Advertisement

ಅಪ್ಪನ ನೆನಪು: ಪ್ರೀತಿಯ ಅಪ್ಪ, ನಿನ್ನ ನೆನಪಾದಗಲೆಲ್ಲ ಆಕಾಶದ ನಕ್ಷತ್ರ ನೋಡುತ್ತೇನೆ!

11:57 AM Jun 21, 2020 | keerthan |

ಹಾ. ! ನಾನಾಗ ಆರನೇ ತರಗತಿ ಓದ್ತಾಇದ್ದೆ, ತರಗತಿಗಳು ಶುರುವಾಗಿ ಕೆಲ ದಿನಗಳು ಆಗಿರಬೇಕು ಅಷ್ಟೇ, ಮುಂಗಾರಿನ ಹಂಗಾಮು ಬೇರೆ, ಮಳೆ ಅಂದ್ರೆ ಕೇಳಬೇಕೆ ಅದರಲ್ಲೂ ಮುಂಗಾರು ತುಸು ಜೋರಾಗಿನೇ ಸುರಿತಾನೆ ಇತ್ತು. ಯಾಕೋ ಏನೋ ಸ್ಕೂಲ ಬಿಟ್ಟು ತುಂಬಾನೆ ಹೊತ್ತಾಗಿತ್ತು. ಮಳೆ ಯಾಕೋ ನಿಲ್ಲುವ ಸೂಚನೆಯೇ ಕಾಣ್ತಾ ಇರಲಿಲ್ಲ, ನಾನು ತಮ್ಮ, ತಂಗಿಯರು ಎಲ್ಲರೂ ಆಗಲೇ ಮಳೆಲಿ ನೆನೆದು ಬಟ್ಟೆಯೆಲ್ಲ ಒದ್ದೆ ಮಾಡ್ಕೊಂಡು ಬಿಟ್ಟಿದ್ದೆವು. ಇತ್ತ ಬಸ್ ಬೇರೆ ಬಂದಿರಲಿಲ್ಲ, ಪಾಪ ಅದಕ್ಕೇನು ಗೊತ್ತು ನಾವಿಲ್ಲಿ ಬಟ್ಟೆ ಒದ್ದೆ ಮಾಡ್ಕೊಂಡಿದ್ದೀವಿ ಅಂತ. ಆದರೆ ಒಬ್ಬರಿಗೆ ಮಾತ್ರ ಗೊತ್ತಿತ್ತು ಮಕ್ಕಳು ಮಳೆಯಲ್ಲಿ ನೆನೆದಿರ್ತಾರೆ ತಕ್ಷಣ ಅವರನ್ನು ಮನೆಗೆ ಕರಕೊಂಡು ಹೋಗಬೇಕು ಇಲ್ಲಾ ಅಂದರೆ ನೆಗಡಿ ಜ್ವರ ಬಂದರೆ ಕಷ್ಟ ಅಂತ. ಆಗಲೇ ನೋಡಿ ಅಪ್ಪ ಬೈಕನ್ನೇರಿ ಬಂದು ನಮ್ಮನ್ನೆಲ್ಲ ಮನೆಗೆ ಕರಕೊಂಡ್ ಹೋಗಿದ್ದು.

Advertisement

ಆಗಲೇ ಹೇಳಿದೆನಲ್ಲ ಮಳೆಯಲ್ಲಿ ನೆನೆದಿದ್ವಿ ಅಂತ ನನಗಂತೂ ಆಗಲೇ ಶೀತ ಜ್ವರ ಶುರುವಾಗಿ ಬಿಟ್ಟಿತ್ತು, ಆ ದಿನ ರಾತ್ರಿ ಅವ್ವ-ಅಪ್ಪ ತುಂಬಾನೇ ಆರೈಕೆ ಮಾಡಿದರು. ಜ್ವರ ತುಸು ಜಾಸ್ತಿನೇ ಇತ್ತು., ಮರುದಿನ ಬೆಳಿಗ್ಗೆ ಅಪ್ಪ ಆಸ್ಪತ್ರೆಗೆ ಕರಕೊಂಡು ಹೋಗಿ ಸೂಜಿ ಚುಚ್ಚಿಸುವಾಗ ಮುಖ ಕಿವಿಚಿದ್ದು ನನಗಂತೂ ಈಗಲೂ ನೆನಪಿದೆ.

