Advertisement
ಪಕ್ಷೇತರ ಶಾಸಕ: ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬರಲು ಸಜ್ಜಾಗುತ್ತಿರುವ ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಿಡಿಯುವ ಜಾಗವನ್ನು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಭದ್ರಪಡಿಸಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಯಾರಿಗೆ ಬೇಕಾದರೂ ಬೆಂಬಲ ಕೊಡಲು ಸಿದ್ಧ ಎಂಬ ವರ್ತನೆ ತೋರಿಸುತ್ತಿರುವ ಎಚ್.ನಾಗೇಶ್ ಈಗಾಗಲೇ ಎರಡೆರೆಡು ಸುತ್ತು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಎಂಬಂತೆ ಸುತ್ತಾಡಿದ್ದಾರೆ. ಮ್ಯೂಸಿಕಲ್ ಕುರ್ಚಿಯಂತಾಗಿರುವ ಅಧಿಕಾರದ ಕುರ್ಚಿ ಹಿಡಿಯುವ ಪ್ರಯತ್ನದಲ್ಲಿ ಎಚ್.ನಾಗೇಶ್ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡು ಬಿಜೆಪಿಗೆ ಘೋಷಿಸಿದ್ದಾರೆ. ಹೊಸ ಸರ್ಕಾರದಲ್ಲಿ ತಮಗೆ ಅಧಿಕಾರದ ಕುರ್ಚಿ ಖಚಿತ ಎನ್ನುವ ವಿಶ್ವಾಸದಲ್ಲಿ ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಳ್ಳುವ ಮುಹೂರ್ತಕ್ಕೆ ಕಾಯುತ್ತಿದ್ದಾರೆ.
Related Articles
Advertisement
ಕಾಂಗ್ರೆಸ್ ಶಾಸಕರು: ಕೋಲಾರ ಜಿಲ್ಲೆಯಲ್ಲಿರುವ ನಾಲ್ಕು ಮಂದಿ ಶಾಸಕರಿಗೆ ಮೈತ್ರಿ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಅಧಿಕಾರದ ರುಚಿ ತೋರಿಸಿತ್ತು. ರಮೇಶ್‌ಕುಮಾರ್ ಸ್ಪೀಕರ್, ಎಸ್.ಎನ್.ನಾರಾಯಣಸ್ವಾಮಿ ಕೆಲವು ತಿಂಗಳುಗಳ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್ ಅಧ್ಯಕ್ಷ ಹಾಗೂ ಕೆಜಿಎಫ್ ಶಾಸಕ ರೂಪಕಲಾ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ದೊರೆತಿತ್ತು.
ಇದೀಗ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡರೆ ಸಹಕಾರಿ ಸಂಸ್ಥೆ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಾಂಗ್ರೆಸ್ ಶಾಸಕರು ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 28 ವರ್ಷಗಳಿಂದಲೂ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿ ಅವರಿಗೆ ಅಧಿಕಾರ ತಪ್ಪಿಸಲು ಒಗ್ಗೂಡಿದ್ದ ಜೆಡಿಎಸ್- ಕಾಂಗ್ರೆಸ್ ಶಾಸಕರು ಇದೀಗ ಮೈತ್ರಿ ಸರ್ಕಾರದ ಅಸ್ಥಿರತೆಯಿಂದ ತಾವೇ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವುದು ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿದೆ.
● ಕೆ.ಎಸ್.ಗಣೇಶ್