Advertisement

ಭಯವೇ ದುಃಖಕ್ಕೆ ಮೂಲ

11:45 AM Sep 19, 2019 | mahesh |

ತಂದೆಯ ಚಿನ್ನದ ಅಂಗಡಿಯಲ್ಲಿದ್ದ ಕೆಲಸಗಾರ ಒಂದು ರಾತ್ರಿ ಅಂಗಡಿಯಲ್ಲಿದ್ದ ಚಿನ್ನವನ್ನೆ ಕಳ್ಳತನ ಮಾಡಿ ಓಡಿಹೋಗಿದ್ದ ಘಟನೆ, ಮಾನಸಿಕ ಆಕೆಗೆ ಆಘಾತ ಉಂಟು ಮಾಡಿತ್ತು. ಪೊಲೀಸರು ಮನೆಗೆ ಬಂದಿದ್ದನ್ನು ನೋಡಿ, ಹನ್ನೆರಡು ವರ್ಷದ ಹುಡುಗಿ ಹೆದರಿಕೆಯಿಂದ ನಡುಗಿಹೋದಳು.

Advertisement

ಇಪ್ಪತ್ತಾರು ವರ್ಷದ ಪಾರ್ವತಿಗೆ ತಲೆ ತುಂಬಾ ಸಂಶಯಗಳೇ ತುಂಬಿದ್ದವು. ತನ್ನ ಮಗುವನ್ನು ಸಾಕಲು ತಾನು ಶಕ್ತಳೇ? ಒಂದುವೇಳೆ ತಾನು ಸತ್ತು ಹೋದರೆ ಮಗುವಿನ ಜವಾಬ್ದಾರಿ ಯಾರು ಹೊರುತ್ತಾರೆ? ಮಲತಾಯಿಯ ಬಳಿ ಮಗು ನಲುಗುವುದೇ ಎಂದೆಲ್ಲಾ ಚಿಂತಿಸುತ್ತಿದ್ದಳು. ಕುಟುಂಬದ ಶ್ರೇಯಸ್ಸಿಗಾಗಿ ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡತೊಡಗಿದ ಪಾರ್ವತಿಗೆ, ಪದೇ ಪದೆ ಮನೆಯನ್ನು ಸ್ವತ್ಛಗೊಳಿಸುವ ಗೀಳು ಹಿಡಿದಿತ್ತು. ಸ್ನಾನ ಮಾಡಲು ಹೋದರೆ ಒಂದು ತಾಸು ಬೇಕಾಗುತ್ತಿತ್ತು. ಪೂಜೆ ಮುಗಿಸಲು ನಾಲ್ಕು ತಾಸು! ಹೀಗಾಗಿ ಮಗುವಿನ ಲಾಲನೆ-ಪಾಲನೆಗೆ ನಿಜವಾಗಿಯೂ ಸಮಯ ಸಿಗುತ್ತಿರಲಿಲ್ಲ.

ಪಾರ್ವತಿಗೆ ಗೀಳು-ಚಟ ಹಿಡಿದಿರುವುದು ಸ್ಪಷ್ಟವಾಗಿತ್ತು. ತಡಮಾಡದೆ ವೈದ್ಯಕೀಯ ಚಿಕಿತ್ಸೆಗಾಗಿ ಮನೋವೈದ್ಯರಲ್ಲಿಗೆ ಕಳುಹಿಸಿದೆ. ಮಾತ್ರೆ ಶುರುಮಾಡಿದ ಹದಿನೈದು ದಿನಗಳ ನಂತರ ಚಿಕಿತ್ಸಕ ಸಮಾಲೋಚನೆ ನಡೆಸಬೇಕು. ಯಾಕೆಂದರೆ, ಮಾತ್ರೆಗಳು ಪರಿಣಾಮ ಬೀರಲು ಹದಿನೈದು ದಿನಗಳು ಬೇಕು.

ಸಮಾಲೋಚನೆಗೆ ಬಂದ ಪಾರ್ವತಿಯನ್ನು ಬಾಲ್ಯದ ಬಗ್ಗೆ ಕೇಳುತ್ತಾ, ಗೀಳು-ಚಟದ (obsessive compulsive disorder) ಮೂಲವನ್ನು ಹುಡುಕಿದೆ. ಬಾಲ್ಯದಲ್ಲಿ ನಡೆದ ಆಘಾತಕಾರಿ ಘಟನೆಯ ಬಗ್ಗೆ ಆಕೆ ಬಾಯಿಬಿಟ್ಟಳು. ತಂದೆಯ ಚಿನ್ನದ ಅಂಗಡಿಯಲ್ಲಿದ್ದ ಕೆಲಸಗಾರ ಒಂದು ರಾತ್ರಿ ಅಂಗಡಿಯಲ್ಲಿದ್ದ ಚಿನ್ನವನ್ನೆ ಕಳ್ಳತನ ಮಾಡಿ ಓಡಿಹೋಗಿದ್ದ ಘಟನೆ, ಮಾನಸಿಕ ಆಕೆಗೆ ಆಘಾತ ಉಂಟು ಮಾಡಿತ್ತು. ಪೊಲೀಸರು ಮನೆಗೆ ಬಂದಿದ್ದನ್ನು ನೋಡಿ, ಹನ್ನೆರಡು ವರ್ಷದ ಹುಡುಗಿ ಹೆದರಿಕೆಯಿಂದ ನಡುಗಿಹೋದಳು. ತಂದೆ, ಈ ನಷ್ಟದಿಂದ ಹೇಗೆ ಹೊರಗೆ ಬರುತ್ತಾರೆ ಎಂಬ ಚಿಂತೆಯ ಕೀಟ ಅವಳ ಮನದಲ್ಲಿ ಮನೆ ಮಾಡಿತು. ಅಂದಿನಿಂದ ಪಾರ್ವತಿಗೆ ಕತ್ತಲೆ ಎಂದರೆ ಭಯ ಶುರುವಾಯ್ತು. ದೇವರಿಗೆ ಅತೀ ಪೂಜೆ ಸಲ್ಲಿಸತೊಡಗಿದಳು.