ಹಾ ಯಾವ ತಂದೆ ತಾನೇ ತನ್ನ ಮಕ್ಕಳ ನೋವನ್ನ ಸಹಿಸ್ತಾರೆ ಹೇಳಿ. ನಾಲ್ಕೈದು ದಿನ ದಿನ ಕಳೆದಿರಬೇಕು ಜ್ವರ ಯಾಕೋ ಏನೋ ಕಡಿಮೆಯೆ ಆಗಲಿಲ್ಲ, ಸಿಟಿಯ ದೊಡ್ಡ ಆಸ್ಪತ್ರೆಗೆ ಹೋಗಿ ಕರ್ಕೊಡು ಹೋದರು. ಅಲ್ಲಿ ಡಾಕ್ಟರ್ ಒಂದು ವಾರ ಅಡ್ಮಿಟ್ ಮಾಡಬೇಕಾಗುತ್ತೆ ಕಾರಣ ಟೈಫಾಯಿಡ್ ಜ್ವರ ಬಂದಿದೆ ಎಂದರು. ಸರಿ ಅಂತ ಅಡ್ಮಿಟ್ ಮಾಡಿದರು. ಅಮ್ಮ ಬೇರೆ ಮನೇಲಿ ತಮ್ಮ-ತಂಗಿರನ್ನ ನೋಡಿಕೊಂಡು ಇದ್ದರು, ಇತ್ತ ಅಪ್ಪ ನನ್ನ ಜೊತೇಲೇ ಇದ್ದರು. ನಾನು ಬಾತ್ ರೂಮ್ ಗೆ ಹೋಗಬೇಕು ಅಂದರು ಕೂಡ ನನ್ನನ್ನ ಎತ್ತಕೊಂಡೇ ಹೋಗವರು, ಎಲ್ಲಿ ನನಗೆ ಆಯಾಸ ಆಗುತ್ತೆ ಅಂತ. ಹೀಗೆ ಅಪ್ಪನ ತೊಳಲ್ಲಿ ಬೆಚ್ಚಗಿನ ಆರೈಕೆ ಪಡೆದು ಜ್ವರದಿಂದ ವಿಮುಕ್ತನಾದ ನಾನು ಮತ್ತೆ ಮೊದಲಿನಂತಾದೆ.

ಅಪ್ಪ ಯಾವತ್ತೂ, ಕಾಸ್ಟ್ಲಿ ಬಟ್ಟೆ-ಚಪ್ಪಲಿ ಅಂತೂ ತೊಟ್ಟವರೇ ಅಲ್ಲ, ಸೀದಾ-ಸಾದಾ ಜುಬ್ಬಾ ಮತ್ತು ಧೋತಿ ಉಡೋದು ಅಪ್ಪನಿಗೆ ಅಭ್ಯಾಸ. ಆದರೆ ನಮಗಂತೂ ಏನು ಕೊರತೆ ಮಾಡಿರಲಿಲ್ಲ. ಕೇಳಿದ್ದನ್ನೆಲ್ಲವನ್ನು ಕೊಡಿಸುವರು. ಕಾರಣ ನಾನಂತು ಒಳ್ಳೆ ಬಟ್ಟೆ ತೊಡಲಿಲ್ಲ, ನನ್ನ ಮಕ್ಕಳಾದರು ಒಳ್ಳೆ ಬಟ್ಟೆ-ಊಟ ಮಾಡಲಿ ಅನ್ನೋದು ಅವರ ಆಲೋಚನೆ ಆಗಿತ್ತು. ಅಪ್ಪ ಏನು ಜಾಸ್ತಿ ಕಲಿತವರಲ್ಲ ಆದರೆ ಹೊರ ಜಗತ್ತಿನ ವಿಷಯಗಳೆಲ್ಲವನ್ನು ಚೆನ್ನಾಗಿಯೇ ಅರಿತಿದ್ದರು.

