Advertisement
2017-18ನೇ ಶೈಕ್ಷಣಿಕ ವರ್ಷವನ್ನು 3-4 ಮಕ್ಕಳ ಜತೆ ಕಷ್ಟದಲ್ಲಿ ಕಳೆದ ಶಾಲೆಗಳಲ್ಲಿ ತರಗತಿ ಕೊಠಡಿ, ಶೌಚಾಲಯ, ಬಿಸಿಯೂಟ ಕೊಠಡಿ ಹೀಗೆ ಎಲ್ಲ ಅನುಕೂಲಗಳಿವೆ. ಆದರೆ ಹೊಸ ಮಕ್ಕಳ ದಾಖಲಾತಿ ಆಗದೆ ಪರಿಸ್ಥಿತಿ ಡೋಲಾಯಮಾನ ಆಗಿದೆ.
ತೋರಣಕಟ್ಟೆಯ ಕಿ.ಪ್ರಾ. ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಆರು ಮಕ್ಕಳು ಕಲಿಯುತ್ತಿದ್ದರು. ಕಳೆದ ವರ್ಷವೇ ಮುಚ್ಚುವ ಪ್ರಸ್ತಾವ ಬಂದಿತ್ತಾದರೂ ಇಲ್ಲಿಗೆ ಸಮೀಪ ಕೋರೆ ಕಾರ್ಮಿಕರ ವಲಸೆ ಮಕ್ಕಳು ಈ ಶಾಲೆ ಸೇರಿದ್ದರು. ಇದ್ದ ಮಕ್ಕಳು ಆರು, ವಲಸೆ ಬಂದ ಮಕ್ಕಳು ಮೂರು ಸೇರಿ ಒಂಬತ್ತು. ಆದರೆ ಒಂದೇ ತಿಂಗಳಲ್ಲಿ ಕೋರೆ ನಿಲುಗಡೆ ಆಗಿತ್ತು. ಸೇರ್ಪಡೆಗೊಂಡ ಮಕ್ಕಳ ಹೆತ್ತವರು ಹೇಳದೆ ಕೇಳದೆ ಗಂಟುಮೂಟೆ ಕಟ್ಟಿದ್ದರು. ಇದ್ದ 6 ಮಂದಿ ಪೈಕಿ ಇಬ್ಬರು ಮಕ್ಕಳು ಐದನೇ ತರಗತಿಯಿಂದ ಉತ್ತೀರ್ಣರಾಗಿ ಆರನೇ ತರಗತಿಗೆ ಬೇರೆ ಶಾಲೆಗೆ ಹೋಗಿದ್ದಾರೆ. ಉಳಿದ ನಾಲ್ಕು ಮಂದಿ ಪೈಕಿ ಒಬ್ಬ ಆರನೇ ತರಗತಿಗೆ ಬೇರೆ ಶಾಲೆಗೆ ಹೋಗಿದ್ದು, ಮೂವರು ಮಕ್ಕಳು ಮಾತ್ರ ಉಳಿದಿದ್ದರು. ಉಳಿದ ಮೂವರ ಪೈಕಿ ಹುಡುಗರು ಇಬ್ಬರು. ಹುಡುಗಿ ಒಬ್ಬಳೇ ಎಂದು ಅವಳನ್ನೂ ಬೇರೆ ಶಾಲೆಗೆ ಸೇರಿಸಿದರು. ಇಬ್ಬರು ಹುಡುಗರು ಮಾತ್ರ ಉಳಿದಿದ್ದು, ಇವರು ಹೇಗೆ ಕಲಿಯಲು ಸಾಧ್ಯ. ಬೇರೆ ಮಕ್ಕಳ ಜತೆ ಕಲಿಯಲಿ ಎಂದು ಮೂಡಂಬೈಲು ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಇದೀಗ ತೋರಣಕಟ್ಟೆ ಶಾಲೆಯಲ್ಲಿ ಮಕ್ಕಳಿಲ್ಲ ಎನ್ನುವ ಸ್ಥಿತಿಯಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕಿಯನ್ನು ಹತ್ತಿರದ ಬೇರೆ ಶಾಲೆಗೆ ನಿಯೋಜಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
Related Articles
ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕಂಟಿಕ ಕಿ.ಪ್ರಾ. ಶಾಲೆ ಕೂಡ ಮಕ್ಕಳ ಸಂಖ್ಯೆಯ ಕೊರತೆ ಎದುರಿಸುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ 4ನೇಯಲ್ಲಿ ಇಬ್ಬರು, 5ನೇಯಲ್ಲಿ ಇಬ್ಬರು ಕಲಿಯುತ್ತಿದ್ದು, ಈ ವರ್ಷ ಹೊಸದಾಗಿ ಮಕ್ಕಳ ದಾಖಲಾತಿ ಆಗದೇ ಇರುವುದು ಇಲ್ಲಿನ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಶಾಲೆಯ ಹತ್ತಿರದ ನಿವಾಸಿಗಳಾರೂ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಕಂಟಿಕ ಶಾಲೆ ಮುಂದಿನ ದಿನಗಳಲ್ಲಿ ಮುಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Advertisement
