Advertisement

Udupi ಕೈಗಾರಿಕೆಗಳಿಗೆ ಲೋಡ್‌ಶೆಡ್ಡಿಂಗ್‌ ಭೀತಿ

01:00 AM Sep 28, 2023 | Team Udayavani |

ಉಡುಪಿ: ವಿದ್ಯುತ್‌ ದರ ಹೆಚ್ಚಳದ ಜತೆಗೆ ಫಿಕ್ಸೆಡ್ ರೇಟ್‌(ಸ್ಥಿರದರ) ಕೂಡ ಏರಿಸಿದ್ದರ ನಡುವೆಯೇ ಲೋಡ್‌ಶೆಡ್ಡಿಂಗ ಭೀತಿ ಎದುರಾಗಿರುವುದರಿಂದ ಕೈಗಾರಿಕೆಗಳಿಗೆ ಇನ್ನಷ್ಟು ಹೊರೆಯಾಗುವ ಆರೋಪ ಕೇಳಿ ಬರುತ್ತಿದೆ.

Advertisement

ಜಿಲ್ಲೆಯಲ್ಲಿ 10 ಸಾವಿರ ಅತಿ ಸಣ್ಣ ಕೈಗಾರಿಕೆ, 41 ಸಣ್ಣ/ ಮಧ್ಯಮ ಹಾಗೂ 6 ದೊಡ್ಡ ಕೈಗಾರಿಕೆಗಳಿವೆ. ಇವುಗಳಲ್ಲಿ ದಿನದ 24 ಗಂಟೆ, ರಾತ್ರಿ ಮಾತ್ರ ಕಾರ್ಯಚರಿಸುವ ಕೈಗಾರಿಕೆಗಳು ಇವೆ. ದಿನದ 24 ಗಂಟೆ ಕಾರ್ಯಾಚರಿಸುವ ಕೈಗಾರಿಕೆಗಳಿಗೆ ವಿದ್ಯುತ್‌ ಬೇಡಿಕೆ ಹೆಚ್ಚಿರುತ್ತದೆ. ಜಿಲ್ಲೆಯಲ್ಲಿ ನಿತ್ಯ ಸಂಜೆ ವೇಳೆ ಒಂದು ಅಥವಾ ಒಂದುವರೆ ಗಂಟೆಗಳ ವಿದ್ಯುತ್‌ ವ್ಯತ್ಯಯವಾಗುತ್ತಿರುವುದು ಕೈಗಾರಿಕೆಗಳಿಗೆ ಹೆಚ್ಚುವರಿ ಹೊರೆಯಾಗುತ್ತಿದೆ. ಈ ವೇಳೆ ಜನರೇಟರ್‌ ರನ್‌ ಮಾಡಬೇಕಾಗಿದೆ. ಅಲ್ಲದೆ ಕೆಲವು ಕೈಗಾರಿಕೆಗಳ ಉತ್ಪಾದನೆಯ ಮೇಲೂ ಪ್ರಭಾವ ಬೀರುತ್ತಿದೆ ಎಂದು ಕೈಗಾರಿಕೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಫಿಕ್ಸೆಡ್ ದರ ಹೊರೆ: ಕೈಗಾರಿಕೆಗಳು ಬಳಸುವ ವಿದ್ಯುತ್‌ ಆಧಾರದಲ್ಲಿ ಒಂದೊಂದು ಕೈಗಾರಿಕೆಗಳಿಗೆ ಒಂದೊಂದು ರೀತಿಯ ಫಿಕ್ಸೆಡ್ ದರವಿದೆ. (ಉದಾ: ಈ ಹಿಂದೆ ಕನಿಷ್ಠ 256 ರೂ. ಫಿಕ್ಸೆಡ್ ದರ ಇದ್ದರೆ ಈಗ ಅದನ್ನು 360 ರೂ.ಗಳಿಗೆ ಏರಿಸಲಾಗಿದೆ). ಕರಾವಳಿ ಭಾಗದಲ್ಲಿ ಶೇಂಗಾ ಮೌಲ್ಯವರ್ಧನ ಕಾರ್ಖಾನೆ, ಸಣ್ಣ ಅಕ್ಕಿ ಗಿರಾಣಿ, ಐಸ್‌ ಪ್ಲಾಂಟ್‌, ಐಸ್‌ಕ್ರೀಂ ತಯಾರಿಕ ಘಟಕ ಇತ್ಯಾದಿ ವರ್ಷ ಪೂರ್ತಿ ಕಾರ್ಯಾಚರಿಸುವುದಿಲ್ಲ. ಕೆಲವು ತಿಂಗಳು ಬಂದ್‌ ಆಗಿರುತ್ತವೆ. ಬಂದ್‌ ಸಂದರ್ಭದಲ್ಲಿಯೂ ಫಿಕ್ಸ್‌$x ದರ ಪಾವತಿಸಲೇ ಬೇಕು. ಜಿಲ್ಲೆಯಲ್ಲಿ ಅಧಿಕವಿರುವ ಅತಿ ಸಣ್ಣ ಕೈಗಾರಿಕೆಗಳಿಗೆ ಇದು ನೇರ ಹೊರೆಯಾಗುತ್ತಿದೆ.

