Advertisement

ಕೆಪಿಸಿಸಿಗೆ 1+3 ಸೂತ್ರ

10:08 AM Jan 04, 2020 | mahesh |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹುದ್ದೆ ನೇಮಕದ ಜೊತೆಗೆ ಮೂರು ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸಲು ಚಿಂತನೆ ನಡೆದಿದೆ. ಅದರಂತೆ ಒಂದು + ಮೂರು (ಒನ್‌ ಪ್ಲಸ್‌ ತ್ರೀ) ಸೂತ್ರಕ್ಕೆ ವರಿಷ್ಠರು ಚಿಂತಿಸಿದ್ದು, ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಬ್ಬರಂತೆ ಜಾತಿ ಲೆಕ್ಕಾಚಾರದಲ್ಲಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸಾಮಾಜಿಕ ನ್ಯಾಯದ ಮಾನದಂಡವನ್ನು ಇಟ್ಟುಕೊಂಡು ಪ್ರಾದೇಶಿಕತೆ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಇನ್ನೂ ಎರಡು ಕಾರ್ಯಾಧ್ಯಕ್ಷ ಹುದ್ದೆ ನೇಮಕದ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ ಆಲೋಚನೆ ನಡೆಸಿದೆ.

Advertisement

ಅಧ್ಯಕ್ಷ ಸ್ಥಾನಕ್ಕೆ ನಾಯಕರು-ಸಿದ್ದರಾಮಯ್ಯ ಬಣಗಳ ನಡುವೆ ಪೈಪೋಟಿ ನಡೆಯುತ್ತಿದ್ದು, ಈ ಬಗ್ಗೆ ಹೈಕಮಾಂಡ್‌ ಪ್ರಮುಖರನ್ನು ನವದೆಹಲಿಗೆ ಕರೆಯಿಸಿ ಮಾತುಕತೆಗೆ ನಿರ್ಧರಿಸಿದೆ. ಈ ನಡುವೆಯೇ ಕಂದಾಯ ವಿಭಾಗಕ್ಕೆ ಒಬ್ಬೊಬ್ಬ ಕಾರ್ಯಾ ಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿರುವು ದರಿಂದ ಅದನ್ನೂ ಅಳೆದು ತೂಗಿ ಎಲ್ಲ ಸಮುದಾಯಗಳ ನಾಯಕರಿಗೆ ಪ್ರಾತಿನಿಧ್ಯಕ್ಕೆ ಚಿಂತನೆ ನಡೆಸಲಾಗಿದೆ.

ಈಗಾಗಲೇ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪರ ಹಿರಿಯರು ಹಾಗೂ
ಎಂ.ಬಿ.ಪಾಟೀಲ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ಇಬ್ಬರಲ್ಲಿ ಯಾರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುತ್ತದೆ ಎನ್ನುವುದರ ಮೇಲೆ ಉಳಿದ ವಿಭಾಗಳಿಗೆ ಕಾರ್ಯಾಧ್ಯಕ್ಷರ ನೇಮಕವಾಗುತ್ತದೆ ಎಂದು ಹೇಳಲಾಗುತ್ತಿದೆ.