ಜಕ್ರಿಬೆಟ್ಟು ಅಧಿಕೃತ ಮುಚ್ಚಿದೆಕಳೆದ 2017-18ರ ಸಾಲಿನಲ್ಲಿ ಐದು ಮಕ್ಕಳ ದಾಖಲಾತಿಯೊಂದಿಗೆ ಮುನ್ನಡೆದ ಜಕ್ರಿಬೆಟ್ಟು ಕಿ.ಪ್ರಾ. ಶಾಲೆ ಈ ಸಾಲಿನಲ್ಲಿ ತಾತ್ಕಾಲಿಕ ಮುಚ್ಚಲ್ಪಟ್ಟಿದೆ. ಕಳೆದ ವರ್ಷ ಇಲ್ಲಿ ಐದು ಮಕ್ಕಳಿದ್ದರು. ಮುಂದೆ ಬೇರೆ ಮಕ್ಕಳ ದಾಖಲು ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೇರೆ ಶಾಲೆಯತ್ತ ಹೊರಟ ಮಕ್ಕಳನ್ನು ಇಲ್ಲೇ ಇರಿ ಎಂದು ಒತ್ತಾಯಿಸಿದ್ದೆವು, ಅವರ ಹೆತ್ತವರಲ್ಲೂ ಮನವಿ ಮಾಡಿದ್ದೆವು. ಆದರೆ ಈ ಬಾರಿ ಹೊಸಬರಾರು ಬಂದಿಲ್ಲ. ಹೀಗಾಗಿ ಈ ವರ್ಷ ಇರಬೇಕಾಗಿದ್ದ ಮೂವರು ಬೇರೆ ಖಾಸಗಿ ಶಾಲೆಗೆ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿ. 50 ವರ್ಷಗಳ ಇತಿಹಾಸ
ತಾಲೂಕಿನಲ್ಲಿ ಮುಚ್ಚುವ ಭೀತಿಯಲ್ಲಿರುವ ಎಲ್ಲ ಶಾಲೆಗಳಿಗೂ ಐವತ್ತು ವರ್ಷಗಳ ಇತಿಹಾಸವಿದೆ. ಆದರೆ ಹೆತ್ತವರ ಆಂಗ್ಲ ಭಾಷೆಯ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು, ಸ್ಥಳೀಯ ಗ್ರಾ.ಪಂ. ಶಿಕ್ಷಣಾಭಿಮಾನಿಗಳು ಹೆಚ್ಚಿನ ಮುತುವರ್ಜಿ ತೋರದೆ ಇರುವುದರಿಂದ ಈ ಶಾಲೆಗಳ ಕಾರ್ಯ ಸ್ಥಗಿತಗೊಳ್ಳಲು ಒಂದು ಕಾರಣವಾದರೆ, ಸರಕಾರವು ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡುತ್ತಿರುವುದು ಮತ್ತೊಂದು ಪ್ರಮುಖ ಕಾರಣ. ಸರಕಾರವೇ ಮಾಡುವ ಎಡವಟ್ಟಿನಿಂದ ಶಿಕ್ಷಣ ಇಲಾಖೆಯೇ ಸಂಕಟಪಡುವಂತಹ
ವಿದ್ಯಮಾನ ಎದುರಾಗಿದೆ. ಹೊಸ ಶಾಲೆಗೆ ಅನುಮತಿ
ಬಂಟ್ವಾಳ ತಾಲೂಕಿನಲ್ಲಿ ಪ್ರಸ್ತುತ ಮೂರು ಶಾಲೆಗಳು ಮುಚ್ಚುವ ಹಂತದಲ್ಲಿದ್ದರೆ, ಮತ್ತೂಂದೆಡೆ ಎಂಟು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಪರವಾನಿಗೆ ಬಯಸಿ ಅರ್ಜಿ ಇಲಾಖೆಗೆ ಬಂದಿದೆ. ಜತೆಗೆ ಆರು ಖಾಸಗಿ ಪ್ರೌಢ ಶಾಲೆ, ಮೂರು ಖಾಸಗಿ ಪೂರ್ವ ಪ್ರಾರ್ಥಮಿಕ ಶಾಲೆ ತೆರೆಯಲು ಅನುಮತಿ ನೀಡುವಂತೆ ಶಿಕ್ಷಣ ಇಲಾಖೆಗೆ ಬೇಡಿಕೆ ಬಂದಿದೆ. ಸೇರ್ಪಡೆ ಕ್ರಮ
ಸ್ಥಳೀಯ ಜನಪ್ರತಿನಿಧಿಗಳಿಗೆ, ಶಾಲಾಭಿವೃದ್ಧಿ ಸಮಿತಿಯ ಪ್ರಮುಖರಿಗೆ ಮನವಿ ಮಾಡಿ ಶಾಲೆಗೆ ಮಕ್ಕಳ ಸೇರ್ಪಡೆಗೆ ಪ್ರಯತ್ನಿಸುವಂತೆ ವಿನಂತಿಸಲಾಗಿದೆ. ಆದರೆ ಪರಿಸ್ಥಿತಿಯಿಂದ ಸಾಕಷ್ಟು ಪ್ರಗತಿ ಆಗಿಲ್ಲ. ಅವರಿಗೆ ಇನ್ನೊಂದು ವಾರದ ಅವಕಾಶ ನೀಡಿ, ಪ್ರಯತ್ನಿಸುವಂತೆ ಸೂಚಿಸಿದೆ.
– ಎನ್. ಶಿವಪ್ರಕಾಶ್
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