Advertisement

ನೆಚ್ಚಿನ ಕ್ರೀಡಾಗುರುವಿಗೆ…

10:23 PM May 09, 2019 | mahesh |

ಶಾಲಾ ಜೀವನದಲ್ಲಿ ಓದು-ಬರಹ ಎಷ್ಟು ಮುಖ್ಯವಾಗುತ್ತದೆಯೋ, ಅಷ್ಟೇ ಮುಖ್ಯ ಕ್ರೀಡೆ ಸಹ. ಕ್ರೀಡೆ ಎಂಬುದು ಕೇವಲ ವಿದ್ಯಾರ್ಥಿಯ ಮನೋವಿಕಾಸನಕ್ಕೆ ಪೂರಕವಾಗದೆ ಆತನನ್ನು ಚಟುವಟಿಕೆಯಿಂದಿಡಲು ಸಹ ನೆರವಾಗುತ್ತದೆ. ನನ್ನ ವಿದ್ಯಾರ್ಥಿ ಜೀವನದ ಆಟದ ಅವಧಿಯ ಬಗ್ಗೆ ಹೇಳಹೊರಟರೆ ನೆನಪುಗಳ ಸರಮಾಲೆಯೇ ಇದೆ. ಆಟದ ಮೈದಾನಕ್ಕೆ ಪಾದಾರ್ಪಣೆ ಮಾಡಿದ ಕೂಡಲೇ ನಮ್ಮಲ್ಲಿದ್ದ ಉತ್ಸಾಹ, ಅದೇ ರೀತಿ ಆಟದ ಮೈದಾನದಿಂದ ನಿರ್ಗಮಿಸಬೇಕಾದರೆ ಆಗುತ್ತಿದ್ದ ನೋವು ಹೇಳತೀರದು. ಯಾವ ಅವಧಿಯನ್ನು ಮರೆತರೂ ಆಟದ ಅವಧಿ ಮರೆಯುತ್ತಿರಲಿಲ್ಲ. ಹೈಸ್ಕೂಲ್‌ವರೆಗಿನ ನನ್ನ ಶೈಕ್ಷಣಿಕ ಜೀವನದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗವಾಗಿ ಬೆರೆತುಹೋಗಿತ್ತು. ಅದರಲ್ಲಿಯೂ ಹಿರಿಯ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ನಾನು ಹಾಗೂ ನನ್ನ ಸಹಪಾಠಿ ಮಿತ್ರರೆಲ್ಲ ಸೇರಿ ಆಡುತ್ತಿದ್ದ ಆಟ ಲಗೋರಿ. ಅದೆಷ್ಟೇ ಸುಡುಬಿಸಿಲಿದ್ದರೂ ಆ ಸೂರ್ಯನ ಕಿರಣಗಳಿಗೆ ಸವಾಲೊಡ್ಡಿ ಇನ್ನೇನು “ಈ ಸಲ ಕಪ್‌ ನಮೆª’ ಎನ್ನುವಷ್ಟು ಖುಷಿಯಿಂದ ಆಡುತ್ತಿದ್ದೆವು.

