ಬಾಗಲಕೋಟೆ: ಜಿಲ್ಲೆಯಲ್ಲಿರುವ ಕೆಲ ಆಸ್ಪತ್ರೆಯ ವೈದ್ಯರು “ಡೆಂಘೀ ರೋಗ’ ಕುರಿತಂತೆ ಭಯ ಹುಟ್ಟಿಸಿದ್ದಾರೆ. ಜ್ವರ, ಕೈ-ಕಾಲು ನೋವೆಂದು ಆಸ್ಪತ್ರೆಗೆ ಬಂದರೂ “ಡೆಂಘೀ’ಗೆ ನೀಡುವ ಚಿಕಿತ್ಸೆಯನ್ನೇ ನೀಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ಆರೋಗ್ಯ ಇಲಾಖೆ ಮಾತ್ರ ಡೆಂಘೀ ಖಚಿತ ಪಡಿಸುವ ಹಕ್ಕಿದೆ. ಆದರೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ರಕ್ತ ಪರೀಕ್ಷೆ ಮಾಡಿಸಿ, ನಿಮಗೆ ಶಂಕಿತ ಡೆಂಘೀ ಇದೆ ಎಂದು ಹೇಳಿ ಚಿಕಿತ್ಸೆ ನೀಡುತ್ತಿದ್ದಾರೆ.
287 ಜನರಿಗೆ ಖಚಿತ: ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಡಿಸೆಂಬರ್‌ವರೆಗೆ 287 ಜನರಿಗೆ ಮಾತ್ರ ಡೆಂಘೀ ರೋಗ ಇರುವುದು ಖಚಿತಪಟ್ಟಿದೆ. ಸುಮಾರು 2045 ಜನರಿಗೆ ಶಂಕಿತ ಡೆಂಘೀ ಇರುವುದು ಕಂಡು ಬಂದಿದ್ದು, ಅವರೆಲ್ಲ ಗುಣಮುಖರಾಗಿದ್ದಾರೆ. ಶಂಕಿತ 2045ರಲ್ಲಿ 116 ಜನರ ರಕ್ತ ತಪಾಸಣೆ ಮಾಡಿದ್ದು, ಡೆಂಘೀ ರೋಗ ಇರುವುದು ಕೇವಲ 287 ಜನರಿಗೆ ಮಾತ್ರ. ಈ ರೋಗದಿಂದ ಜಿಲ್ಲೆಯಲ್ಲಿ ಈವರೆಗೂ ಸಾವು ನೋವು-ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಹೇಳುತ್ತದೆ. ಆದರೆ, ಬಾಗಲಕೋಟೆ ನಗರ, ಗುಳೇದಗುಡ್ಡ ತಾಲೂಕಿನ ಒಂದು ಹಳ್ಳಿ, ಹುನಗುಂದ ತಾಲೂಕಿನ ಒಂದು ಹಳ್ಳಿಯಲ್ಲಿ ಡೆಂಘೀ ಅತಿಯಾಗಿ ಹರಡಿತ್ತು. ಇದರಿಂದ ಇಬ್ಬರ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆಂದು ಎರಡೂ ಗ್ರಾಮಗಳ ಜನರು ಹೇಳುತ್ತಾರೆ.
