Advertisement

ಅಪ್ಪನ ಪ್ರೀತಿ ಬಣ್ಣಿಸಲಾಗದು

12:12 PM Jul 25, 2021 | Team Udayavani |

ಅಪ್ಪನೆಂಬ ಅದ್ಭುತ ವ್ಯಕ್ತಿಯನ್ನು ಕೆಲವು ಅಕ್ಷರದಲ್ಲಿ ವರ್ಣಿಸಲು ಅಸಾಧ್ಯ. ಅಪ್ಪ  ಮಕ್ಕಳನ್ನು ಮುಗಿಲೆತ್ತರಕ್ಕೆ ಬೆಳೆಸುವ ಕನಸು ಕಾಣುತ್ತಾ, ಮಕ್ಕಳ ಆಸೆ, ಆಕಾಂಕ್ಷೆಗಳಿಗಾಗಿ ತನ್ನ ಸರ್ವಸ್ವವನ್ನು ಧಾರೆ ಎರೆಯಲು ಸಿದ್ಧವಿರುತ್ತಾರೆ.  ಹೆಂಡತಿಗೆ ತಕ್ಕ ಗಂಡನಾಗಿ, ಮಕ್ಕಳ ಅಗತ್ಯತೆ, ಆಸೆಗಳನ್ನು ಪೂರೈಸುತ್ತಲೇ ಕರ್ತವ್ಯವನ್ನು ತೆರೆಮರೆಯಲ್ಲಿಯೇ ಸಮರ್ಥವಾಗಿ ನಿಭಾಯಿಸುತ್ತಾ, ಸಂಸಾರವನ್ನು ಸಮನಾಗಿ ತೂಗಿಸಿಕೊಂಡು ಮುಂದೆ ಸಾಗುತ್ತಾನೆ. ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಹೀಗೆ ಒಬ್ಬೊಬ್ಬರ ಆಸೆ ಆಕಾಂಕ್ಷೆಗಳು ವಿಭಿನ್ನ. ಅಪ್ಪ ಅನ್ನೋ ಜೀವ ತನ್ನ ತಂದೆ-ತಾಯಿಯನ್ನು ಅತಿಯಾಗಿ ಉಪಚರಿಸಿದರೆ, ಹೆಂಡತಿಗೆ ತಳಮಳ.  ನನ್ನನ್ನು ನೋಡುವುದಿಲ್ಲ ಕೇವಲ ತನ್ನ ತಂದೆ-ತಾಯಿಯನ್ನೇ ನೋಡುತ್ತಾನೆ, ಎನ್ನುವ ಅಭದ್ರತೆ, ಖನ್ನತೆ ಅವಳ ಮನಸಲ್ಲಿ ಮನೆ ಮಾಡಿದರೆ, ನನ್ನ ಅಪ್ಪ ನನ್ನ ತಂಗಿಯಷ್ಟು ನನ್ನನ್ನು ಮುದ್ದಿಸಲಾರ ಎನ್ನುವ ಚಿಂತೆ ಮಗನಲ್ಲಿ ಶುರುವಾಗಿ ಬಿಡುತ್ತದೆ. ಹಾಗಾಗಿ ಈ ಎಲ್ಲ ಮನಸ್ಸುಗಳನ್ನು ಒಂದು ಮಾಡುವಲ್ಲಿ ಇವರು ನಿಸ್ಸಿಮರು.

Advertisement

ಕನಸುಗಾರ: ಮಕ್ಕಳನ್ನು  ಹೆಗಲ ಮೇಲೆ ಹೊತ್ತು, ಹಾಡಿ ಕುಣಿದು ತನ್ನೆಲ್ಲ ದುಃಖಗಳನ್ನು ಮರೆಯುತ್ತಾನೆ. ತನ್ನೆಲ್ಲ ಬಯಕೆಗಳನ್ನು ಬದಿಗೊತ್ತಿ, ಸದಾ ಕುಟುಂಬದ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಹಾಗಾಗಿಯೇ ಅಪ್ಪನನ್ನು “ಪಿತಾ ಉಚ್ಚತರಃ ಖಾತ್‌’ ಅಂದರೆ, ಅಪ್ಪ ಅಂದರೆ ಆಕಾಶ ಎಂದು ನಮ್ಮ ಶಾಸ್ತ್ರಗಳು ಬಣ್ಣಿಸಿವೆ. ಅಲ್ಲದೇ ತೈತ್ತರೀಯೋಪನಿಷತ್ತು  “ಪಿತೃ ದೇವೋಭವ” ಎನ್ನುವ ಮೂಲಕ ತಂದೆಗೆ ದೇವಸ್ಥಾನವನ್ನು ಕಲ್ಪಿಸಿಕೊಟ್ಟಿದೆ.

ಅದೆಷ್ಟೋ ಸಲ ಅಪ್ಪ ತನ್ನ ಕುಟುಂಬದ ಹಸಿವನ್ನು ನೀಗಿಸುವ ಬರದಲ್ಲಿ, ತನ್ನ ಹಸಿವನ್ನೇ ಮರೆತ ಉದಾಹರಣೆಗಳುಂಟು. ಮಕ್ಕಳೇ ಅಪ್ಪನ ಪ್ರಪಂಚ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ಗದರುವ ಅಪ್ಪ, ಅವರ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುತ್ತಾನೆ. ಅವರಿಗೆ ಉತ್ತಮ ಶಿಕ್ಷಣ, ಪರಿಸರ, ಸಂಸ್ಕಾರ ನೀಡಿ, ಸಮಾಜದ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಅಪ್ಪನ ಪಾತ್ರ ಬಲು ದೊಡ್ಡದು.  ಹೀಗೆ ಅಪ್ಪ ತನ್ನೆಲ್ಲ ಸಂತೋಷಗಳನ್ನು ಮಕ್ಕಳ ಕಣ್ಣಲ್ಲೇ ಕಾಣುವ ನಿಸ್ವಾರ್ಥ ಜೀವಿ. ಅಪ್ಪ ಮಕ್ಕಳ ಪಾಲಿಗೆ ಗುರುವಾಗಿ, ಒಬ್ಬ ಉತ್ತಮ ಸ್ನೇಹಿತನಾಗಿ, ಬಂಧುವಾಗಿ ಅವರ ಬದುಕನ್ನು ಹಸನಾಗಿಸುತ್ತಾನೆ. ಅಪ್ಪ ಸದಾ ನಮ್ಮ ಜತೆಯೇ ಇದ್ದು ನಮ್ಮನ್ನು ರಕ್ಷಕನಂತೆ ಬೆಂಗಾವಲಿಗೆ ನಿಲ್ಲುತ್ತಾನೆ. ಇಂತಹ ನಿಸ್ವಾರ್ಥಿಗಳಿಗೆ ಅವರ ಮುಪ್ಪಿನ ವಯಸ್ಸಿನಲ್ಲಿ ನಾವು ಪೋಷಕರಂತೆ ಅವರಿಗೆ ಆಸರೆಯಾಗಬೇಕು. ಅಂತಹ ಒಂದು ಮನಃಸ್ಥಿತಿ ಇಂದು ನಿರ್ಮಾಣವಾಗಬೇಕಾದ ಅಗತ್ಯಇದೆ.

ಗವಿಸಿದ್ದೇಶ್‌ ಕೆ.

ಗಂಗಾವತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next