Advertisement

ಫೆ. 26: ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ 

12:12 PM Feb 24, 2017 | |

ಮಡಿಕೇರಿ: ದೇಶವ್ಯಾಪಿ ಗೋಹತ್ಯೆಯನ್ನು ನಿಷೇಧಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಫೆ. 26ರಂದು ನಗರದ ಗಾಂಧಿ ಮೈದಾನದಲ್ಲಿ “ಗೋ ಸತ್ಯಾಗ್ರಹ’ವನ್ನು ನಡೆಸಲು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ನಿರ್ಧರಿಸಿವೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ  ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ದೇಶ ಹಾಗೂ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಲು ಮಿತಿ ಮೀರಿದ ಗೋಹತ್ಯೆಯೇ ಕಾರಣವೆಂದು ಅಭಿಪ್ರಾಯಪಟ್ಟರು. 

ರಾಷ್ಟ್ರದಾದ್ಯಂತ ಗೋಹತ್ಯೆ ನಿಷೇಧಿಸಬೇಕು, ಗೋಹಂತಕರಿಗೆ 7 ವರ್ಷ ಜೈಲು ಶಿಕ್ಷೆ ನೀಡಿ 1 ಲಕ್ಷ ರೂ. ದಂಡ ವಿಧಿಸಬೇಕು, ಗೋ ಹಿಂಸೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಬೇಕು ಮತ್ತು ಗೋಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ರಾಜ್ಯದಲ್ಲಿ ಗೋಮಾಳ ಭೂಮಿ ಸರ್ವೆ ಮಾಡಿ ಬೇಲಿ ಹಾಕಬೇಕು, ಹಸಿ ಹುಲ್ಲನ್ನು ಬೆಳೆಸಿ ಗೋವುಗಳ ಆಹಾರವಾಗಿ ರಿಯಾಯಿತಿ ದರದಲ್ಲಿ ನೀಡಬೇಕೆಂದು ಒತ್ತಾಯಿಸಿ ಫೆ.26 ರಂದು ಪೂರ್ವಾಹ್ನ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸುವುದಾಗಿ ನರಸಿಂಹ ತಿಳಿಸಿದರು.

ಎಲ್ಲವನ್ನೂ ನೀಡುವ ಕಾಮಧೇನು ಎಂದು ಪೂಜಿಸಲ್ಪಡುವ ಗೋವುಗಳ ಹತ್ಯೆಯನ್ನು ತಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ದೇಶ ಬರ ಸೇರಿದಂತೆ ಭೀಕರ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂದರು. ಪಾಕಶಾಸ್ತ್ರದಲ್ಲಿ ಎಲ್ಲೂ ಗೋಮಾಂಸ ಭಕ್ಷಣೆಯನ್ನು ಆಹಾರ ಪದ್ಧತಿ ಎಂದು ಉಲ್ಲೇಖೀಸಿಲ್ಲವೆಂದ ಅವರು, ಗೋ-ಉತ್ಪನ್ನಗಳಷ್ಟೇ ಆಹಾರವೆಂದು ಅಭಿಪ್ರಾಯಪಟ್ಟರು.

ಅನಾದಿ ಕಾಲದಿಂದಲೂ ರಾಷ್ಟ್ರದಲ್ಲಿ ಗೋ ಹತ್ಯೆ ನಿಷೇಧವಿತ್ತು. ಆದರೆ ಇಂದು ಕೆಲವರು ಆಹಾರ ಪದ್ಧತಿಯ ನೆಪದಲ್ಲಿ ಗೋವುಗಳನ್ನು ನಿರಂತರವಾಗಿ ಹತ್ಯೆ ಮಾಡುತ್ತಿರುವುದರಿಂದ ಗೋವಿನ ಸಂತತಿ ನಾಶವಾಗುತ್ತಿದೆ. ಗೋಸಂತತಿ ಅವನತಿಯತ್ತ ಸಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳೂ ಕುಂಠಿತಗೊಂಡಿದೆ. ದೇಶದಾದ್ಯಂತ ಬಹುಪಾಲು ಜನರು ಗೋಹತ್ಯೆ ನಿಷೇಧವನ್ನು ಬಯಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರದಾದ್ಯಂತ ಭಾನುವಾರ ಸಾಧು ಸಂತರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ನರಸಿಂಹ ತಿಳಿಸಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗೋಹತ್ಯೆ ನಿಷೇಧಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಎನ್‌.ಕೆ.ಅಜಿತ್‌, ಸಹ ಸಂಚಾಲಕ ಕೆ.ಹೆಚ್‌.ಸುದ್ದಿಚೇತನ್‌, ಮಡಿಕೇರಿ ತಾಲೂಕು ಸಂಚಾಲಕ ಮನು ರೈ ಹಾಗೂ ಗೋರûಾ ಪ್ರಮುಖ ಬಲ್ಲಾರಂಡ ಕಂಠಿ ಕಾರ್ಯಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next