ಮಾಗಡಿ: ಸರ್ವೇ ಮತ್ತು ಚುನಾವಣೆ ಇಲಾಖೆ ಕಚೇರಿಯ ಮೇಲ್ಛಾವಣೆ ಅಕ್ಷರಃ ಕುಸಿಯುತ್ತಿದೆ. ಕೂಡಲೇ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ ನಿಜಕ್ಕೂ ಅಲ್ಲಿನ ಮಹತ್ವದ ದಾಖಲೆಗಳು ನಾಶವಾಗುವ ಆಂತಕವಿದೆ.
ಮಾಗಡಿ ಪಟ್ಟಣದ ಮಿನಿ ವಿಧಾನ ಸೌಧ ಎಂದೇ ಕರೆಯಲ್ಪಡುವ ಕಂದಾಯ ಕಚೇರಿಯ ಮೇಲಿರುವ ಚುನಾವಣಾ ಶಾಖೆ ಮತ್ತು ಸರ್ವೇ ಇಲಾಖೆ ಕಚೇರಿಯ ಮೇಲ್ಛಾವಣಿ ದಿನೇ ದಿನೇ ಕಳಚಿ ಬೀಳುತ್ತಿದೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಅಲ್ಲಿನ ಕೆಲಸಕ್ಕೆಂದು ಬರುವ ಸಾರ್ವಜನಿಕರು ಭಯದಿಂದಲೇ ಕಚೇರಿಗೆ ಆಗಮಿಸುತ್ತಿದ್ದಾರೆ. ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕನಿಷ್ಠ ತಲೆಗೆ ರಕ್ಷಾಕವಚ (ಹೆಲ್ಮೆಟ್) ಹಾಕಿಕೊಂಡರೆ ಅಪಾಯದಿಂದ ಪಾರಗಬಹುದು. ಯಾವಾಗಬೇಕಾದರೂ ಮೇಲ್ಛಾವಣಿ ಕುಸಿಯಬಹುದು ಎಂಬ ಆತಂಕ ಸಾರ್ವಜನಿಕರಲ್ಲಿಯೇ ಕಾಡುತ್ತಿದೆ.
ಮಳೆ ನೀರಿನಿಂದ ಮೇಲ್ಛಾವಣಿ ಒದ್ದೆ: ಮಾಗಡಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಕಚೇರಿ ಮೇಲ್ಛಾವಣಿ ಮೇಲೆ ಕಳೆ, ಗಿಡಗಂಟಿ ಬೆಳೆದು ನಿಂತಿದೆ. ಹೀಗಾಗಿ ಮಳೆ ನೀರಿನಿಂದ ಸರ್ಕಾರಿ ಕಚೇರಿಯ ಮೇಲ್ಛಾವಣೆ ಒದ್ದೆಯಾಗುತ್ತಿದೆ. ನೀರಿನಿಂದ ಕೊಠಡಿಯ ಒಳಗೆ ಕಾಂಕ್ರೀಟ್ ಕಳಚಿ ಬೀಳುತ್ತಿದೆ. ಕಳೆದ ದಿನವಷ್ಟೆ ಕಚೇರಿ ಮೇಲ್ಛಾವಣಿ ಕಳಚಿ ಬಿದ್ದಿದ್ದು, ಯಾವುದೇ ತೊಂದರೆಯಾಗಿಲ್ಲ. ನಿತ್ಯ ಬೀಳುತ್ತಿರುವ ಮಳೆಗೆ ಕಚೇರಿಯ ಕೊಠಡಿಯಲ್ಲಿರುವ ಭೂಮಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮಳೆ ನೀರಿನಿಂದ ಒದ್ದೆಯಾಗಿ ನಾಶವಾಗುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ. ಜೊತೆಗೆ ಚುನಾವಣಾ ಶಾಖೆಯಲ್ಲಿನ ದಾಖಲೆಗಳು ಸಹ ನಾಶವಾಗಬಹುದು. ಜೊತೆಗೆ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೂ ಅಪಾಯವಾಗುವ ಆತಂಕವಿದೆ.
ಭಯದಲ್ಲಿಯೇ ಕರ್ತವ್ಯ ನಿರ್ವಹಣೆ: ಕಚೇರಿ ಮೇಲ್ಛಾವಣಿ ಕಳಚಿ ಬೀಳುವ ಭಯದಲ್ಲಿಯೇ ಅಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಸಹ ಅಪಾಯ ಸಂಭವ ಸುಳಿವಿದ್ದರೂ ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ವೇ ಇಲಾಖೆಯಲ್ಲಿ ಅಗತ್ಯ ದಾಖಲೆಗಳನ್ನು ಪಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಬಿರುಕು ಬಿಟ್ಟ ಮೇಲ್ಛಾವಣೆಯ ಕೆಳಗೆ ಕುಳಿತುಕೊಳ್ಳುತ್ತಿದ್ದಾರೆ. ಜೋರಾಗಿ ಮಳೆ ಬಿದ್ದರೆ ಕಚೇರಿ ಮೇಲ್ಛಾವಣಿ ಅಕ್ಷರಃ ಕುಸಿಯುತ್ತದೆ. ಅಪಾಯ ಸಂಭವವೇ ಹೆಚ್ಚಾಗಿದೆ.
ಕಚೇರಿ ಮೇಲ್ಛಾವಣಿ ದುರಸ್ತಿಪಡಿಸಿ: ಕಂದಾಯ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸಿಕೊಂಡು ಸರ್ಕಾರಿ ಕಚೇರಿಯ ಮೇಲ್ಛಾವಣೆ ದುರಸ್ತಿಪಡಿಸಬೇಕು. ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ. ಜಾಗೃತರಾಗಿ ಮಹತ್ವದ ದಾಖಲೆಗಳನ್ನು ಉಳಿಸಿ, ಅಧಿಕಾರಿಗಳು, ಸಿಬ್ಬಂದಿ ನೆಮ್ಮದಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವ ವಾತಾವರಣ ನಿರ್ಮಿಸಬೇಕಿದೆ.
ಕಂದಾಯ ಇಲಾಖೆ ಕಚೇರಿ ಕಟ್ಟಡ ಶಿಥಿಲವಾಗಿದೆ. ನೂತನ ಕಟ್ಟಡ ನಿರ್ಮಿಸಲು ಸರ್ಕಾರ 10 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈ ಕುರಿತು ಶಾಸಕರೊಂದಿಗೆ ಚರ್ಚಿಸಲಾಗುವುದು
.●ಎನ್.ರಮೇಶ್, ತಹಶೀಲ್ದಾರ್, ಮಾಗಡಿ
ತಿರುಮಲೆ ಶ್ರೀನಿವಾಸ್