ಹೊಸದಿಲ್ಲಿ : ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆ ಮುಳುಗಲು ವಿಮಾನಗಳ ದೋಷಯುಕ್ತ ಇಂಜಿಯನ್‌ಗಳೇ ಕಾರಣ ಎಂದು ಭಾರತದಿಂದ ಪಲಾಯನ ಮಾಡಿ ಸದ್ಯ ಲಂಡನ್‌ನಲ್ಲಿರುವ, 9,000 ಕೋಟಿ ರೂ. ಬ್ಯಾಂಕ್ ಸಾಲ ಸುಸ್ತಿಗಾರ, ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.
ಕಿಂಗ್‌ಫಿಶರ್ ವಿಮಾನಗಳಿಗೆ ಕಳಪೆ ಇಂಜಿನ್‌ಗಳನ್ನು ಪೂರೈಸಿದ Pratt & Whitney ಎಂಬ ಉದ್ಯಮ ಸಮೂಹದ ವಿರುದ್ಧ ದಾವೆ ಹೂಡಲಾಗಿದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಈ ನಡುವೆ ವಾಯು ಸಾರಿಗೆ ನಿಯಂತ್ರಣ ಸಂಸ್ಥೆ ಡಿಜಿಸಿಎ , ಭಾರತದಲ್ಲಿನ ಕೆಲವು ಏರ್‌ಬಸ್ 320 ನಿಯೋ ಪ್ಲೇನ್‌ಗಳಿಗೆ ಅಳವಡಿಸಲಾಗಿರುವ ಪಿ ಆ್ಯಂಡ್ ಡಬ್ಲ್ಯು ಇಂಜಿನ್‌ಗಳ ವಿವರವಾದ ತಪಾಸಣೆಗೆ ಆದೇಶ ನೀಡಿದೆ.
2012ರಲ್ಲೇ ಮುಚ್ಚಿಹೋಗಿರುವ ಕಿಂಗ್ ಫಿಶರ್ ಏರ್‌ಲೈನ್ಸ್ ಸಂಸ್ಥೆಯು ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಸಾಲವನ್ನು ಬಾಕಿ ಇರಿಸಿದ್ದು ಅಂತೆಯೇ ಕಾನೂನು ಕ್ರಮಕ್ಕೆ ಒಳಗಾಗಿದೆ. ಉದ್ಯಮಿ ವಿಜಯ್ ಮಲ್ಯ ಅವರು ಕಿಂಗ್ ಫಿಶರ್ ಮಾತ್ರವಲ್ಲದೆ ಇನ್ನೂ ಇತರ ಹಲವು ಕೇಸುಗಳಲ್ಲಿ ಭಾರತೀಯ ನ್ಯಾಯಾಲಯಗಳಿಗೆ ಬೇಕಾಗಿದ್ದಾರೆ.
ಈ ನಡುವೆ ದೋಷಯುಕ್ತ ಇಂಜಿನ್‌ಗಳ ಬಗ್ಗೆ ಡಿಜಿಸಿಎ ಸ್ಪಷ್ಟನೆ ಕೋರಿದ್ದು ಅದಕ್ಕೆ ಪಿ ಆ್ಯಂಡ್ ಡಬ್ಲ್ಯು ವಕ್ತಾರರಿಂದ ಉತ್ತರ ಇನ್ನಷ್ಟೇ ಬರಬೇಕಿದೆ.