“ಮಾತೃ ದೇವೋ ಭವ, ಪಿತೃ ದೇವೋ ಭವ’ ಎನ್ನುವಂತೆ ತಂದೆ ತಾಯಿಯರನ್ನು ದೇವರಂತೆ ಕಾಣುವುದು, ಪೂಜಿಸುವುದು ನಮ್ಮ ಸಂಸ್ಕೃತಿಯ ಹಿರಿಮೆ. ದೇವರು ತಾನು ಎಲ್ಲ ಕಡೆ ಇರುವುದಕ್ಕೆ ಸಾಧ್ಯವಿಲ್ಲ ಎಂದೇ ತಾಯಿಯನ್ನು ಸೃಷ್ಟಿಸದ, ಹಾಗೇಯೆ ತನ್ನಿಂದ ಏಕಕಾಲಕ್ಕೆ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಎಂದೇ ಅಪ್ಪನನ್ನು ಸೃಷ್ಟಿಸಿದ.
ಈ ಮಾತು ವಿಶ್ವವ್ಯಾಪ್ತಿಯಾಗಿರಲು ಕಾರಣ ಅಪ್ಪ ಅನ್ನುವ ಪದದಲ್ಲಿರುವ ಒಲವು. ಈ ಎರಡು ಅಕ್ಷರದಲ್ಲಿರುವ ಸಾವಿರ ಆನೆಗಳ ಬಲ. ನಮ್ಮದೊಂದು ಬಡ ಕುಟುಂಬ . ಐದು ಜನ ಗಂಡು ಮಕ್ಕಳನ್ನು ಶಿಕ್ಷಣ ನೀಡಿ, ಸಾಕಿ ಸಲುಹಲು ಇಂದಿಗೂ ಅಪ್ಪ, ಅಮ್ಮ ಪಟ್ಟ ಕಷ್ಟ ಸಾಮಾನ್ಯವೇನಲ್ಲ.
ಅಮ್ಮ ಮನೆಯಲ್ಲಿ ಸಂಬಳವಿಲ್ಲದೆ ದುಡಿದರೆ, ಅಪ್ಪ ಅರವತ್ತೈದು ವರ್ಷದವರೆಗೂ ಕಮ್ಮಾರನಾಗಿ ಕುಲುಮೆಯಲ್ಲಿ ಕುಟುಂಬಕ್ಕೆಂದೇ ತನ್ನ ಜೀವ ಸವಿಸಿದರು. ಹಗಲು, ರಾತ್ರಿ ಎನ್ನದೆ ದುಡಿದ ಅವನ ಬೆವರ ಹನಿಯ ಶ್ರಮಕ್ಕೆ ಸಾಟಿ ಎಂಬುದೆ ಇಲ್ಲ.
ಮಕ್ಕಳಿಗೆ ಭಯವಾದಾಗ ಓಡಿ ಬಂದು ಬಿಗಿದಪ್ಪುವುದು ತಂದೆಯನ್ನೇ. ನಮಗೆಲ್ಲ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಯರಿಗೆ, ಒಂದು ಸಲಾಂ ಹೇಳುವುದಕ್ಕೆ, ವಿಶ್ವ ತಂದೆಯರ ದಿನಬಂದೇ ಬಿಟ್ಟಿದೆ ಮಕ್ಕಳಿಗಿದು ಸುವರ್ಣ ಸುದಿನ.
ಹುಟ್ಟಿದ ಕಂದಮ್ಮನನ್ನು ತೋಳುಗಳಲ್ಲಿ ಹಿಡಿದು ಭವಿಷ್ಯದ ನೂರಾರು ಕನಸ್ಸುಗಳನ್ನುಕಾಣುವವನು ತಂದೆ. ಎಳೆಯ ಚಿಗುರನ್ನು ಬೃಹತ್ ವೃಕ್ಷವನ್ನಾಗಿಸುವ ಜವಬ್ದಾರಿ ಹೊರುತ್ತಾ ಮಕ್ಕಳ ಏಳು-ಬೀಳುಗಳಲ್ಲಿ ಜತೆಯಾಗಿವವನು ತಂದೆ.
ಹುಟ್ಟಿದ ಕಂದಮ್ಮ ಮೊದಲ ಬಾರಿಗೆ ಅಪ್ಪಾ.. ಎನ್ನುವಾಗ, ಅಪ್ಪನಿಗದು ಜೀವಮಾನದ ಸಂತೋಷವನ್ನೇ ಉಡುಗೊರೆ. ಮಗು ಎಡವದಂತೆ, ತೋಳುಗಳನ್ನು ಹಿಡಿದು ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಇಡಿಸುವವನು ತಂದೆ. ದಾರಿ ತಪ್ಪಿದಾಗ ಒಳ್ಳೆಯ ದಾರಿ ತೋರುವವನು ತಂದೆ. ಬಿದ್ದಾಗ ತೋಳುಗಳಲ್ಲಿ ಬೀಗಿದಪ್ಪಿ ಸಂತೈಸುವವನೇ ತಂದೆ. ಅಪ್ಪ ಎಷ್ಟೇ ಶ್ರಮಪಟ್ಟು ದುಡಿದು ಬಂದಿದ್ದರು, ಮಗುವಿನೊಂದಿಗೆ ಕಾಲ ಕಳೆಯುವಾಗ ಎಲ್ಲವು ಮಾಯವಾಗುವುದು. ಅಮ್ಮನ ಕಂಬನಿಯಷ್ಟು, ಅಪ್ಪನ ಬೆವರಹನಿಗಳು ಕಾಣದೆಂದು. ಅಪ್ಪ ಎಂದರೆ ಮನೆಯ ಕಾಮಧೇನು ಇದ್ದಂತೆ.
ಅಪ್ಪನ ತ್ಯಾಪೆ ಬಟ್ಟೆಗಳ ಒಳಗಿನ ಹರಿದ ಬನಿಯಾನ್ ಯಾರಿಗೂ ಕಾಣಲೇ ಇಲ್ಲ. ಹೇಳಿದಷ್ಟು ಪೀಸ್ ಕಟ್ಟಿ, ಬೇಕಾದ ಬಟ್ಟೆ ಶೂ, ಚಪ್ಪಲಿ ಹಾಕಿ ಶಾಲೆಗೆ ಕಳುಹಿಸುವಾಗ, ಅಪ್ಪನ್ ಹವಾಯಿ ಹರಿದದ್ದು ಯಾರಿಗೂ ಗೊಚರಿಸಲೇ ಇಲ್ಲ. ಕೂಡಿ ಉಣ್ಣುವಾಗ ಎಲ್ಲರಿಗೂ ತೃಪ್ತಿಯಾಗಲಿ ಎಂದು ಅರ್ಧ ಹೊಟ್ಟೆಯಲಿ ಕೈ ತೋಳೆದಾಗ ಅಪ್ಪನ ಹಸಿವು ಯಾರಿಗೂ ತಿಳಿಯಲೇ ಇಲ್ಲ.
ತಂದೆಯ ಸೇವೆ ಮಾಡುವುದೆ ಮಕ್ಕಳ ಕರ್ತವ್ಯ. ಇಂದಿನ ತಾಂತ್ರಿಕ ಯುಗದಲ್ಲಿ ಸಂಬಂಧಗಳು ಮರೀಚಿಕೆಯಾಗಿರುವುದು ವಿಪರ್ಯಾಸ.
– ಶಿವರಾಜ್ ಎಂ.ಕೆ. ಎಸ್‌ಡಿಎಂ ಕಾಲೇಜು ಉಜಿರೆ