ನನ್ನ ಮಕ್ಕಳಾದರು ಚೆನ್ನಾಗಿ ಓದಿ ದೊಡ್ಡವರಾಗಿ ಒಂದೊಳ್ಳೆ ಕೆಲಸದಲ್ಲಿ ಇರಬೇಕು ಅನ್ನೋದು ಅವರ ಅತಿದೊಡ್ಡ ಮಹತ್ವಾಕಾಂಕ್ಷೆ ಆಗಿತ್ತು. ಏನಾದರೂ ಕೊಡಿಸುವ ಮುನ್ನ ಅದರ ಮಹತ್ವ ತಿಳಿಸುತ್ತಿದ್ದರು. ದುಡ್ಡಿನ ಮೌಲ್ಯ ಮಕ್ಕಳಿಗೂ ಕೊಂಚ ತಿಳಿಲಿ ಅಂತ ನಮ್ಮನ್ನ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು., ಮನೆಯೇ ಮೊದಲ ಪಾಠ ಶಾಲೆ ಅಂತಾರಲ್ಲ, ಹಾಗೆ, ಶಾಲೆಲಿ ಗಣಿತ ವಿಷಯದ ಶಿಕ್ಷಕರು ಗಂಟೆಗಟ್ಟಲೆ ಮಾಡಿದ ಪಾಠ ಎಷ್ಟರಮಟ್ಟಿಗೆ ನೆನೆಪು ಇರ್ತೀತ್ತೋ ಗೊತ್ತಿಲ್ಲ, ಆದರೆ ಅಪ್ಪ ಹೇಳಿದ ಲೆಕ್ಕಗಳೆಲ್ಲ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದಂತೆ ಉಳಿಯುತ್ತಿದ್ದವು. ಹಾಗೆ ಪ್ರತಿ ಭಾನುವಾರ ಬಂದರೆ ಸಾಕು ನಮಗೆಲ್ಲ ಮನೇಲಿ ಮೊಟ್ಟೆ ತಂದು ತಾವೇ ಅಡುಗೆ ಮಾಡಿ ಬಡಿಸೋವರು, ಬುದ್ದಿ ಬೆಳೆದರಷ್ಟೇ ಸಾಕಾ ಕೊಂಚ ರಟ್ಟೇನು ಗಟ್ಟಿಯಾಗಲಿ ಅನ್ನೋದು ಅಪ್ಪನ ವಿಚಾರವಾಗಿತ್ತು.

Advertisement

ಆ ವರ್ಷದ ವಾರ್ಷಿಕ ಪರೀಕ್ಷೆಗಳೆಲ್ಲ ಮುಗಿದು ಫಲಿತಾಂಶ ಕೂಡ ಪ್ರಕಟವಾಯಿತು, ಬೇಸಿಗೆ ರಜೆ ಕೂಡ ಇತ್ತು. ಮಕ್ಕಳು ಕೊಂಚ ಊರಿಗೆ ಹೋಗಿ ಬರಲಿ ಅಂತ ಅಪ್ಪ-ಅಮ್ಮ ನಮ್ಮನ್ನೆಲ್ಲ ಊರಿಗೆ ಕಳಿಸಿ ಇಬ್ಬರೇ ಉಳಿದರು.

ಹಾ.. ಅದಾಗಲೇ ಬೇಸಿಗೆ ರಜೆ ಒಂದು ತಿಂಗಳು ಕಳೆದಿರಬೇಕು ಅಷ್ಟೇ ಅಪ್ಪ ಅದ್ಯಾವುದೇ ಕೆಲಸ ಇದೆ ಅಂತ ಅಮ್ಮನನ್ನ ಅಲ್ಲಿಯೇ ಬಿಟ್ಟು ಊರಿಗೆ ಬಂದಿದ್ದರು. ಯಾಕೋ ಏನೋ ಅವರ ಮುಖದಲ್ಲಿ ಕೊಂಚ ಆಯಾಸ ಇದ್ದ ಹಾಗೆ ಅನಿಸಿತ್ತು, ಸಂಜೆ ಆಗುತ್ತಲೇ ಎರಡು ಹೊದಿಕೆಗಳನ್ನ ಹೊತ್ತು ತುಂಬಾನೇ ಆಯಾಸ ಪಡ್ತಾ ಇದ್ದರು, ಮರುದಿನ ನಿತ್ರಾಣ ಸ್ಥಿತಿಯಲ್ಲಿದ್ದ ಅಪ್ಪ ಅದರಲ್ಲೇ ಅಕ್ಕ ಹಾಗೂ ತಮ್ಮನನ್ನ ಕರ್ಕೊಂಡು ಮತ್ತೆ ಊರಿಗೆ ಹೋದರು,

ಅವರು ಊರಿಗೆ ಹೋದ ಮರುದಿನ ತಕ್ಷಣವೇ ಅಮ್ಮ ಹಾಗೂ ತಮ್ಮ ಇಬ್ಬರು ಸೇರಿ ಅಪ್ಪನನ್ನ ಬಲವಂತವಾಗಿ ಆಸ್ಪತ್ರೆಗೆ ಸೇರಿಸಿದರು, ಯಾಕೋ ಏನೋ ಜ್ವರ ಅನ್ನೋದು ಕ್ಷಣ ಕ್ಷಣಕ್ಕೂ ಏರುತ್ತಲೇ ಇತ್ತು ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಇರಲಿಲ್ಲ. ನಾನು ಅಮ್ಮನಿಗೆ ಫೋನ್ ಕರೆ ಮಾಡಿ ಅಪ್ಪನ ಆರೋಗ್ಯ ವಿಚಾರಿಸಿದೆ ಅದ್ಯಾಕೋ ಅಮ್ಮನ ಧ್ವನಿಯಲ್ಲಿ ಸಣ್ಣದೊಂದು ನಡುಕ ಇತ್ತು.

