Advertisement

ಚಾಲಕ ವೃತ್ತಿಯೊಂದಿಗೆ ಅಚ್ಚುಮೆಚ್ಚಿನ ತರಬೇತುದಾರ

12:16 PM May 14, 2020 | mahesh |

ಹುಬ್ಬಳ್ಳಿ: ವೃತ್ತಿಯಲ್ಲಿ ಚಾಲಕ, ಪ್ರವೃತ್ತಿಯಲ್ಲಿ ಪ್ರಯೋಗಾತ್ಮಕ ಚಿಂತನೆ ಹೊಂದಿದ ವ್ಯಕ್ತಿಯೊಬ್ಬರು ಶಾಲೆಗಳಲ್ಲಿ ಮೋಜಿನ ವಿಜ್ಞಾನದ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತರಬೇತುದಾರರಾಗಿ ಹೊರ ಹೊಮ್ಮಿದ್ದಾರೆ. ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಂಚಾರಿ ವಿಜ್ಞಾನ ಪ್ರಯೋಗಾಲಯದ ವಾಹನ ಚಾಲಕ ರವೀಂದ್ರ ಕೋಲಕಾರ ಅವರೇ ಈ ತರಬೇತುದಾರ. ಇವರು ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನವರಾಗಿದ್ದು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಮಾರು 20 ಶಾಲೆಗಳ 4-5ನೇ ತರಗತಿ ಮಕ್ಕಳಿಗೆ
ಮೋಜಿನ ವಿಜ್ಞಾನದ ಪ್ರಯೋಗ ಪ್ರದರ್ಶಿಸಿ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ.

Advertisement

ಕಳೆದ 10 ವರ್ಷಗಳಿಂದ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರತಿಷ್ಠಾನ ಸೂಚಿಸಿದ ಸರಕಾರಿ ಶಾಲೆಗಳಿಗೆ ವೇಳಾಪಟ್ಟಿಯಂತೆ ಶಿಕ್ಷಕರೊಂದಿಗೆ ಸಂಚರಿಸುತ್ತಾರೆ. ಜತೆಗೆ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೆಳಗ್ಗೆಯಿಂದ ಸಂಜೆವರೆಗೆ ವಿಜ್ಞಾನ ಹಾಗೂ ಗಣಿತದ ಪ್ರಯೋಗಗಳನ್ನು ತೋರಿಸುತ್ತಾರೆ. ತರಗತಿಗೆ ಬೇಕಾದ ಪರಿಕರಗಳನ್ನು ಶಿಕ್ಷಕರಿಗೆ ಜೋಡಿಸಿ ಕೊಡುತ್ತಿದ್ದ ಸಂಚಾರಿ ವಿಜ್ಞಾನ ಪ್ರಯೋಗಾಲಯದ ವಾಹನ ಚಾಲಕ ರವೀಂದ್ರ ಇದೀಗ ಮಕ್ಕಳಿಗೆ ತರಬೇತಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಅಗಸ್ತ್ಯ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಅಗಸ್ತ್ಯ ಮಾರ್ಗದರ್ಶಿ ಶಿಕ್ಷಕರ ಬೋಧನೆಯನ್ನು ಮೇಲ್ವಿಚಾರಣೆ, ತರಗತಿಗಳನ್ನು ವೀಕ್ಷಿಸುವಾಗ 4-5ನೇ ತರಗತಿ ಮಕ್ಕಳು ನಮಗೂ ಪ್ರಯೋಗಗಳನ್ನು ತೋರಿಸಿ ಎನ್ನುವ ಆಶಯ ವ್ಯಕ್ತಪಡಿಸಿದ್ದರು. ಹೀಗಾಗಿ ವಾಹನ ಚಾಲಕನ ಸಹಾಯದೊಂದಿಗೆ ಕೆಲವು ಮೋಜಿನ ವಿಜ್ಞಾನದ ಪ್ರಯೋಗಗಳನ್ನು ಮಾಡಿಸಲು ಶಿವಾನಂದ ಮುಂದಾದರು. 4-5ನೇ ತರಗತಿ ಮಕ್ಕಳಿಗೆ ಮೋಜಿನ ವಿಜ್ಞಾನ ಪ್ರಯೋಗ ಮಾಡಿಸಲು ನೀವು ಸಿದ್ಧರಿದ್ದೀರಾ ಎಂದು ಶಿವಾನಂದ ಕೇಳಿದ್ದರು. ಇದಕ್ಕೆ ರವೀಂದ್ರ ಅವರು ಒಪ್ಪಿಗೆ ನೀಡಿದ್ದರಿಂದ ಇದೀಗ ಮಕ್ಕಳ ಅಚ್ಚುಮೆಚ್ಚಿನ ತರಬೇತುದಾರರಾಗಿದ್ದಾರೆ. ರವೀಂದ್ರ ಕೋಲಕಾರ ಅವರಿಗೆ ಅಗಸ್ತ್ಯ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ತರಬೇತಿ ನೀಡಿದ್ದಾರೆ.

