Advertisement
ನದಿಯ ನೀರಿನ ಮಟ್ಟ ಏರುತ್ತಿರುವಂತೆ ನದಿ ದಡದ ಮೇಲಿರುವ ಗ್ರಾಮಗಳ ಜನರ ಆತಂಕ ಸಹ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದ್ದರೂ ಜನರ ಮನಸ್ಸಿನಿಂದ ಭೀಕರ ಪ್ರವಾಹದ ಆತಂಕ ಮಾತ್ರ ದೂರವಾಗಿಲ್ಲ.
Related Articles
Advertisement
2005ರಲ್ಲಿ ಉಂಟಾದ ಪ್ರವಾಹ ಸ್ಥಿತಿ ನೋಡಿಕೊಂಡು ಅದರ ಆಧಾರದ ಮೇಲೆ 37 ಗ್ರಾಮಗಳನ್ನು ಗುರುತಿಸಲಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜನರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜನರೂ ಸಹ ಸ್ವಯಂ ಪ್ರೇರಣೆಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂಬುದು ಅಧಿಕಾರಿಗಳ ಹೇಳಿಕೆ.
ಮಹಾರಾಷ್ಟ್ರದಲ್ಲಿನ ಮಳೆಯಿಂದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಎರಡು ಲಕ್ಷ ಕ್ಯೂಸೆಕ್ ನೀರು ಬರುತ್ತಿದ್ದು ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನೀರು ಬಿಡುಗಡೆ ಹಾಗೂ ಮಳೆಯ ಸ್ಥಿತಿಗತಿ ಕುರಿತಂತೆ ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನೀರು ಬಿಡುಗಡೆ ಮಾಡುವ ಮೊದಲು ಮಾಹಿತಿ ನೀಡಲಾಗುವುದು ಎಂದು ಮಹಾರಾಷ್ಟ್ರದ ಅಧಿಕಾರಿಗಳು ಸಹ ಹೇಳಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಹೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರದ ನಡುವಿನ ಮಾಹಿತಿ ಸಂಪರ್ಕದ ಕೊರತೆಯಿಂದಾಗಿ ಕೊಯ್ನಾ, ವಾರಣಾ ಮೊದಲಾದ ಜಲಾಶಯಗಳಿಂದ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣಾ ನದಿಗೆ ಐದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬಂದಿತ್ತು. ಒಮ್ಮೆಲೇ ಇಷ್ಟು ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ನದಿ ತೀರದ 35 ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಈ ಭಯ ಇನ್ನೂ ನದಿ ಭಾಗದ ಜನರ ಮನಸ್ಸಿನಲ್ಲಿದೆ.
ಈಗ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ, ರಾಜಾಪುರ ಬ್ಯಾರೇಜ್, ಪಂಚಗಂಗಾ ನದಿಯಿಂದ ಬರುತ್ತಿರುವ ನೀರು ಕರಾಳ ಪ್ರವಾಹದ ಅನುಭವ ನೆನಪು ಮಾಡುತ್ತಿದೆ. 2005-06 ಪ್ರವಾಹದ ಭೀಕರತೆ ಕಾಣದೇ ಇದ್ದರೂ ನೀರಿನ ರಭಸ ಪ್ರವಾಹದ ಭೀತಿ ಹುಟ್ಟಿಸಿದೆ.
• ಕೇಶವ ಆದಿ