ಲೋಡ್‌ಶೆಡ್ಡಿಂಗ್‌: ಸಂಜೆ 6ರಿಂದ 8 ಗಂಟೆಯ ಸಮಯದಲ್ಲಿ ಎಲ್ಲ ಮನೆಗಳಲ್ಲೂ ಟಿವಿ ಸಹಿತ ವಿದ್ಯುತ್‌ ಬಳಕೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಮನೆಗಳಿಗೆ ವಿದ್ಯುತ್‌ ಪೂರೈಕೆ ಮಾಡಬೇಕಿರುವುದರಿಂದ ಕೈಗಾರಿಕೆಗಳಿಗೆ ಈ ಅವಧಿಯಲ್ಲಿ ನೀಡುವ ವಿದ್ಯುತ್‌ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ. ಇದು ನಿತ್ಯವೂ ನಡೆಯುತ್ತಿರುವುದರಿಂದ ಲೋಡ್‌ ಶೆಡ್ಡಿಂಗ್‌ ಆಗಿಬಿಟ್ಟಿದೆ. ಬೆಳಗ್ಗೆ, ಮಧ್ಯಾಹ್ನದ ವೇಳೆಯಲ್ಲೂ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಪ್ರತೀ ಮಂಗಳವಾರ ವಿದ್ಯುತ್‌ ವ್ಯತ್ಯಯ ಮಾಡುತ್ತಿರುವುದು ಈಗ ಸ್ವಲ್ಪ ಕಡಿಮೆಯಾಗಿದೆ. ಬೇರೆ ದಿನಗಳಲ್ಲಿ ವಿದ್ಯುತ್‌ ಕಡಿತ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿವಿಧೆಡೆ ಬೇಡಿಕೆ
ಕೈಗಾರಿಕೆಗಳಿಗೆ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ವಿದ್ಯುತ್‌ ಪೂರೈಕೆಗೆ ಸಂಬಂಧ ಅಲ್ಲಲ್ಲಿ ಪೀಡರ್‌ಗಳನ್ನು ನಿರ್ಮಾಣ ಮಾಡುವ ಕಾರ್ಯಾರಂಭ ವಾಗಿದೆ. ಬಜಗೋಳಿಯಲ್ಲಿ ಪವರ್‌ ಸ್ಟೇಷನ್‌ ನಿರ್ಮಾಣವಾಗುತ್ತಿದೆ. ಇದರಿಂದ ಬಜಗೊಳಿ, ಮೀಯಾರು ಮೊದಲಾದ ಭಾಗದ ಕೈಗಾರಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ. ಹಿರಿಯಡಕ ಭಾಗದಲ್ಲಿರುವ ಕೈಗಾರಿಕೆಗಳು ಹೆಚ್ಚು ವಿದ್ಯುತ್‌ ಕೊರತೆ ಎದುರಿಸುತ್ತಿವೆ. ಈ ಬಗ್ಗೆ ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ಮನವಿಯೂ ಸಲ್ಲಿಕೆಯಾಗಿದೆ.

Advertisement

ಲೋಡ್‌ ಶೆಡ್ಡಿಂಗ್‌ನಿಂದ ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಜತೆಗೆ ರಾತ್ರಿ ಪದೇಪದೆ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಗ್ರಾಮೀಣ ಕೈಗಾರಿಕೆಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕೈಗಾರಿಕೆಗಳು ಜನರೇಟರ್‌ ನಂಬಿಕೊಳ್ಳಬೇಕಾಗಿದೆ. ಡೀಸೆಲ್‌ ಕೂಡ ದುಬಾರಿಯಾಗಿದೆ. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ.
– ಪ್ರಶಾಂತ್‌ ಬಾಳಿಗಾ, ಅಧ್ಯಕ್ಷ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ಕೈಗಾರಿಕೆಗಳಲ್ಲಿ ವಿದ್ಯುತ್‌ ಬೇಡಿಕೆ ಇದೆ. ಹಾಗೆಯೇ ಪವರ್‌ ಲೋಡ್‌ ಹೆಚ್ಚಿಸಲು ಕೋರಿಕೊಂಡಿದ್ದಾರೆ. ಇಂಡಸ್ಟ್ರೀ ಫೀಡರ್‌ಗಳನ್ನು ಅಳವಡಿಸಲಾಗುತ್ತಿದೆ. ಕೈಗಾರಿಕೆಗಳಿಗೆ ವಿದ್ಯುತ್‌ ಕೊರತೆ ಇರುವ ಹಾಗೂ ಹಿರಿಯಡಕ ಭಾಗದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ವಿದ್ಯುತ್‌ ಬೇಡಿಕೆಯಿರುವ ಮನವಿ ಬಂದಿದೆ.
– ನಾಗರಾಜ ವಿ. ನಾಯಕ್‌, ಜಂಟಿ ನಿರ್ದೇಶಕ,
ಜಿಲ್ಲಾ ಕೈಗಾರಿಕೆ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next