ಶಿವಾನಂದ ಚಲವಾದಿ ಅವರಿಗೆ ಅಮೆಜಿಂಗ್‌ ಸೈನ್ಸ್‌ ಕಿಟ್‌ ಮಾಡಿದ ಅನುಭವವಿತ್ತು. ಹಾಗೆಯೇ ಮಕ್ಕಳಿಗೆ ಯಾವ ರೀತಿಯ ಪ್ರಯೋಗ ಮಾಡಬೇಕೆನ್ನುವ ಕುರಿತು ಯೋಚಿಸುತ್ತಿದ್ದರು. ಈ ವೇಳೆ “ಸೈನ್ಸ್‌ ಪ್ರಾಕ್ಟಿಕಲ್ಸ್‌ ಆ್ಯಂಡ್‌ ರೀಡಿಂಗ್‌ ಕಿಟ್‌’ ಬಗ್ಗೆ ಅಗಸ್ತ್ಯ ಪ್ರತಿಷ್ಠಾನದ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಆಗ ಅಗಸ್ತ್ಯ ಇನೊವೇಶನ್‌ ಐಡಿಯಾ ಎನ್ನುವ ಸ್ಪರ್ಧೆ ಆರಂಭವಾಗಿತ್ತು. ಸುಮಾರು 250 ಐಡಿಯಾಗಳಲ್ಲಿ “ಸ್ಪಾರ್ಕ್‌ ಕಿಟ್‌’ ಮೊದಲ 10ರಲ್ಲಿ ಸ್ಥಾನ ಪಡೆದಿದೆ. ಇದನ್ನು ಸಂಚಾರಿ ವಿಜ್ಞಾನ ಪ್ರಯೋಗಾಲಯದಲ್ಲಿ ಆರಂಭಿಸಲು ಅನುಮತಿ ದೊರೆತಿದೆ.