ಆಗಲೇ ಸಂಜೆಯೇ ನಸುಗೆಂಪು ದಿಗಂತವೆನ್ನಲ್ಲ ಆವರಿಸಿ ಸೂರ್ಯದೇವ ತನ್ನ ಕರ್ತವ್ಯ ಮುಗಿಸಿ ಮೋಡದ ಮರೆಯಲಿ ಸರಿದಿದ್ದ. ಹುಣ್ಣಿಮೆಯ ಬೆಳದಿಂಗಳಂತಿದ್ದ ಬಾನು ಅಮಾವಾಸ್ಯೆಯ ಕಗ್ಗತ್ತಲೆಯ ಒಡಲಿಗೆ ತುತ್ತಾಗಿತ್ತು.

ಸರಿ ಮರುದಿನ ಮುಂಜಾನೆ ಅಪ್ಪನನ್ನ ನೋಡಲು ಊರಿಗೆ ಹೋದರಾಯಿತು ಅಂತ ಮಲಗಿದೆ ಅಷ್ಟೇ, ನಡುರಾತ್ರಿ ಯಾರೋ ಜೋರಾಗಿ ಅಳುತ್ತಿರುವ ಹಾಗೆ ಕಿರೀಚಿದ ಹಾಗೆ ಭಾಸವಾಯಿತು. ಎದ್ದು ನೋಡಿದಾಗ ಮನೆಯ ಮುಂದೆ ಆಗಲೇ ಜನ ಸೇರಿತ್ತು, ಮನೆಯಲ್ಲಿ ಎಲ್ಲ ಸದಸ್ಯರು ಸುತ್ತುವರೆದಿದ್ದರು, ಜನಸಂದಣಿಯ ಮಧ್ಯೆ ನೂಕಿ ಹೋಗಿ ನೋಡಿದಾಗ ಅಮ್ಮ ನಿತ್ರಾಣಳಾಗಿ ತಲೆ ಮೇಲೆ ಆಕಾಶವೇ ಕಳಚಿ ಬಿದ್ದ ಹಾಗೆ ಅರೆಪ್ರಜ್ಞೆಯಲ್ಲಿ ಕುಳಿತಿದ್ದಳು. ಕಾರಣ ಅಪ್ಪ ಆಗಲೇ ಗಾಢ ನಿದ್ರೆಗೆ ಜಾರಿದ್ದ. ಬಾರದ ಊರಿಗೆ ಪಯಣ ಬೆಳೆಸಿದ್ದ. ನನಗಾಗ 12 ವರ್ಷ, ತಮ್ಮನಿಗೆ 10 ವರ್ಷ ವಯಸ್ಸಷ್ಟೇ.

ಕೈ ಬೆರಳು ಹಿಡಿದು ನಡೆಸಿದ, ಮುದ್ದು ಮಾಡಿ ಕೇಳಿದ್ದೆಲ್ಲವನ್ನು ಕೊಡಿಸಿದ, ತಪ್ಪು ಮಾಡಿದಾಗ ಗದರಿಸಿ ಹೊಡೆದು ಪುನಃ ರಮಿಸಿದ ಅಪ್ಪ ಇಲ್ಲ ಎಂಬುದನ್ನೇ ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊಂಚ ಆರೋಗ್ಯದಲ್ಲಿ ಏರುಪೇರಾದರೆ ಸಾಕು ನಮ್ಮನ್ನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಪ್ಪ, ತನ್ನ ಆರೋಗ್ಯದ ಕಡೆ ಗಮನ ಹರಿಸಲೇ ಇಲ್ಲ, ಪ್ರತಿ ಕ್ಷಣವು ಮಕ್ಕಳ ಬಗ್ಗೆನೆ ಯೋಚಿಸುತ್ತಿದ್ದವನು ತನ್ನನ್ನು ತಾನು ನೋಡಿಕೊಳ್ಳಲು ಇಲ್ಲ. ಹೇ ಅಪ್ಪ ನಿನಗಾರು ಸರಿಸಾಟಿ ಹೇಳು!

