನೋಡಿ-ಕೇಳಿದ್ದೆ. ಆದರೆ ಅದು ಕಣ್ಣೆದುರೇ ಸೃಷ್ಟಿಯಾದಂತಿತ್ತು. ಆಳೆತ್ತರದ ಬಂಡೆಗಲ್ಲು ಗದ್ದೆಗೆ ಅಪ್ಪಳಿಸಿತ್ತು. ಕೋಣ ಮೇಯಿಸುತ್ತಿದ್ದ ಅಜ್ಜನನ್ನು ಓಡಲು ಹೇಳಿದೆ. ಅಷ್ಟರಲ್ಲಾಗಲೇ ಕೆಸರು ಸಹಿತ ನೀರು ಕುತ್ತಿಗೆ ತನಕ ಬಂದಿತ್ತು. ಗದ್ದೆ ಮಣ್ಣಿನ ದಿಬ್ಬವಾಗಿತ್ತು. ಜಾಗವೆಲ್ಲ ಹೂತು ಹೋಯಿತು. ಮತ್ತೆ ಹಿಂದಿರುಗಿ ನೋಡಿಲ್ಲ, ಸ್ಥಳೀಯರು ರಕ್ಷಣೆಗೆ ಬಂದರು” ಎಂದು ವಿವರಿಸುವಾಗ ಪರ್ಲದ ಯುವಕ ಪ್ರವೀಣ್‌ ಎದೆಯಲ್ಲೂ ಭಯದ ತಿದಿ ಏರಿಳಿಯುತ್ತಿತ್ತು.

ಬಡಿಗೆಯಲ್ಲಿ ಕಟ್ಟಿ ಓಡಿ ತಂದರು
ನಾನು ನಾಲ್ಕು ವರ್ಷಗಳಿಂದ ಆನಾರೋಗ್ಯ ಪೀಡಿತನಾಗಿದ್ದೇನೆ. ನಡೆದಾಡಲು ಮತ್ತೂಬ್ಬರ ಸಹಾಯ ಬೇಕಿದೆ. ಇಂಥ ಕಷ್ಟದ ದಿನಗಳಲ್ಲೇ ದುರ್ಗದ ಕೋಟೆ ಕುಗ್ಗಿ ನಮ್ಮ ಬದುಕನ್ನು ಬರಿದಾಗಿಸಿದೆ ಎಂದು ವಿಕೋಪದ ಚಿತ್ರಣ ತೆರೆದಿಟ್ಟರು ಕೆಳಗಿನ ಮಕ್ಕಿ ಸೀನಪ್ಪ ಗೌಡ. “”ಮನೆಯಲ್ಲಿದ್ದೆ. ಮನೆ ಮಂದಿ ಅವರವರ ಕೆಲಸದಲ್ಲಿದ್ದರು. ಆಗ ಕೇಳಿಸಿದ ಸದ್ದಿಗೆ ನಾನು ಕುಳಿತಲ್ಲೇ ಬೆಚ್ಚಿ ಬಿದ್ದೆ. ಗುಡ್ಡ ಕುಸಿಯುತ್ತಾ ಬರುತ್ತಿರುವಾಗ ತಮ್ಮ ಪ್ರಾಣ ರಕ್ಷಿಸಿಕೊಳ್ಳುವುದೇ ಕಷ್ಟ ಎಂದಿದ್ದರೂ ಮಕ್ಕಳು ನನ್ನನ್ನು ಒಂದು ಕಿ.ಮೀ. ದೂರ ಎತ್ತಿ ತಂದರು. ಬಳಿಕ ಬೇರೆಯವರ ಸಹಾಯದಿಂದ ಬಡಿಗೆಯಲ್ಲಿ ಕಟ್ಟಿ ಬಟ್ಟೆ ಸುತ್ತಿ 7 ಕಿ.ಮೀ. ಹೊತ್ತೂಯ್ದರು. ಕೊನೆಗೂ ಸುರಕ್ಷಿತ ಸ್ಥಳಕ್ಕೆ ಮುಟ್ಟಿದಾಗ ಅವರೆಲ್ಲ ದೇವರಂತೆ ನನಗೆ ಕಂಡರು” ಎನ್ನುತ್ತಾರೆ ಗೌಡರು.

