Advertisement

Father’s Day: ತುಂಬಾ ಕೆಲಸ ಬಾಕಿ ಉಳಿದಿತ್ತು ಅಪ್ಪಾ…

01:18 PM Jun 16, 2024 | Team Udayavani |

ನಾನು ಮತ್ತು ಅಪ್ಪ ಯಾವಾಗಲೂ ನಮಗೆ ಅನ್ನಿಸಿದ್ದನ್ನು, ಮೆಚ್ಚುಗೆ ಮತ್ತು ಕೋಪವನ್ನು ಒಬ್ಬರಿಗೊಬ್ಬರು ಹೇಳಿಕೊಂಡೇ ಇದ್ದವರು. ಆದರೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಬೇಜಾರಾದಾಗ ಅದನ್ನು ಬೇಕಂತಲೇ ಮುಚ್ಚಿಡುತ್ತಿದ್ದೆವು. ಅದು ಅಮ್ಮನಿಗೆ ಮಾತ್ರ ಗೊತ್ತಿರುತ್ತಿತ್ತು.

Advertisement

ನನ್ನ ಅಪ್ಪ ಬಹಳ ಒಳ್ಳೆಯ ಲೇಖನ ಬರೆಯುತ್ತಾರೆಂದೋ, ನನ್ನ ಮಗಳ ಪುಸ್ತಕ ಚೆನ್ನಾಗಿದೆ ಎಂದೋ ನಾವಿಬ್ಬರೂ ಒಬ್ಬರಿಗೊಬ್ಬರು ಹೇಳಿಕೊಂಡಿದ್ದೇವೆ.

ನನ್ನ ಪ್ರಗ್ನೆನ್ಸಿ ಬಹಳ ಕಷ್ಟಕರವಾಗಿತ್ತು. ಪೂರ್ತಿ ಮನೆಯಲ್ಲೇ ಕಳೆಯಬೇಕಾಗಿತ್ತು. ಇಷ್ಟವಾಗಿದ್ದನ್ನು ತಿನ್ನೋದಕ್ಕೆ ಸಾಧ್ಯವಿರಲಿಲ್ಲ. ಆವಾಗಲೆಲ್ಲಾ ಅಪ್ಪನ ನೆನಪಾಗುತ್ತಿತ್ತು. ಅಪ್ಪ ನನ್ನನ್ನೇ ಅಷ್ಟು ಚೆನ್ನಾಗಿ ನೋಡಿಕೊಂಡಿದ್ದರು, ಇನ್ನು ಬರುವ ಮೊಮ್ಮಕ್ಕಳನ್ನು ಇನ್ನೆಷ್ಟು ಖುಷಿಯಾಗಿ ನೋಡಿಕೊಳ್ಳುತ್ತಿದ್ದರು ಎಂದು ಊಹೆ ಮಾಡಿಕೊಂಡೇ ಕಾಲ ಕಳೆಯುತ್ತಿದ್ದೇನೆ.

ಅವರು ಅಪ್ಪನಾಗಿ ಮಾತ್ರ ನನಗೆ ಗೊತ್ತಿದ್ದರು. ಅವರು ತಾತನಾಗಿ ಇದ್ದಿದ್ದರೆ ಇನ್ನೆಷ್ಟು ಖುಷಿಯಾಗಿರುತ್ತಿದ್ದರು ಎಂಬುದನ್ನು ಯೋಚಿಸುತ್ತಿರುತ್ತೇನೆ. ಅವರು ಅದಕ್ಕೆಂದೇ ಅದೆಷ್ಟು ತಯಾರಿ ಮಾಡಿಕೊಳ್ಳುತ್ತಿದ್ದರು, ಎಷ್ಟು ಸಂಭ್ರಮ ಪಟ್ಟುಕೊಳ್ಳುತ್ತಿದ್ದರು ಎಂದೆಲ್ಲಾ ಅಂದುಕೊಳ್ಳುತ್ತಿರುತ್ತೇನೆ.