ನೀನು ಇಲ್ಲ ಎನ್ನುವುದು ನನ್ನನ್ನು ಕೆಲ ಕಾಲ ಚಿಂತಾಕ್ರಾಂತನನ್ನಾಗಿ ಮಾಡಿಬಿಡುತ್ತದೆ. ನಿನ್ನನ್ನು ನೋಡಬೇಕು ಅಂತ ಅನ್ನಿಸಿದಾಗಲೇಲ್ಲ ಆಗ ನಾನು ಎನು ಮಾಡ್ತೀನಿ ಗೊತ್ತಾ? ಆಕಾಶದಲ್ಲಿ ಫಳ ಫಳನೇ ಹೊಳೆಯುವ ನಕ್ಷತ್ರಗಳನ್ನು ನೋಡುತ್ತ ನಿಂತು ಬಿಡುತ್ತೇನೆ. ಕಾರಣ ನೀನು ನನ್ನ ನೋಡುತ್ತಿರುವೆ ನನ್ನೊಂದಿಗೆ ಮಾತನಾಡುವೆ ಎಂಬ ಆಶಾಭಾವನೆಯಿಂದ ಇನ್ನೇನು ಹೆಚ್ಚು ಮಾಡಲು ಸಾಧ್ಯ ಹೇಳು ನಿನ್ನ ಈ ಹುಚ್ಚು ಮಗನಿಂದ!

ಆದರೂ ನನಗೊಂದು ಪಾಪಪ್ರಜ್ಞೆ ದಿನನಿತ್ಯವೂ ಕಾಡುತ್ತಿರುತ್ತದೆ. ನಾನು ಅನಾರೋಗ್ಯದಿಂದ ಬಳಲುತ್ತಿರುವಾಗ ನೀನು ನನ್ನ ಆರೈಕೆ ಮಾಡಿದೆ. ಆದರೆ ಅಂದು ನಿನ್ನೊಂದಿಗೆ ಫೋನ್ ನಲ್ಲಿ ಮಾತನಾಡಲೇ ಇಲ್ಲ. ನೀನು ಕೊನೆಯುಸಿರೆಳೆಯುವಾಗ ನಾನು ನಿನ್ನ ಪಕ್ಕದಲ್ಲಿರಲು ಸಾಧ್ಯವಾಗಲಿಲ್ಲ ನೋಡು ಅದು ನನ್ನನ್ನ ಪ್ರತಿ ಕ್ಷಣವಂತು ಕಾಡುತ್ತಲೇ ಇರುತ್ತದೆ. ನಿನ್ನ ಒಳಮನಸ್ಸಿನ ನೋವನ್ನು ಅರಿಯದೆ ಹೋದೆನೆಲ್ಲ ಅನ್ನುವ ನೋವು ನನ್ನನ್ನು ಮಂಕಾಗಿಸಿ ಬಿಡುತ್ತೆ.

ಏನು ಮಾಡಲಿ ನೀನೇ ಹೇಳು, ಪ್ರತ್ಯಕ್ಷವಾಗಿ ನೀನು ಇಲ್ಲದಿರಬಹುದು ಆದರೆ ಪರೋಕ್ಷವಾಗಿ ನಿನ್ನ ಪ್ರೀತಿ, ಆಶೀರ್ವಾದ, ಸ್ಫೂರ್ತಿದಾಯಕ ಮಾತು, ಮಾರ್ಗದರ್ಶನ, ಬದುಕಿಗೆ ನೀನು ಹಾಕಿ ಕೊಟ್ಟ ಬದುಕಿನ ತಳಹದಿ, ನಮ್ಮನ್ನು ಇಂದು ದೊಡ್ಡವರನ್ನಾಗಿಸಿದೆ. ಆದರೆ ಏನು ಮಾಡೋದು ಅದನ್ನು ಅನುಭವಿಸಲು, ನೋಡಲು ನೀನು ನಮ್ಮೊಂದಿಗಿಲ್ಲ ಎಂಬುದೊಂದೆ ಕೊರಗು.

ನಿನ್ನೊಂದಿಗೆ ಕಳೆದ ಮರೆಯಲಾಗದ ಅಳಿದುಳಿದ ನೆನಪುಗಳೊಂದಿಗೆ ಕಾಲವನ್ನು ನೂಕುತ್ತಿರುವೆ ಅಷ್ಟೇ.

YOU ARE MY HERO

ಪ್ರಶಾಂತ್ ಶಂಕ್ರಪ್ಪ ಮೇಟಿ.

ಜಗಾಪೂರ, ನರಗುಂದ ತಾಲ್ಲೂಕು

Advertisement

Udayavani is now on Telegram. Click here to join our channel and stay updated with the latest news.

Next