ಹುಬ್ಬಳ್ಳಿ: ‘ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡುವುದಕ್ಕೆ ಭಯವೇಕೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವಾಜ್ ಬೊಮಾಯಿ ಅವರನ್ನು ಬುಧವಾರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ”ನಾನು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದಕ್ಕೆ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಆದರೆ ಅವರು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ ಅನ್ನುತ್ತಾರೆ. ಅವರು ಹೇಳಿದ್ದು ಸತ್ಯ ಇರುವುದಾದರೆ ಜನತಾ ನ್ಯಾಯಾಲಯದ ಮುಂದೆ ವೇದಿಕೆಯಲ್ಲಿ ಚರ್ಚೆ ಮಾಡೋಕೆ ಏಕೆ ಭಯ” ಎಂದು ಪ್ರಶ್ನಿಸಿದರು.
”ಬಿಜೆಪಿಯವರಿಗೆ ದುಡ್ಡು ಹಂಚುವುದೇ ಕೆಲಸ. ಒಂದೊಂದು ಕ್ಷೇತ್ರದಲ್ಲಿ 10-12 ಸಚಿವರು ಸೂಟ್ ಕೇಸ್ ಗಳ ಲ್ಲಿ ಹಣ ತುಂಬಿಕೊಂಡು ಬಂದು ಠಿಕಾಣಿ ಹೂಡಿದ್ದಾರೆ. ಈ ಕುರಿತು ಚುನಾವಣೆ ಆಯೋಗಕ್ಕೆ ದೂರು ನೀಡುತ್ತೇವೆ” ಎಂದು ಹೇಳಿದರು.
”ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿಯವರು ಏನೂ ಅಭಿವೃಧ್ಧಿ ಮಾಡಿಲ್ಲ. ಈಗ ಮನೆ ಕೊಟ್ಟೆ ಅಂತ ಆದೇಶ ಮಾಡಿಕೊಂಡು ಬಂದಿದ್ದಾರೆ. ಚುನಾವಣೆಗೋಸ್ಕರ ಸಿಎಂ ಬೊಮ್ಮಾಯಿ ಈ ಆದೇಶ ಮಾಡಿಕೊಂಡು ಬಂದಿದ್ದಾರೆ” ಎಂದರು.
”ಕಾಂಗ್ರೆಸ್ ಎಲ್ಲ ಸಮುದಾಯದ ಪರವಾಗಿದೆ. ಅನ್ನಭಾಗ್ಯ ಯೋಜನೆ ಬಗ್ಗೆ ಕೇಂದ್ರ ಅನುದಾನ ಹೆಚ್ಚಿದೆ ಅನ್ನುವ ಬೊಮ್ಮಾಯಿ ಪೆದ್ದರ ರೀತಿ ಮಾತನಾಡುತ್ತಿದ್ದಾರೆ” ಎಂದರು.
ಸ್ವಾಮೀಗಳ ಬಗ್ಗೆ ಮಾತನಾಡಿದ್ದಾಗಿ ಬಿಜೆಪಿ ಟ್ವಿಟ್ ಮಾಡಿರುವ ವಿಚಾರವಾಗಿ, ”ಸುಳ್ಳು ಟ್ವಿಟ್ ಮಾಡುವುದೇ ಅವರ ಕಸುಬಾಗಿದೆ. ನಾನು ಸ್ವಾಮಿಗಳ ಬಗ್ಗೆ ಮಾತನಾಡುವುದೆ ಇಲ್ಲ” ಎಂದರು.
ನಿಮ್ಮ ಬಗ್ಗೆ ಸಿಟಿ ರವಿ ಟ್ವಿಟ್ ಮಾಡಿದ್ದಾರಲ್ಲ ಎಂದಿದ್ದಕ್ಕೆ, ”ಸಿ.ಟಿ. ರವಿ ಯಾರು ಅವ. ಯಾರ್ಯಾರೋ ಬಗ್ಗೆ ಪ್ರಶ್ನೆ ಕೇಳ್ತಿರಿ” ಎಂದರು.