ಛೇರ್ಮನ್‌ ಮೆಚ್ಚುಗೆ: ರವೀಂದ್ರ ಕೊಲಕಾರ ಅಗಸ್ತ್ಯ ಸಂಚಾರಿ ವಿಜ್ಞಾನ ಪ್ರಯೋಗಾಲಯದಲ್ಲಿ ಸುಮಾರು 10 ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಗಸ್ತ್ಯ
ಮಾರ್ಗದರ್ಶಿ ಶಿಕ್ಷಕರ ಪ್ರಾಯೋಗಿಕ ಬೋಧನೆಗೆ ಬೇಕಾದ ಎಲ್ಲ ಸಲಕರಣೆಗಳನ್ನು ಜೋಡಿಸುತ್ತ ಇದೀಗ ಅವರೇ ವಿಜ್ಞಾನ ಬೋಧಿಸುತ್ತಿದ್ದಾರೆ. ಸೈನ್ಸ್‌ ಪ್ರಾಕ್ಟಿಕಲ್ಸ್‌ ಆ್ಯಂಡ್‌ ರೀಡಿಂಗ್‌ ಕಿಟ್‌ ಬಗ್ಗೆ ತರಬೇತಿ ಪಡೆದ ಕೋಲಕಾರ ಅವರು 20 ಶಾಲೆಗಳ ಸುಮಾರು 2000 ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕರಾಗಿ ಬೋಧಿಸುತ್ತಿರುವುದನ್ನು ಗಮನಿಸಿ ಅಗಸ್ತ್ಯ ಸಂಸ್ಥೆ ಛೇರ್ಮನ್‌ ರಾಮಜಿ ರಾಘವನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಸೈನ್ಸ್‌ ಪ್ರಾಕ್ಟಿಕಲ್ಸ್‌ ಆ್ಯಂಡ್‌ ರೀಡಿಂಗ್‌ ಕಿಟ್‌ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ತಯಾರಿಸಿದ್ದೇ “ಸೈನ್ಸ್‌ ಪ್ರಾಕ್ಟಿಕಲ್‌ ಆ್ಯಂಡ್‌ ರೀಡಿಂಗ್‌’ ಕಿಟ್‌ ಆಗಿದೆ. ಈ
ಕಿಟ್‌ನಲ್ಲಿ 20 ಪುಸ್ತಕಗಳ ಎರಡು ಸೆಟ್‌ ಕನ್ನಡ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಸುಲಭ ಮತ್ತು ಕಠಿಣವಿರುವ ಪುಸ್ತಕಗಳನ್ನು ಹಂತ-ಹಂತವಾಗಿ ಕೊಡಲಾಗುತ್ತದೆ. ಇದನ್ನು ರೀಡಿಂಗ್‌ ಸರ್ಕಲ್‌ ಎಂದು ಕರೆಯಲಾಗುತ್ತದೆ. ಇಲ್ಲಿ ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಪ್ರತಿ ಇಬ್ಬರು ಮಕ್ಕಳಿಗೆ ಒಂದು ಪುಸ್ತಕ ಕೊಟ್ಟು ಅದನ್ನು ಓದಿಸಲಾಗುತ್ತದೆ.

ಮೋಜಿನ ವಿಜ್ಞಾನ ಮತ್ತು ಗಣಿತದ ಸುಮಾರು 20 ಮಾದರಿಗಳನ್ನು ಮಕ್ಕಳಿಗೆ ಆಟವಾಡಿಸುತ್ತಲೇ ಕಲಿಸಲಾಗುತ್ತದೆ. ಮಾನವನ ಅಸ್ಥಿಪಂಜರ, ಅಲೆಗಳ ಮಾದರಿ, ಜಿಯೋಬೋರ್ಡ್‌, ಶಬ್ದದ ಮಾದರಿ, ಗಾಳಿಗೆ ಒತ್ತಡವಿದೆ, ಸಾಂದ್ರತೆ ಸೇರಿದಂತೆ ಮುಂತಾದ ಮಾದರಿಗಳನ್ನು ಮೋಜಿನ ಮೂಲಕ ಮಕ್ಕಳಿಗೆ  ಕಲಿಸಲಾಗುತ್ತಿದೆ. ಇದು ಮಕ್ಕಳಿಗೆ ಸಂತಸದ ಕಲಿಕೆಯಾಗಿದೆ.

ಡಿಸೈನ್‌ ಥಿಂಕಿಂಗ್‌ ಚಟುವಟಿಕೆಗಳನ್ನು ಈ ಕಿಟ್‌ನಲ್ಲಿ ಜೋಡಿಸಲಾಗಿದೆ. ಇಲ್ಲಿ ಮಕ್ಕಳಿಗೆ ಕೆಲವು ವಸ್ತುಗಳನ್ನು ನೀಡಲಾಗುತ್ತದೆ. ಅವುಗಳನ್ನೆಲ್ಲ ಜೋಡಿಸಿ ಒಂದು ಮಾದರಿ ಅಥವಾ ವಸ್ತು ತಯಾರಿಸಲು ಟಾಸ್ಕ್ ನೀಡಲಾಗುತ್ತದೆ. ಮಕ್ಕಳು ಆ ಎಲ್ಲ ವಸ್ತುಗಳನ್ನು ಜೋಡಿಸಿ ಮಾದರಿ ತಯಾರಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ವೈಚಾರಿಕ ಮನೋಭಾವನೆ ಬೆಳೆಯುತ್ತದೆ.