ಡ್ರೈ ಡೇ ಮಾಡಿ: ಡೆಂಘೀ ಭಯಾನಕ ರೋಗವಲ್ಲ. ಇದೊಂದು ಸಾಂಕ್ರಾಮಿಕ ರೋಗ. ಇದು ಹರಡದಂತೆ ಎಚ್ಚರಿಕೆ ವಹಿಸಲು ಪ್ರತಿ ಮನೆಯಲ್ಲೂ ವಾರಕ್ಕೊಮ್ಮೆ ಡ್ರೈ ಡೇ ಮಾಡಬೇಕು. ಅಂದರೆ ಮನೆಯ ಆವರಣ, ಮನೆಯ ಫ್ರಿಜ್, ಟೆರೇಸ್ ಮೇಲೆ ಹಳೆಯ ಟೈರ್, ತೆಂಗಿನ ಚಿಪ್ಪು ಸೇರಿದಂತೆ ಯಾವುದೇ ಸಾಮಗ್ರಿಗಳಲ್ಲಿ ಸ್ವತ್ಛ ನೀರು ನಿಂತಿದ್ದರೆ ಚೆಲ್ಲಬೇಕು. ವಾರಕ್ಕೊಮ್ಮೆ ಇಡೀ ಮನೆಯಲ್ಲಿ ಇರುವ ನೀರು ಬದಲಾಯಿಸಿದರೆ, ಡೆಂಘೀ ರೋಗದ ಸೊಳ್ಳೆ ಉತ್ಪತ್ತಿಯಾಗಲ್ಲ. ಡೆಂಘೀ ಸೊಳ್ಳೆ ಚರಂಡಿ ಅಥವಾ ಗಲೀಜು ನೀರಿನಲ್ಲಿ ಹುಟ್ಟಲ್ಲ. ಸ್ವಚ್ಛ ನೀರಿನಲ್ಲಿ ಹುಟ್ಟಿ, ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಜ್ವರ, ಕೈ-ಕಾಲು ನೋವು ಬಂದರೆ ವಿಶ್ರಾಂತಿ ಪಡೆಯುವ ಜತೆಗೆ ದ್ರವ ರೂಪದ (ಅಳಸಾದ) ಆಹಾರ ಸೇವಿಸಬೇಕು. ಮುಖ್ಯವಾಗಿ ನೀರು ಹೆಚ್ಚು ಕುಡಿಯಬೇಕು. ಕುಡಿದಷ್ಟೇ ನೀರು, ಮೂತ್ರಿ ಮೂಲಕ ಹೊರ ಹೋಗಿರಬೇಕು ಎಂಬುದು ಆರೋಗ್ಯ ಇಲಾಖೆ ಸಲಹೆ.
ಕೆಲ ವೈದ್ಯರು ಹಾಗೆ ಮಾಡಿರಬಹುದು: ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮಗೆ ಡೆಂಘೀ ರೋಗ ಎಂಬುದು ಖಚಿತಪಡಿಸಲು ಅಧಿಕಾರ ಇಲ್ಲದಿರಬಹುದು. ಆದರೆ, ಆಸ್ಪತ್ರೆಗೆ ಬರುವ ರೋಗಿಗಳ ಪೂರ್ಣ ತಪಾಸಣೆ ಬಳಿಕವೇ ಡೆಂಘೀ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಿಯೋ ಕೆಲವೇ ಕೆಲವು ವೈದ್ಯರು ಆ ರೀತಿ ಮಾಡಿರಬಹುದು. ಹಾಗಂತಾ ಜಿಲ್ಲೆಯಲ್ಲಿ ಹರಡಿದ ಡೆಂಘೀ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂಬುದು ಜಿಲ್ಲೆಯ ಹಿರಿಯ ಖಾಸಗಿ ವೈದ್ಯರೊಬ್ಬರ ಅಭಿಪ್ರಾಯ.
ರೋಗಿಯಂತೆ ಹೋಗಿದ್ದ ಸಿಬ್ಬಂದಿ: ಜಿಲ್ಲೆಯಲ್ಲಿ ಡೆಂಘೀ ರೋಗ ಅತಿಯಾಗಿ ಹರಡಿದೆ ಎಂಬ ವಾತಾವರಣ ಸೃಷ್ಟಿಯಾದ ಬಳಿಕ ಡಿಎಚ್‌ಒ ಡಾ|ದೇಸಾಯಿ, ಹಲವು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆ ವೇಳೆ ಡೆಂಘೀಯಲ್ಲದ ವೆರಲ್ ಇನ್‌ಪೆಕ್ಷನ್‌ಗೂ ಡೆಂಘೀ ರೋಗಕ್ಕೆ ನೀಡುವ ಚಿಕಿತ್ಸೆ ಹಾಗೂ ತಪಾಸಣೆ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಜಿಲ್ಲೆಯ ನಗರವೊಂದರ ಖಾಸಗಿ ಆಸ್ಪತ್ರೆಗೆ ಸ್ವತಃ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ರೋಗಿಯಂತೆ ಕಳುಹಿಸಲಾಗಿತ್ತು. ಅವರಿಗೂ ಡೆಂಘೀ ಇದೆ ಎಂದುಖಾಸಗಿ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಕೂಡಲೇ ಸ್ವತಃ ಡಿಎಚ್‌ಒ, ಆ ಆಸ್ಪತ್ರೆಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.
-ವಿಶೇಷ ವರದಿ