Advertisement
ಪಾಟೀಲ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಅವುಗಳಿಗೆ ಸಂಬಂಧಿಸಿ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದರೂ ಅದು ವಜಾಗೊಂಡಿದೆ. ಹೀಗಾಗಿ ಆತ ಪೊಲೀಸರಿಗೆ ಶರಣಾಗದೆ ವಿಧಿ ಇಲ್ಲ ಎನ್ನಲಾಗಿದೆ.ಆರ್.ಡಿ. ಪಾಟೀಲ ಪರವಾಗಿ ಹಿರಿಯ ವಕೀಲ ಶ್ಯಾಮಸುಂದರ್, ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಪಿ. ನರಸಿಂಹುಲು ವಾದ ಮಂಡಿಸಿದ್ದರು. ಈ ಮಧ್ಯೆ ಆರ್.ಡಿ. ಪಾಟೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಅಫಜಲಪುರ, ಕಲಬುರಗಿ ನಗರದಲ್ಲಿ ಹರಿದಾಡಿದ್ದರೂ ಅದನ್ನು ಪೊಲೀಸರು ನಿರಾಕರಿಸಿದ್ದಾರೆ.
ಕಲಬುರಗಿ ನಗರದಲ್ಲಿಯೇ ಆರ್.ಡಿ. ಪಾಟೀಲ ಇದ್ದರೂ ಪೊಲೀಸರಿಗೆ ಹೇಗೆ ಸಿಗಲಿಲ್ಲ ಎನ್ನುವುದು ಈಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯದಲ್ಲಿ ಇದೇ ಕಾರಣಕ್ಕಾಗಿಯೇ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಾಗಿ 11 ದಿನಗಳು ಕಳೆದಿವೆ. ಆತ ನಗರದ ಅಪಾರ್ಟಮೆಂಟ್‌ವೊಂದರಲ್ಲಿ ಮನೆ ಬಾಡಿಗೆಗೆ ಪಡೆದು ಅಲ್ಲಿಯೇ ವಾಸವಾಗಿದ್ದ ಎನ್ನುವ ವಿಷಯ ಮಂಗಳವಾರ ಬಯಲಾಗುತ್ತಿದ್ದಂತೆ ಪೊಲೀಸರು ಇನ್ನಷ್ಟು ಚುರುಕಾಗಿದ್ದಾರೆ. ಸಿಸಿ ಕೆಮರಾ ದೃಶ್ಯದಿಂದ ಬಯಲು
ಪಾಟೀಲ ಅಪಾರ್ಟಮೆಂಟ್‌ನಲ್ಲಿ ಇರುವ ವಿಚಾರ ಸೋಮವಾರ ಖಾತ್ರಿ ಮಾಡಿಕೊಂಡ ಪೊಲೀಸರು ಅಲ್ಲಿಗೆ ಹೋಗುವುದರೊಳಗೆ ಆತ ತಡೆಗೋಡೆ ಹಾರಿ ಓಡಿರುವ ಚಿತ್ರಗಳು ಪಕ್ಕದಲ್ಲಿಯೇ ಇದ್ದ ಇನ್ನೊಂದು ಮನೆಯ ಸಿಸಿ ಕೆಮರಾದಲ್ಲಿ ಸೆರೆಯಾಗಿವೆ. ಇದರಿಂದಾಗಿ ಪೊಲೀಸರು ಅಪಾರ್ಟ್‌ಮೆಂಟ್ ಬರುವುದು ಆತನಿಗೆ ಗೊತ್ತಾಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
Related Articles
ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಕಲಬುರಗಿ ಜಿಲ್ಲೆಯಲ್ಲಿ ಹೇಳಿಕೆ ನೀಡಿ, ಆರ್.ಡಿ. ಪಾಟೀಲನಿಗೂ ರಾಜ್ಯ ಸರಕಾರಕ್ಕೂ ನಂಟಿದೆ. ಇದರಿಂದಾಗಿಯೇ ಬಂಧನ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪಿಎಸ್‌ಐ ಪರೀಕ್ಷಾ ಅಕ್ರಮದ ವೇಳೆಯಲ್ಲಿ ಭಾರೀ ಆರೋಪಗಳನ್ನು ಮಾಡುತ್ತಿದ್ದ ಅಂದಿನ ಚಿತ್ತಾಪುರ ಶಾಸಕ, ಇಂದಿನ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Advertisement
ಮಹಾರಾಷ್ಟ್ರಕ್ಕೆ ಪರಾರಿ ಶಂಕೆ: ಗೃಹ ಸಚಿವಆರ್.ಡಿ. ಪಾಟೀಲ ಮಹಾರಾಷ್ಟ್ರಕ್ಕೆ ಪರಾರಿಯಾಗಿರುವ ಶಂಕೆಯಿದೆ. ಆತನನ್ನು ಬಂಧಿಸಲು ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಡಾಣ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಿಎಸ್‌ಐ ಅಕ್ರಮದಲ್ಲಿಯೂ ಆತ ಪ್ರಮುಖ ಆರೋಪಿ. ಆತ ಮಹಾರಾಷ್ಟ್ರಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಅದೇನೂ ದೊಡ್ಡ ವಿಷಯವಲ್ಲ. ಆತನನ್ನು ನಿಶ್ಚಿತವಾಗಿಯೂ ಬಂಧಿಸಲಾಗುತ್ತದೆ. ಆತನಿಗೆ ನೆರವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಮೇಶ್ವರ್ ಎಚ್ಚರಿಸಿದ್ದಾರೆ. ಪರೀಕ್ಷಾ ಅಕ್ರಮದ ರೂವಾರಿ ಆರ್.ಡಿ. ಪಾಟೀಲ ಬಂಧನಕ್ಕೆ ಈಗಲೂ ಎಲ್ಲಾ ಪ್ರಯತ್ನಗಳು ನಡೆದಿವೆ. ಮಾಹಿತಿ ಸಿಕ್ಕ ಬಳಿಕ ನಾವು ಅಲ್ಲಿಗೆ ಹೋಗುವುದರೊಳಗೆ ಆತ ಗೋಡೆ ಹಾರಿ ತಪ್ಪಿಸಿಕೊಂಡಿರುವ ವಿಚಾರ ಗೊತ್ತಾಯಿತು. ಪೊಲೀಸರು ಅಲ್ಲಿಗೆ ಹೋದಾಗಲೇ ಅಲ್ಲವೇ ಅವನು ತಪ್ಪಿಸಿಕೊಂಡಿದ್ದು. ಇದರಿಂದ ಪೊಲೀಸ್ ಮಾಹಿತಿ ಸರಿಯಾಗಿಯೇ ಇದೆ. ಆದರೆ ಕೆಲವು ಬಾರಿ ನಿರೀಕ್ಷಿತ ದಾಳಿ ಫಲ ಕೊಡುವುದಿಲ್ಲ. ಈ ಹಿನ್ನೆಲೆಯಲ್ಲಿ ಹುಡುಕಾಟ ಇನ್ನಷ್ಟು ತೀವ್ರಗೊಳಿಸಲಾಗಿದೆ.
-ಚೇತನ್ ಆರ್.,
ಕಲಬುರಗಿ ಪೊಲೀಸ್ ಆಯುಕ್ತ