ಈ ಕಿಟ್‌ ತಯಾರಿಸಲು ನನಗೆ ಸರಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳೇ ಪ್ರೇರಣೆ. ಅಗಸ್ತ್ಯ ಪ್ರತಿಷ್ಠಾನದಿಂದ ನಡೆಯುತ್ತಿರುವ ವಿಜ್ಞಾನ ಮಾದರಿ ಪ್ರಯೋಗಗಳನ್ನು
ಮಾಡಲು ಹೋದಾಗ ಅಲ್ಲಿನ 4-5ನೇ ತರಗತಿ ವಿದ್ಯಾರ್ಥಿಗಳು ನಮಗೂ ಪ್ರಯೋಗಗಳನ್ನು ಮಾಡಿಸಿ ಎಂದು ಕೇಳಿದ್ದರು. ಆದ್ದರಿಂದ ಈ ಮಕ್ಕಳಿಗೂ ಪ್ರಯೋಗ ಮಾಡಿಸಬಹುದಲ್ಲ ಎಂದು ಅನಿಸಿತು. ನಮ್ಮ ವಾಹನ ಚಾಲಕರು ವಿಜ್ಞಾನದ ಅನೇಕ ಪ್ರಯೋಗಗಳನ್ನು ಪ್ರತಿನಿತ್ಯ ವೀಕ್ಷಿಸುತ್ತಿದ್ದುದರಿಂದ ಅವರೇ ಇದಕ್ಕೆ ಸೂಕ್ತ ಎಂದು ತಿಳಿದು, ಆರಂಭಿಕವಾಗಿ ರವೀಂದ್ರ
ಕೋಲಕಾರ ಅವರಿಗೆ ಸೂಕ್ತ ತರಬೇತಿ ನೀಡಲಾಯಿತು. ನಂತರ ಅವರಿಂದ 4-5ನೇ ತರಗತಿ ಮಕ್ಕಳಿಗೆ ಮೋಜಿನ ವಿಜ್ಞಾನ ಪ್ರಯೋಗ ಮಾಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ಇನ್ನುಳಿದ ಜಿಲ್ಲೆಗಳಿಗೂ ಈ ಯೋಜನೆ ಜಾರಿಗೆ ತರುವ ನಿರೀಕ್ಷೆ ಹೊಂದಲಾಗಿದೆ.
ಶಿವಾನಂದ ಚಲವಾದಿ, ವಲಯ ಮುಖ್ಯಸ್ಥ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಹುಬ್ಬಳ್ಳಿ

ಸುಮಾರು 10 ವರ್ಷಗಳಿಂದ ಅಗಸ್ತ್ಯ ಪ್ರತಿಷ್ಠಾನದಲ್ಲಿ ವಾಹನ ಚಾಲಕರಾಗಿ ಪ್ರತಿದಿನ ಸಂಚಾರಿ ಪ್ರಯೋಗಾಲಯವನ್ನು ಶಾಲೆಗಳಿಗೆ ತೆಗೆದುಕೊಂಡು ಹೋಗಿ ನಮ್ಮ ಶಿಕ್ಷಕರಿಗೆ ಬೇಕಾದ ಪ್ರಯೋಗದ ಸಲಕರಣೆಗಳನ್ನು ಜೋಡಿಸಿ ಪಾಠಗಳನ್ನು ವೀಕ್ಷಿಸುತ್ತಿದ್ದೆ. ಆದರೆ ಇದೀಗ ಶಿವಾನಂದ ಚಲವಾದಿ ಅವರ ತರಬೇತಿ ಹಾಗೂ ಸ್ಪಾರ್ಕ್‌ ಕಿಟ್‌ ಸಹಾಯದಿಂದ ಪ್ರತಿನಿತ್ಯ 4-5ನೇ ತರಗತಿ ಮಕ್ಕಳಿಗೆ ಪ್ರಯೋಗಗಳನ್ನು ಮಾಡಿಸುತ್ತಿದ್ದೇನೆ. ಚಾಲಕನಾಗಿ ಜತೆಗೆ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ಸಂತಸ ಮೂಡಿಸಿದೆ.
ರವಿಂದ್ರ ಕೋಲಕಾರ, ವಾಹನ ಚಾಲಕ ಸಂಚಾರಿ ವಿಜ್ಞಾನ, ಪ್ರಯೋಗಾಲಯ ಹಾಗೂ ತರಬೇತುದಾರ

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next