ರಾಮಪುರದಲ್ಲಿ ಮೇರಿ ಎಂಬ ತರುಣಿ ವಾಸವಾಗಿದ್ದಳು. ಅವಳಿಗೆ ಬಹಳ ಬೇಗ ಸಿಟ್ಟು ಬರುತ್ತಿತ್ತು. ಅದೇ ಕಾರಣಕ್ಕೆ ಅನೇಕರು ಅವಳ ಬಳಿ ಮಾತನಾಡುತ್ತಲೇ ಇರಲಿಲ್ಲ. ಅವಳ ಇನ್ನೊಂದು ಗುಣ ಎಂದರೆ ಪ್ರತಿಯೊಂದರಲ್ಲಿಯೂ ತಪ್ಪು ಹುಡುಕುವುದು. ಹೀಗಾಗಿ ಅವಳಿಗೆ ಯಾವ ವಸ್ತುಗಳೂ, ಯಾವ ಸಂಗತಿಗಳೂ ಖುಷಿ ಕೊಡುತ್ತಿರಲಿಲ್ಲ. ಒಮ್ಮೆ ತನ್ನ ಮೇಲೆಯೇ ಬೇಸರ ಬಂದಿತು.
ಮೇರಿ, ತನ್ನ ತಂದೆ ಬಳಿ ಹೋಗಿ “ಅಪ್ಪಾ, ನಾನು ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಿದ್ದಂತೆ, ಇನ್ನೊಂದು ಸಮಸ್ಯೆ ಎದುರಾಗುತ್ತದೆ. ನನ್ನ ಸಮಸ್ಯೆಗಳಿಗೆ ಕೊನೆಯೇ ಇಲ್ಲವೇನೋ ಎಂದೆನಿಸುತ್ತಿದೆ’ ಎಂದು ಅತ್ತಳು. ತಂದೆಗೆ ಅವಳ ಪರಿಸ್ಥಿತಿ ಕಂಡು ಮರುಕವಾಯಿತು. ಅವಳನ್ನು ಸಮಾಧಾನಿಸುತ್ತಾ ತಂದೆ ಮೂರು ಒಲೆಗಳ ಮೇಲೆ ಒಂದೊಂದು ಪಾತ್ರೆಯಲ್ಲಿ ನೀರು ಕಾಯಲಿಟ್ಟರು.
ಮೂರರಲ್ಲೊಂದು ಪಾತ್ರೆಯಲ್ಲಿ ಆಲೂಗಡ್ಡೆ, ಇನ್ನೆರಡರಲ್ಲಿ ಮೊಟ್ಟೆ ಮತ್ತು ಚಹಾ ಎಲೆಗಳನ್ನು ಹಾಕಿದನು. ಮೇರಿಗೆ ಸಿಟ್ಟು ಬಂದಿತು “ಇದನ್ನೆಲ್ಲ ಯಾಕೆ ಮಾಡುತ್ತಿದ್ದೀರಿ? ನನಗೆ ಅರ್ಥವಾಗುತ್ತಿಲ್ಲ’ ಎಂದಳು ಮೇರಿ ಸಿಡುಕುತ್ತಾ. ತಂದೆ 15 ನಿಮಿಷ ತಾಳು ಎಂದರು. ಮೇರಿಗೆ ತಾಳ್ಮೆಯೇ ಇರಲಿಲ್ಲ. ಕ್ಷಣ ಕ್ಷಣಕ್ಕೂ ಅವಳ ಚಡಪಡಿಕೆ ಹೆಚ್ಚುತ್ತಿತ್ತು.
15 ನಿಮಿಷಗಳ ನಂತರ ತಂದೆ ಆಲೂಗಡ್ಡೆ, ಮೊಟ್ಟೆ ಹಾಗೂ ಚಹಾ ಎಲೆಗಳನ್ನು ನೀರಿನಿಂದ ಹೊರಗೆ ತೆಗೆದು ತಟ್ಟೆಯಲ್ಲಿ ಹಾಕಿಟ್ಟರು. “ನೀನೀಗ ಏನು ಬದಲಾವಣೆಯನ್ನು ಗಮನಿಸಿದೆ?’ ಎಂದು ತಂದೆ ಕೇಳಿದರು. ಮೇರಿ ಒಂದು ನಿಮಿಷ ಯೋಚಿಸಿ “ಆಲೂಗಡ್ಡೆ ಬೆಂದು ಮೃದುವಾಗಿದ್ದರೆ, ಮೊಟ್ಟೆಯು ಗಟ್ಟಿಯಾಗಿತ್ತು ಮತ್ತು ಚಹಾದ ಎಲೆಯು ಪರಿಮಳ ಸೂಸುತ್ತಿದೆ.’ ಅದನ್ನು ಬಿಟ್ಟು ಇನ್ನೇನು ಹೇಳಲೂ ಅವಳಿಗೆ ತಿಳಿಯಲಿಲ್ಲ.
ಅವಳನ್ನು ಅಬಿನಂದಿಸಿದ ತಂದೆ “ಸರಿಯಾಗಿ ಗಮನಿಸಿದ್ದೀಯಾ ಮಗಳೇ… ಆಲೂಗಡ್ಡೆ, ಮೊಟ್ಟೆ ಮತ್ತು ಚಹಾದ ಎಲೆಗಳು ಎದುರಿಸಿದ್ದು ಒಂದೇ ರೀತಿಯ ಪರಿಸ್ಥಿತಿಯಾದರೂ ಆ ಪರಿಸ್ಥಿತಿಗೆ ಅವು ಪ್ರತಿಕ್ರಿಯಿಸಿದ ರೀತಿ ಮಾತ್ರ ವಿಭಿನ್ನ. ಗಟ್ಟಿಯಾಗಿದ್ದ ಆಲೂಗಡ್ಡೆ ಬಿಸಿನೀರಿನಲ್ಲಿ ತನ್ನ ಗಟ್ಟಿತನವನ್ನು ಕಳೆದುಕೊಂಡುಮೃದುವಾಯಿತು. ಇದಕ್ಕೆ ತದ್ವಿರುದವಾಗಿ ಹೊರಗೆ ಮೃದುವಾಗಿದ್ದ ಮೊಟ್ಟೆಯು ಬಿಸಿನೀರಿನಲ್ಲಿ ಗಡುಸಾಯಿತು.
ಚಹಾದ ಎಲೆಯಂತೂ ವಿಶಿಷ್ಟವಾಗಿ ಪ್ರತಿಕ್ರಿಯಿಸಿ, ತಾನಿದ್ದ ನೀರನ್ನೇಬದಲಾಯಿಸಿ ಅದಕ್ಕೆ ಬಣ್ಣಮತ್ತುರುಚಿಯನ್ನುತುಂಬಿತು. ಅದೇ ರೀತಿ ಜೀವನದಲ್ಲಿ ಎಂಥಾ ಸಂಕಷ್ಟಗಳೇ ಬಂದರೂ ಅವುಗಳಿಗೆ ನಾವು ಸಕರಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕೆಂದು ತಂದೆ ಮೇರಿಗೆ ತಿಳಿ ಹೇಳಿದರು. ಇಷ್ಟು ದಿನ ಪ್ರತಿಯೊಂದಕ್ಕೂ ದೂರು ಹೇಳುತ್ತಿದ್ದ ಮೇರಿ ಬದಲಾದಳು. ತಂದೆ ಹೇಳಿದ್ದು ಅವಳ ಮನಸ್ಸಿನಲ್ಲಿ ನಾಟಿತು.
ಅನುವಾದ: ಸುಮನ್ ದುಬೈ