Advertisement

ಇಷ್ಟೆಲ್ಲ ಕಾತರದಿಂದ ಕಾಯುತ್ತಿದ್ದ ಆಟದ ಅವಧಿಯ ಬಗ್ಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ನನ್ನ ಹಾಗೂ ಹಲವು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಎಂಬ ಜ್ಯೋತಿ ಬೆಳಗಿಸಿ ಕ್ರೀಡೆಯತ್ತ ಮತ್ತಷ್ಟು ಒಲವು ಮೂಡುವಂತೆ ಮಾಡಿದವರು ನನ್ನ ನೆಚ್ಚಿನ ಗುರು ವಿನ್ಸೆಂಟ್‌ ಸರ್‌. ಅದೇನೋ ತಿಳಿಯೇ ಅವರ ಬಗ್ಗೆ ಹೇಳಲು ಪದಗಳೇ ಸಾಲದು ಎಂದೆ‌ನಿಸಿದ್ದುಂಟು. ಕೈಯಲ್ಲಿ ವಿಜಲ್‌ ಹಿಡಿದುಕೊಂಡು ಅವರು ಬಂದಾಗ ತುಸು ಭಯ ಆವರಿಸಿ ದೂರದಲ್ಲಿರುವ ಹಿಮಾಲಯ ಸೇರಿಬಿಡುತ್ತಿದ್ದೆವು. ಅವರೂ ನನಗೆ ಹೊಡೆದ ನೆನಪು ನನ್ನ ಬಳಿ ಇಲ್ಲವಾದರೂ, ಅವರು ಬೇರೆ ವಿದ್ಯಾರ್ಥಿಗಳಿಗೆ ಬೈಯುವಾಗಲೋ ಅಥವಾ ಆ ವಿಜಲ್‌ನ ಮಾರುದ್ದದ ದಾರದಿಂದ ಪೆಟ್ಟು ಕೊಡುವಾಗ ಆ ವಿದ್ಯಾರ್ಥಿಯ ಜಾಗದಲ್ಲಿ ನಾನಿರಬೇಕಾಗಿತ್ತು ಎಂದು ದಿಗಿಲಾಗುತ್ತಿತ್ತು. ನಿಜ ಹೇಳಬೇಕೆಂದರೆ, ವಿನ್ಸೆಂಟ್‌ ಸರ್‌ ಅವರ ಬುದ್ಧಿಮಾತುಗಳಿಗೆ ಕಿವಿಗೊಡದ ಸಂದರ್ಭಗಳನ್ನು ನೆನೆದಾಗ ನನ್ನ ತಪ್ಪಿನ ಅರಿವಾಗುತ್ತಿತ್ತು. ಬೇಸರವಾಗುವ ಸಂದರ್ಭಗಳನ್ನು ಸೃಷ್ಟಿಮಾಡುತ್ತಿದ್ದುದ‌ªಕ್ಕೆ ಕ್ಷಮೆಯಿರಲಿ ಎಂದು ಈಗ ಬೇಡಿಕೊಳ್ಳುವೆ.

ಶಾಲಾ ಕಾರ್ಯಕ್ರಮಗಳ ಬಗ್ಗೆ ಮಾತೇ ಬೇಡ, ಅದೆಷ್ಟು ಸಡಗರ-ಸಂಭ್ರಮ. ಅದರಲ್ಲಿಯೂ ವಾರ್ಷಿಕ ಕ್ರೀಡಾಕೂಟದ ದಿನ ನಿಗದಿಯಾಗುತ್ತಿದ್ದಂತೆ ನಮ್ಮಲ್ಲಿ ಆನಂದದ ಸಾಗರವೇ ಉಕ್ಕಿ ಹರಿಯುತ್ತಿತ್ತು. ಆ ದಿನ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಆಟೋಟ ಸ್ಪರ್ಧೆಗಳನ್ನು ಕಣ್ತುಂಬಿಸಿಕೊಂಡು ನಮ್ಮಲ್ಲಿದ್ದ ಶಕ್ತಿ, ನಿಶ್ಶಕ್ತಿಯಾಗುವ ಹೊತ್ತಿಗೆ ವೇದಿಕೆಯಲ್ಲಿದ್ದ ಶಿಕ್ಷಕರೋರ್ವರು ರಿಲೇ ಓಟ ಪ್ರಾರಂಭವಾಗುವ ಸೂಚನೆ ನೀಡಿದ್ದೇ ತಡ ನಮ್ಮಲ್ಲಿ ನೂರು ಆನೆಗಳ ಶಕ್ತಿ ಬಂದಷ್ಟು ಖುಷಿಯಾಗುತ್ತಿತ್ತು. ಇವೆಲ್ಲದರ ಜೊತೆಗೆ ವಿನ್ಸೆಂಟ್‌ ಸರ್‌ ನೀಡುತ್ತಿದ್ದ ಕಮೆಂಟರಿ ಕೇಳಲು ಕಾಯುತ್ತಿದ್ದ ನಮಗೆ ಇನ್ನೆಲ್ಲಿಲ್ಲದ ಆನಂದ.

