Advertisement

ಸಾಧನೆಗೆ ಭಯ ಬಿಟ್ಟು ಛಲದಿಂದ ಬದುಕಿ

07:29 AM Jan 21, 2019 | Team Udayavani |

ಮೈಸೂರು: ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಛಲ ಮತ್ತು ಗುರಿ ಇರಬೇಕು. ಭಯವನ್ನು ಬಿಟ್ಟು ಛಲದಿಂದ ಬದುಕಬೇಕು ಎಂದು ಮುಕ್ತ ವಿವಿ ಪ್ರಾಧ್ಯಾಪಕ ಡಾ.ಸಿ.ಎಚ್‌.ಗುರುರಾಜರಾವ್‌ ಸಲಹೆ ನೀಡಿದರು. ಶಾರದಾವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಶಾರದಾವಿಲಾಸ ಪಿಯು ಕಾಲೇಜು ವಿದ್ಯಾರ್ಥಿ ವೇದಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು. 

Advertisement

ಉತ್ಸಾಹವಿಲ್ಲದಿದ್ದರೆ ಜೀವನ ವ್ಯರ್ಥ. ಉತ್ಸಾಹವೇ ಇಲ್ಲದಿದ್ದರೆ ಜೀವನ ಸಾರ್ಥಕ ಎನಿಸುವುದಿಲ್ಲ. ಹಿರಿಯರು ಹಾಗೂ ಗುರು ಪರಂಪರೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಪೂರ್ಣಗೊಳಿಸಬೇಕೆಂದರು. ಪಾಲಿಕೆ ಸದಸ್ಯೆ ಬೇಗಂ ಪಲ್ಲವಿ ಮಾತನಾಡಿ, ಶಿಕ್ಷಣವು ವಿದ್ಯೆ ಮತ್ತು ವಿವೇಕವನ್ನು ಕಲಿಸುವ ಸಂಪರ್ಕ ಸಾಧನ. ಶಿಕ್ಷಣವನ್ನು ಕಲಿಯಬೇಕಾದರೆ ಏಕಾಗ್ರತೆ ಮತ್ತು ಆಸಕ್ತಿ ಬೆಳೆಸಿಕೊಂಡಲ್ಲಿ ಗುರಿಯನ್ನು ಸಾಧಿಸಬಹುದು ಎಂದರು.

ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಯು ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತದೆ. ಸಾಧನೆ ಮಾಡಿದ ಅನೇಕ ಮಹನೀಯರು ಇಂದಿಗೂ ಪ್ರಸ್ತುತರಾಗಿದ್ದಾರೆ, ಅವರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರವರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಬಿ.ಎಸ್‌.ಪಾರ್ಥಸಾರಥಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಸಂಗೀತ, ನೃತ್ಯ ನಾಟಕ, ಯೋಗ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲ ಸಿ.ಕೆ.ಅಶೋಕ್‌ಕುಮಾರ್‌, ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್‌.ಕೆ. ಶ್ರೀನಾಥ್‌,ಆಡಳಿತ ಮಂಡಳಿ ಸದಸ್ಯ ವೈ.ಕೆ.ಭಾಸ್ಕರ್‌ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next