ಮಂಗಳೂರು: ನಗರದ ಹೊಯಿಗೆಬಜಾರ್ ಪ್ರದೇಶದಲ್ಲಿ 2009ರಲ್ಲಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಫರ್ಜಾನಾ ಎಂಬ ಮಹಿಳೆ ತನ್ನ ಕುಟುಂಬವನ್ನು ಮತ್ತೆ ಸೇರಿದ್ದಾರೆ.
ಬೀದಿಯಲ್ಲಿ ಅಲೆಯುತ್ತಿದ್ದ ಅವರನ್ನು ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್‌ನ ಕೋರಿನ್ ರಸ್ಕಿನ್ಹಾ ಅವರು ರಕ್ಷಿಸಿ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಆಕೆಯಿಂದ ಊರಿನ ಬಗ್ಗೆ ನಿಖರವಾಗಿ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಇರಿಸಿಕೊಂಡಿದ್ದರು. ಮದ್ದೂರಿನ ಮಾಂಸದಂಗಡಿ ಬಳಿ ಮನೆ ಎಂದಷ್ಟೇ ಹೇಳುತ್ತಿದ್ದಳು. ರಾಜ್ಯದ ವಿವಿಧೆಡೆ ಮದ್ದೂರು ಎನ್ನುವ ಊರುಗಳು ಇದ್ದುದರಿಂದ ಯಾವ ಮದ್ದೂರು ಎಂದು ಮಾಹಿತಿ ಸ್ಪಷ್ಟವಾಗಿರಲಿಲ್ಲ.
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರಿನ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಕೆಯ ಕುಟುಂಬಸ್ಥರು ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಫರ್ಜಾನಾ ಬಗ್ಗೆ ಅಲ್ಲಿರುವ ಮಾಂಸದಂಗಡಿಯವರಿಗೆ ಮಾಹಿತಿ ನೀಡುವಂತೆ ಪತ್ರವೊಂದನ್ನು ಅವರ ಬಳಿ ಕೊಡಲಾಗಿತ್ತು.
ಇದು ಮಹಿಳೆಯ ಪುತ್ರ ಆಸಿಫ್‌ಗೆ ಲಭಿಸಿದ್ದು, ಅವರು ಪತ್ನಿ, ಮಕ್ಕಳು, ತಂಗಿ ಬಾವನೊಂದಿಗೆ ಮಂಗಳೂರಿನ ವೈಟ್ ಡೌಸ್‌ಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನು ನೋಡಿದ ಫರ್ಜಾನಾ ಅತೀವ ಸಂತೋಷಗೊಂಡರು.