Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಸೈನಾಗೆ ಹಾಲಿ ಚಾಂಪಿಯನ್‌ ಎದುರಾಳಿ

03:45 AM Feb 17, 2017 | Team Udayavani |

ಹೈದರಾಬಾದ್‌: ಮಾರ್ಚ್‌ 7ರಿಂದ ಬರ್ಮಿಂಗಂನಲ್ಲಿ ಆರಂಭವಾಗಲಿರುವ 2017ರ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಡ್ರಾ ಪ್ರಕಟಗೊಂಡಿದ್ದು, ಇದು ಭಾರತದ ಸ್ಟಾರ್‌ ಆಟಗಾರ್ತಿಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್‌ ಹೆಚ್ಚು ಅನುಕೂಲಕರವಾಗಿದೆ ಎಂದು ಭಾವಿಸಲಾಗಿದೆ.

Advertisement

ಈ ಡ್ರಾ ಪ್ರಕಾರ ಸೈನಾ ಮತ್ತು ಸಿಂಧು ಇಬ್ಬರೂ ಸುಲಭದಲ್ಲಿ ಕ್ವಾರ್ಟರ್‌ ಫೈನಲ್‌ ತನಕ ಸಾಗಬಹುದೆಂಬುದೊಂದು ಲೆಕ್ಕಾಚಾರ. ಸೈನಾ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ನೊಜೊಮಿ ಒಕುಹರಾ ವಿರುದ್ಧ ಸೆಣಸಿದರೂ ಈ ಜಪಾನಿ ಆಟಗಾರ್ತಿಯಿಂದ ಭಾರೀ ಹೋರಾಟ ಕಂಡುಬರುವ ಸಾಧ್ಯತೆ ಕಡಿಮೆ. ಕಾರಣ, ಗಾಯಾಳಗಿರುವ ಒಕುಹರಾ ಕಳೆದ ನವಂಬರ್‌ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಟ್ಟದ ಪಂದ್ಯಗಳನ್ನು ಆಡಿಲ್ಲ. ಅವರ ಈಗಿನ ಫಿಟ್‌ನೆಸ್‌ ಹೇಗಿದೆ ಎಂಬುದರ ಚಿತ್ರಣ ಇನ್ನಷ್ಟೇ ಲಭ್ಯವಾಗಬೇಕಿದೆ.

ಪಿ.ವಿ. ಸಿಂಧು ಅವರ ಮೊದಲ ಸುತ್ತಿನ ಎದುರಾಳಿ ಡೆನ್ಮಾರ್ಕ್‌ನ ಮೆಟ್‌ ಪೌಲ್ಸೆನ್‌. ಇಲ್ಲಿಂದ ಮುಂದುವರಿದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಚೈನೀಸ್‌ ತೈಪೆಯ ನಂ.1 ಆಟಗಾರ್ತಿ ತೈ ಜು ಯಿಂಗ್‌ ಎದುರಾಗುವ ಸಾಧ್ಯತೆ ಇದೆ. ಸೆಮಿಫೈನಲ್‌ ತಲುಪಿದರೆ ಅಲ್ಲಿ ಭಾರತೀಯಳೇ ಆದ ಸೈನಾ ನೆಹ್ವಾಲ್‌ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ಪುರುಷರಿಗೆ ಕಠಿನ ಸವಾಲು
ಪುರುಷರ ವಿಭಾಗದಲ್ಲಿ ಭಾರತದ ಮೂವರು ಪ್ರಧಾನ ಸುತ್ತಿನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಇವರೆಂದರೆ ಕಿಡಂಬಿ ಶ್ರೀಕಾಂತ್‌, ಅಜಯ್‌ ಜಯರಾಮ್‌ ಮತ್ತು ಎಚ್‌.ಎಸ್‌. ಪ್ರಣಯ್‌. ಆದರೆ ಇವರೆಲ್ಲರಿಗೂ ಕಠಿನ ಡ್ರಾ ಎದುರಾಗಿದೆ. ವರ್ಮ ಸಹೋದರರಾದ ಸೌರಭ್‌ ಮತ್ತು ಸಮೀರ್‌ ಅರ್ಹತಾ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಪಡುಕೋಣೆ ವಿಶೇಷ ಅತಿಥಿ
1980ರ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಭಾರತದ ಪ್ರಕಾಶ್‌ ಪಡುಕೋಣೆ ಈ ವರ್ಷದ “ವಿಶೇಷ ಅತಿಥಿ’ಯ ಗೌರವ ಲಭಿಸಿದೆ. ಈ ಸಂದರ್ಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪಡುಕೋಣೆ ಮಾ. 11 ಮತ್ತು 12ರಂದು ಪಂದ್ಯಾವಳಿಯ ವೇಳೆ ಉಪಸ್ಥಿತರಿರುವರು. 1980ರ ಪುರುಷರ ಫೈನಲ್‌ನಲ್ಲಿ ಪ್ರಕಾಶ್‌ ಪಡುಕೋಣೆ ಅವರು ಚೀನದ ಲೀಮ್‌ ಸ್ವೀ ಕಿಂಗ್‌ ವಿರುದ್ಧ 15-3, 15-10 ಅಂತರದಿಂದ ಗೆದ್ದು ಚಾಂಪಿಯನ್‌ ಆಗಿ ಮೆರೆದಿದ್ದರು. ಈ ಕನ್ನಡಿಗನ ಸಾಧನೆಯಿಂದ ಭಾರತದ ಬ್ಯಾಡ್ಮಿಂಟನ್‌ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next