ಇತ್ತೀಚೆಗೆ, ಅತ್ತೆ ಮನೆಯಲ್ಲಿ ಆಸ್ತಿ ವಿಭಜನೆಯಾದಾಗ ಪಾರ್ವತಿಯ ಗಂಡನಿಗೆ, ಅವರ ಅಣ್ಣ ಅನ್ಯಾಯ ಮಾಡಿದರು. ಹಣದ ವಿಚಾರವಾಗಿ ತನ್ನ ಜೀವನದಲ್ಲಿ ಮತ್ತೂಮ್ಮೆ ಮೋಸವಾಯ್ತಲ್ಲ ಎಂದು ಕಂಗಾಲಾಗಿ ದೇವರನ್ನು ಪೂಜಿಸುವುದು ಹೆಚ್ಚಾಯ್ತು. ಸಂಶಯದ ಸುರುಳಿ, ಗೀಳು ಚಟವಾಗಿ ಪರಿಣಮಿಸಿತು.

Advertisement

ಸಮಾಲೋಚನೆಯಲ್ಲಿ ಅವಳಿಗೆ ಕೆಲವು ವಿಷಯಗಳನ್ನು ಅರ್ಥ ಮಾಡಿಸಿದೆ. ಸತತವಾದ ಆಲೋಚನೆಯಿಂದ ದೈಹಿಕ ಶ್ರಮ-ಸುಸ್ತು ಕಾಣಿಸಿಕೊಳ್ಳುತ್ತದೆ. ಜೊತೆಗೆ ಬಹಳ ಹೊತ್ತು ಸ್ನಾನ ಮಾಡುವುದರಿಂದ ಜ್ವರ-ಶೀತ ಬರುತ್ತಿದೆ ಎಂದು ಪಾರ್ವತಿಗೆ ಮನದಟ್ಟಾಯಿತು. ಭೂತ-ಭವಿಷ್ಯದ ಕುರಿತಾದ ಭಯ-ಆತಂಕಗಳೇ ತನ್ನ ಸಮಸ್ಯೆಗೆ ಮೂಲ ಎಂದಾಕೆ ಅರಿತುಕೊಂಡಳು.

ನಮ್ಮಲ್ಲಿ ಕೆಲವು ವಿಷಯಗಳ ಕುರಿತು ಸಣ್ಣ ಭಯವಿರುವುದು ಸಹಜ. ಆ ಭಯವು ಕಾರ್ಯ ಯೋಜನೆಗೆ ಅನುಕೂಲ. ಸಣ್ಣ ಉದ್ವಿಘ್ನತೆ ಕೂಡಾ ಕಾರ್ಯ ಕ್ಷಮತೆಯನ್ನು ಹೆಚ್ಚಿಸಬಹುದು. ಆದರೆ, ಅತೀ ಭಯ ಭ್ರಮಾಲೋಕಕ್ಕೆ ತಳ್ಳುತ್ತದೆ, ಕಾರ್ಯವಿಮುಖರನ್ನಾಗಿ ಮಾಡುತ್ತದೆ. ಭಯ ಮಿಶ್ರಿತ ಆಲೋಚನೆಗಳನ್ನು ನಿಲ್ಲಿಸಲು, ಮನಸ್ಸಲ್ಲಿ ಮೂಡುವ ಸಂಶಯವನ್ನು ಬರೆದಿಡಲು ಪ್ರಾರಂಭಿಸಿ. ಸಂಶಯಪಡಲು ಪೂರಕ ಕಾರಣಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಸಮಸ್ಯೆಗೆ, ತರ್ಕಬದ್ಧ ಸಕಾರಾತ್ಮಕ ಉತ್ತರವನ್ನು ಬರೆಯಿರಿ. ವಿಶ್ವಾಸವನ್ನು ಪುನರ್‌ ಸ್ಥಾಪಿಸಿಕೊಳ್ಳಿ. ನಿಮ್ಮ ಶಕ್ತಿಗೆ ಮೀರಿದ ವಿಚಾರದ ಬಗ್ಗೆ ನೀವು ಚಿಂತಿಸುತ್ತಿದ್ದರೆ, ಆ ಸಂದೇಹಗಳನ್ನು ಕೈ ಬಿಡಿ.

ಈ ಸಮಸ್ಯೆಗೆ ಚಿಕಿತ್ಸಾ ಮನೋವಿಜ್ಞಾನದ ಜೊತೆಗೆ ಮನೋವೈದ್ಯಕೀಯ ನೆರವೂ ಬೇಕಾಗುತ್ತದೆ. ಆಗ ಮಾತ್ರ ಗೀಳು-ಚಟವನ್ನು ಗುಣಪಡಿಸಬಹುದು.

ವಿ.ಸೂ: ಈ ಮಾನಸಿಕ ರೋಗ ಗಂಡಸರಲ್ಲಿಯೂ ಕಾಣಿಸಬಹುದು.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next