ಯಾವುದೇ ಕಾರ್ಯಕ್ರಮದ ನಿರೂಪಣೆ ಮಾಡಲು ನನಗೆ ಅವಕಾಶ ದೊರೆತಾಗ ಮೊದಲು ನೆನಪಾಗುತ್ತಿದ್ದದ್ದು ವಿನ್ಸೆಂಟ್‌ ಸರ್‌ ಅವರ ನಿರೂಪಣೆ. ಕಾರ್ಯಕ್ರಮದ ಕೊನೆಯವರೆಗೂ ಎಲ್ಲರ ಗಮನ ಪೂರ್ತಿಯಾಗಿ ಕಾರ್ಯಕ್ರಮದತ್ತ ಸೆಳೆಯುವಂತೆ ಮಾಡುವ ಅವರ ಮಾತುಗಾರಿಕೆಯ ಕಲೆ ನನಗೆ ಸದಾ ಸ್ಫೂರ್ತಿ. ಕೆಲವು ಬಾರಿ ರಾಷ್ಟ್ರೀಯ ಹಬ್ಬಗಳ ದಿನದಂದು ಅವರ ನಿರೂಪಣೆ ಇದ್ದರೆ ಅದರ ಚೆಂದವೇ ಬೇರೆ!

ಈಗಲೂ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಎಷ್ಟು ಅಚ್ಚುಮೆಚ್ಚು ಎನ್ನುವುದಕ್ಕೆ ಬಹುದೊಡ್ಡ ಸಾಕ್ಷಿ ಹಳೆವಿದ್ಯಾರ್ಥಿಗಳು. ಅವರನ್ನು ಭೇಟಿಯಾಗಲು ಬಂದಾಗ ಹಳೆವಿದ್ಯಾರ್ಥಿಗಳ ಮೊಗದಲ್ಲಿರುತ್ತಿದ್ದ ನಗು, ಮನಸ್ಸಿಗಾಗುತ್ತಿದ್ದ ಆನಂದ ಅಪಾರ. ಅವರು ನಮ್ಮೊಂದಿಗೆ ನಮ್ಮ ಹಾಗೂ ಅವರ ನಡುವಿನ ಗುರು-ಶಿಷ್ಯ ಬಾಂಧವ್ಯದ ಬಗ್ಗೆ ಹೇಳಿಕೊಳ್ಳುವಾಗ ನನಗೆ ತಿಳಿಯದೇ ನನ್ನ ಮೊಗದಲ್ಲೊಂದು ನಗು ಮೂಡುತ್ತಿತ್ತು.

Advertisement

ತಮ್ಮ ಈ ವೃತ್ತಿಜೀವನದಲ್ಲಿ ವಿದ್ಯಾರ್ಥಿಗಳೊಂದಿಗೆ ಸದಾ ಹುರುಪಿನಿಂದ ಇರುತ್ತಿದ್ದ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಒಬ್ಬ ಸರಿಯಾದ ಮಾರ್ಗದರ್ಶನ ನೀಡುವ ಗುರು ಮಾತ್ರವಾಗದೆ, ಸೋತಾಗ ಧೈರ್ಯ ತುಂಬುವ ದಾತನಾಗಿ, ಬಿದ್ದಾಗ ಕಾಳಜಿ ವಹಿಸುವ ತಾಯಿಯಾಗಿ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದ್ದಾರೆ.

ಯಶಸ್ವಿ ಕೆ.
ದ್ವಿತೀಯ ಪಿಯುಸಿ, ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next