ನನ್ನ ಮಗಳು ಅಪ್ಪನ ಹಾಗೆ ಕಾಣುತ್ತಾಳೆ, ಅವರ ಹಾಗೆಯೇ ಚಿನಕುರುಳಿಯಂತೆ ಓಡಾಡುತ್ತಿರುತ್ತಾಳೆ. ನನ್ನ ಮಗ ಅವರಂತೆಯೇ ಪುಸ್ತಕ, ಪೇಪರ್‌ ಎಲ್ಲವನ್ನೂ ಕುತೂಹಲದಿಂದ ನೋಡುತ್ತಾನೆ. ಬಂದವರನ್ನು ನಕ್ಕು ಮಾತಾಡಿಸುತ್ತಾನೆ. ಒಂದು ವರ್ಷದಲ್ಲಿ ನಾನಿದನ್ನು ಗಮನಿಸಿದ್ದೇನೆ. ಹೀಗೆ ಮನೆಯಲ್ಲಿ ಇರುವ ಇಷ್ಟೊಂದು ಖುಷಿಯನ್ನು ನೋಡಲು ಅಪ್ಪನೇ ಇಲ್ಲ ಎಂಬುದು ಬಹಳ ಬೇಜಾರಿನ ಸಂಗತಿ.

Advertisement

ಅಪ್ಪ ಇದ್ದು ಇದನ್ನೆಲ್ಲಾ ನೋಡಬೇಕಿತ್ತು. ಅವರು ಮಕ್ಕಳನ್ನ ಕೂರಿಸಿಕೊಂಡು ಕಥೆ ಹೇಳಬೇಕಿತ್ತು, ಆಟ ಆಡಿಸಬೇಕಿತ್ತು. ಅವರು ಬರೆದಿರುವ ಲೇಖನ ತೋರಿಸ ಬೇಕಿತ್ತು. ದಿನಕ್ಕೆ ಹತ್ತು ಬಾರಿ “ತಾತ ತಾತ’ ಎಂದು ಕೂಗುವ ಮಕ್ಕಳ ಜೊತೆ ರೌಂಡ್‌ ಹೋಗಬೇಕಿತ್ತು ಮತ್ತು ಅವರನ್ನು ಮಾತಾಡಿಸಲು ಬರುತ್ತಿದ್ದ ಹತ್ತು ಹಲವು ಓದುಗರಿಗೆ “ನನ್ನ ಮೊಮ್ಮಕ್ಕಳು’ ಎಂದು ಪರಿಚಯಿಸಬೇಕಿತ್ತು. ಇದೆಲ್ಲಾ ಆಗಬೇಕಿತ್ತು, ನೋಡಬೇಕಿತ್ತು, ಇರಬೇಕಿತ್ತು ಎಂಬುದೇ ನನ್ನ ತಲೆಯಲ್ಲಿ ದಿನಾ ಓಡುತ್ತಿರುತ್ತದೆ. ನೀನು ಇನ್ನೂ ಲೇಖನಗಳನ್ನು, ಪುಸ್ತಕಗಳನ್ನು ಬರೆಯಬೇಕಿತ್ತು ಎಂದು ನಾನು ಅಪ್ಪನಿಗೆ ಹೇಳಬೇಕಿತ್ತು. ಅವರ ಇನ್ನಷ್ಟು ಪುಸ್ತಕಗಳು ಬರಬೇಕಿತ್ತು. ಇನ್ನಷ್ಟು ಚರ್ಚೆಗಳಲ್ಲಿ ಭಾಗವಹಿಸಿ ಜನರ ಸೈಂಟಿಫಿಕ್‌ ಟೆಂಪರ್ಮೆಂಟ್‌ ಹೆಚ್ಚಿಸಬೇಕಾಗಿತ್ತು ಎಂದೂ ಅನ್ನಿಸುತ್ತಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಅಪ್ಪಂದಿರ ದಿನ ದಂದು ಖುದ್ದಾಗಿ ಅಪ್ಪನಿಗೆ ಶುಭಾಶಯ ಹೇಳಬೇಕು ಎಂಬ ಆಸೆಗೋಸ್ಕರವಾದರೂ ಅಪ್ಪ ಇರಬೇಕಿತ್ತು ಎಂದು ಬಹಳ ಬಾರಿ ಅನ್ನಿಸಿದ್ದಿದೆ.

ಅಪ್ಪನಿಗೆ ಈ ವರ್ಷ ಹೇಳದೇ ಉಳಿದ ಮಾತು ಇಷ್ಟೇ: ಹ್ಯಾಪಿ ಫಾದರ್ಸ್‌ ಡೇ ಅಪ್ಪಿ, ನೀನು ಇರಬೇಕಿತ್ತು…

-ಮೇಘನಾ ಸುಧೀಂದ್ರ 

Advertisement

Udayavani is now on Telegram. Click here to join our channel and stay updated with the latest news.

Next