ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ಕೃತ್ಯವನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಕಾಶ್ಮೀರ ಮೂಲದ ಆಬೀದ್ ಮಲಿಕ್ ಎಂಬಾತನ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಆಬೀದ್ ಮಲಿಕ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ಮಾಡಿದ ಉಗ್ರನ ಪರವಾಗಿ ಫೋಸ್ಟ್ ಬರೆದಿದ್ದಾನೆ. ಉಗ್ರನ ಫೋಟೋ ಹಾಕಿ ಆತನ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿ ಇದು ನಿಜವಾದ ಸರ್ಜಿಕಲ್ ಅಟ್ಯಾಕ್ ಎಂದು ಬರೆದುಕೊಂಡಿದ್ದ.
ಜತೆಗೆ, ಬೆಂಗಳೂರಿನಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿ, ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಮಾಹಿತಿ ಹಂಚಿಸಿಕೊಂಡಿದ್ದ. ಈ ಪೋಸ್ಟ್ ಬೆನ್ನಲ್ಲೇ ಆತನ ವಿರುದ್ಧ ಸಾರ್ವಜನಿಕರು ತೀವ್ರ ತರಾಟೆ ತೆಗೆದುಕೊಂಡಿದ್ದರು. ಕೆಲವೇ ಹೊತ್ತಿನಲ್ಲಿ ಈ ಫೋಸ್ಟ್ ಡಿಲೀಟ್ ಆಗಿತ್ತು.
ಫೇಸ್‌ಬುಕ್ ಪೋಸ್ಟ್ ಕುರಿತು ಬಂದ ದೂರು ಆಧರಿಸಿ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್, ಆರೋಪಿ ಕೆಲಸ ಮಾಡುತ್ತಿದ್ದ ಹೊರಮಾವು ಬಳಿಯ ಸಗೇಶಿಯಸ್ ಇನ್ಫೋ ಸಿಸ್ಟಮ್ ಕಂಪನಿಗೆ ಭೇಟಿ ನೀಡಿ ಕಂಪನಿ ಮಾಲೀಕರನ್ನು ವಿಚಾರಣೆ ನಡೆಸಿದ್ದರು.
ಆರೋಪಿ ಆಬೀದ್ ಮಲಿಕ್ 2017ರ ಜುಲೈ 7ರಿಂದ ಸೆಪ್ಟೆಂಬರ್ 22ರವರೆಗೆ 2 ತಿಂಗಳಷ್ಟೆ ಕೆಲಸ ಮಾಡಿದ್ದ ಎಂಬುದು ಗೊತ್ತಾಗಿದೆ. ಆರೋಪಿ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ತಿಳಿಸಿದ್ದಾರೆ.