ನಾಲ್ಕು ಹುದ್ದೆ: ಕಲ್ಯಾಣ ಕರ್ನಾಟಕ ಭಾಗಕ್ಕೆ ವೀರಶೈವ ಲಿಂಗಾಯತ ಸಮುದಾಯದಕ್ಕೆ ಸೇರಿರುವ ಈಶ್ವರ್‌ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇನ್ನು ಮುಂಬೈ ಕರ್ನಾಟಕ, ಮೈಸೂರು ಹಾಗೂ ಬೆಂಗಳೂರು ಕಂದಾಯ ವಿಭಾಗಕ್ಕೆ ಕಾರ್ಯಾಧ್ಯಕ್ಷರ ನೇಮಕ ಮಾಡುವ ಕುರಿತು ಆಲೋಚನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಪ್ರತಿನಿಧಿಸುವ ಕಂದಾಯ ವಿಭಾಗ ಹೊರತುಪಡಿಸಿ ಉಳಿದ ಮೂರು ಕಂದಾಯ ವಿಭಾಗಗಳಿಗೆ ಕಾರ್ಯಾಧ್ಯಕ್ಷನ್ನು ನೇಮಿಸುವ ಕುರಿತು ಚರ್ಚೆ ನಡೆಯುತ್ತಿದೆ
ಎನ್ನಲಾಗುತ್ತಿದ್ದು, ಒಂದು ವೇಳೆ, ಸಿದ್ದರಾಮಯ್ಯ ಒಪ್ಪಿದರೆ, ಬೆಂಗಳೂರು ಕಂದಾಯ ವಿಭಾಗಕ್ಕೆ ಸೇರಿರುವ ಹಾಗೂ ಒಕ್ಕಲಿಗ ಸಮುದಾಯ ನಾಯಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌
ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಆಗ ಬೆಳಗಾವಿ ವಿಭಾಗಕ್ಕೆ ವಾಲ್ಮೀಕಿ ಸಮುದಾಯದ ಸತೀಶ್‌ ಜಾರಕಿಹೊಳಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಮೈಸೂರು ವಿಭಾಗಕ್ಕೆ ಅಲ್ಪ ಸಂಖ್ಯಾತ ಸಮುದಾಯವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮಾಜಿ ಸಚಿವರಾದ ಯು.ಟಿ.ಖಾದರ್‌ ಅಥವಾ ತನ್ವೀರ್‌ ಸೇಠ್ ಅವರಲ್ಲಿ ಒಬ್ಬರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವಂತೆ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ, ಸಿದ್ದರಾಮಯ್ಯ ಹಠಕ್ಕೆ ಹೈಕಮಾಂಡ್‌ ಮಣಿದು ಎಂ.ಬಿ.ಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೆ, ಬೆಂಗಳೂರು ಕಂದಾಯ ವಿಭಾಗದ ವ್ಯಾಪ್ತಿಗೆ
ಮಾಜಿ ಸಚಿವ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕೃಷ್ಣ ಬೈರೇಗೌಡ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಎಸ್‌.ಆರ್‌ .ಪಾಟೀಲ್‌ ನೇಮಕವಾಗಿರುವುದರಿಂದ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಎಂ.ಬಿ.ಪಾಟೀಲರನ್ನು ನೇಮಿಸುವ ಮನವಿಗೆ ಸ್ಪಂದಿಸುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವೂ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಸಿದ್ದರಾಮಯ್ಯ ಪರ್ಯಾಯ ಲೆಕ್ಕಾಚಾರ: ಸಿದ್ದರಾಮಯ್ಯ ಅದಕ್ಕೂ ಪರ್ಯಾಯ ಆಯ್ಕೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದ್ದು, ಬೆಂಗಳೂರು ಕಂದಾಯ ವಿಭಾಗಕ್ಕೆ ಸೇರಿರುವ ಮಾಜಿ ಸ್ಪೀಕರ್‌
ಹಾಗೂ ಬ್ರಾಹ್ಮಣ ಸಮುದಾಯದ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ
ನೇಮಿಸುವಂತೆಯೂ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಆಲೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಹೇಗಾದರೂ ಮಾಡಿ ತಮ್ಮ ಆಪ್ತರಿಗೆ ಸ್ಥಾನ ಕಲ್ಪಿಸಲು ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿಪ್‌, ಉಪ ನಾಯಕರ ಆಯ್ಕೆಗೂ ಜಾತಿ ಲೆಕ್ಕ: ರಾಜ್ಯ ಕಾಂಗ್ರೆಸ್‌ ಈ ಬಾರಿ ಎಲ್ಲ ಪ್ರಮುಖ ಸಮುದಾಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ
ಪ್ರತಿಪಕ್ಷದ ಮುಖ್ಯ ಸಚೇತಕರ ಹುದ್ದೆ ಹಾಗೂ ಎರಡೂ ಸದನಗಳ ಪ್ರತಿಪಕ್ಷಗಳ ಉಪ ನಾಯಕರ ಹುದ್ದೆಗಳಿಗೂ ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರದಲ್ಲಿಯೇ ನೇಮಕ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಸಮುದಾಯಗಳನ್ನು ಓಲೈಕೆ ಮಾಡುವ ಲೆಕ್ಕಾಚಾರ ಕಾಂಗ್ರೆಸ್‌ ಹೈಕಮಾಂಡ್‌ ಹಾಕಿಕೊಂಡಿದೆ
ಎನ್ನಲಾಗುತ್ತಿದೆ. ನನಗೆ ಯಾವುದೇ ಪಕ್ಷದ ಯಾವುದೇ ಗಿಫ್ಟ್ ಬೇಡ.

ನನಗೆ ಯಾವುದೇ ಆತುರ ಇಲ್ಲ.
ಯಾರೂ ನನ್ನ ತಲೆ ಕೆಡಿಸಬೇಡಿ. ಅದರ ಬಗ್ಗೆ ಮಾತನಾಡಬೇಡಿ. ನಾನು ಹೈಕಮಾಂಡ್‌ ಬಳಿ
ಏನೂ ಕೇಳುವುದಕ್ಕೆ ಹೋಗಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ.
ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಬರುವ ನೊಟೀಸ್‌ಗಳಿಗೆ ಉತ್ತರ ಕೊಡುವುದೇ ಸಾಕಾಗಿದೆ.
● ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ

ಸಂಭವನೀಯರು
􀂄 ಬೆಂಗಳೂರು : ಡಿ.ಕೆ. ಶಿವಕುಮಾರ್‌/ ಕೃಷ್ಣ ಬೈರೇಗೌಡ
􀂄 ಮುಂಬೈ-ಕರ್ನಾಟಕ: ಎಂ.ಬಿ. ಪಾಟೀಲ್‌/ ಸತೀಶ್‌ ಜಾರಕಿಹೊಳಿ
􀂄 ಮೈಸೂರು: ಖಾದರ್‌/ ತನ್ವೀರ್‌ ಸೇಠ್
􀂄 ಕಲ್ಯಾಣ ಕರ್ನಾಟಕ : ಈಶ್ವರ್‌ ಖಂಡ್ರೆ

Advertisement

Udayavani is now on Telegram. Click here to join our channel and stay updated with the latest news.

Next