ಇರುವ 9 ಎಕ್ರೆ ಭೂಮಿಯಲ್ಲಿ 4 ಎಕ್ರೆಯಲ್ಲಿ ಮಣ್ಣು ತುಂಬಿದೆ ಎಂದು ಮಕ್ಕಳು ಹೇಳುತ್ತಿದ್ದಾರೆ. ಅವರನ್ನು ಮತ್ತೆ ಕಳುಹಿಸಲು ನನಗೆ ಭಯವಾಗುತ್ತಿದೆ. ನನ್ನ ಜೀವಮಾನದಲ್ಲಿ ಇಂತಹ ಘಟನೆ ಕೇಳಿರಲಿಲ್ಲ, ನೋಡಿರಲಿಲ್ಲ. ನನ್ನ ಸಾಕು ಪ್ರಾಣಿಗಳು, ನನ್ನ ಪ್ರಾಣವನ್ನು ಮಕ್ಕಳು ಉಳಿಸಿದ್ದಾರೆ.
– ಸೀತಮ್ಮ, ಮಕ್ಕಿ ಮನೆ

ಬೆಂಕಿಪೊಟ್ಟಣ ತರಲು 5 ಕಿ.ಮೀ. ನಡೆದು ಕಾಜೂರು ತಲುಪಬೇಕಿತ್ತು. ಮೊನ್ನೆ ನಡೆದ ಘಟನೆ ನಮ್ಮನ್ನು ಮತ್ತಷ್ಟು ಪೇಟೆಯ ಸಮೀಪಕ್ಕೆ ಕರೆ ತಂದಿದೆ. ಸಾಧ್ಯವಿಲ್ಲ, ಮತ್ತೆ ಆ ಊರು ನಮಗೆ ಬೇಡ, ವಿದ್ಯುತ್‌ ಮರುಸೃಷ್ಟಿಸಲು ಸಾಧ್ಯವಿಲ್ಲ. ನಮಗೆ ಬೇರೆ ಕಡೆ ಜಾಗ ಮನೆ ಬೇಕಿದೆ.
-ಪ್ರವೀಣ್‌, ಪರ್ಲ

ಸಂತೋಷಕ್ಕಾಗಿ ಸೇರುತ್ತಿದ್ದ ಮನೆ ಇಂದು ನೋವಿನಿಂದ ಕೂಡಿದೆ. 57 ಮಂದಿ ಸಂತ್ರಸ್ತರು ನಮ್ಮ ಮನೆಯನ್ನು ಆಶ್ರಯಿಸಿದ್ದಾರೆ. 40 ಎಕ್ರೆ ಜಾಗವಿರುವ ನಮಗೆ ಎಲ್ಲಿ ಹಾನಿಯಾಗಿದೆ ಎಂಬುದು ತಿಳಿದಿಲ್ಲ. ಅದನ್ನು ಲೆಕ್ಕಿಸದೆ ಸಂತ್ರಸ್ತರ ಸಲಹುತ್ತಿದ್ದೇವೆ. ದಾನಿಗಳಿಂದ ಎಲ್ಲ ರೀತಿಯಲ್ಲಿ ಸಹಕಾರ ಸಿಕ್ಕಿದೆ. ಅಧಿಕಾರಿಗಳು, ಶಾಸಕರು ಭೇಟಿ ನೀಡಿದ್ದಾರೆ.
– ಜಲಜಾಕ್ಷಿ, ಅಗರಿಮಾರು ಮನೆಯ ಯಜಮಾನಿ

ಅರ್ಧ ಎಕ್ರೆ ಜಾಗ -ಮನೆ ಕಳೆದುಕೊಂಡಿದ್ದೇವೆ. ದನ ಕರು ಬದುಕಿಸಿ ನಮ್ಮ ಜೀವ ಉಳಿಸಿಕೊಂಡಿದ್ದೇವೆ. ಮಕ್ಕಳು ನೆರಿಯದ ತಾಯಿ ಮನೆಯಲ್ಲಿದ್ದಾರೆ. ನಮಗೆ ಮತ್ತೆ ಹಿಂದಿರುಗಿ ಅದೇ ಪ್ರದೇಶದಲ್ಲಿ ವಾಸಿಸುವ ಧೈರ್ಯವಿಲ್ಲ.
-ಸುಮಿತ್ರಾ, ಅಪ್ಪಂದಡ್ಡು

– ಚೈತ್ರೇಶ್ ಇಳಂತಿಲ 

Advertisement

Udayavani is now on Telegram. Click here to join our channel and stay updated with the latest news.

Next