ಆಗಷ್ಟೇ ಹತ್ತು ನಿಮಿಷಗಳ ಕೆಳಗೆ ಅಪ್ಪನಿಗೆ ಕರೆ ಮಾಡಿದ್ದೆ. ಅದೇನೊ ತೀರಾ ಮುಖ್ಯವಾದ ವಿಷಯವನ್ನು ಹಂಚಿಕೊಳ್ಳಲು! ಕರೆ ಮಾಡಿದಷ್ಟೇ ತ್ವರಿತವಾಗಿ ಮುಕ್ತವಾಗಿ ಹೇಳಬೇಕಾದ್ದನ್ನು ಹೇಳಿದೆನಾ? ಊಹೂಂ ಹೇಳಲಿಲ್ಲ; ಅರ್ಥಾತ್ ಹೇಳುವ ಧೈರ್ಯವಿರಲಿಲ್ಲ ಅಥವಾ ಸಂದರ್ಭ ಒದಗಿ ಬರಲಿಲ್ಲ ಎನ್ನಲೇ? ಅದೇಕೊ ಗೊತ್ತಿಲ್ಲ, ಏನನ್ನೋ ಹೇಳಬೇಕೆಂದುಕೊಂಡಾಗ ಹೇಳಿಕೊಳ್ಳಲಾಗದಿದ್ದರೂ ಕೊಂಚವೂ ಅತೃಪ್ತಿ ಎನಿಸುವುದಿಲ್ಲ.
ಆಗೆಲ್ಲ ಅಪ್ಪ ಫೋನ್‌ನಲ್ಲೇ ನನ್ನ ದನಿಯ ಏರಿಳಿತ ಅರಿತು- “ಏನೂ ಆಗಲ್ಲ ಮಗಳೇ.. ಯು ಆರ್ ಎ ಸ್ಟ್ರಾಂಗ್ ಗರ್ಲ್. ಬದುಕು ಎಂದಮೇಲೆ ಈಜಲೂಬೇಕು ಹಾರಲೂಬೇಕು.. ದಿಸ್ ಟೂ ಶಾಲ್ ಪಾಸ್, ಕಮ್ ಆನ್… ಟೇಕ್ ಇಟ್ ನಾರ್ಮಲ್… ಎನ್ನುತ್ತಿದ್ದರೆ ಬಿಟ್ಟ ಕಣ್ಣು ಬಿಟ್ಟಂತೆ ಅಪ್ಪನಮಾತನ್ನು ಆಲಿಸುತ್ತಾ ಕಳೆದು ಹೋಗುವುದು ನಾನೊಬ್ಬಳೇನಾ ಎನಿಸುತ್ತದೆ.
ಏನೇ ಆಗಲಿ, ಒಮ್ಮೆ ಅಪ್ಪನೆದುರು ಮಂಡಿಯೂರಿ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ನೆರಿಗೆ ಬಿದ್ದ ಅವನ ಎರಡೂ ಮುಂಗೈ ಅಮುಕಿ “ಅಪ್ಪ , ನಾ ನಿನಗೆ ಎಂದಾದರೂ ಭಾರ ಎನಿಸಿದ್ದೆನಾ? ಇಲ್ಲಾ ನನ್ನಲ್ಲಿ ಅವುಡುಗಚ್ಚಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಶಕ್ತಿ ಇದೆ ಎಂದು ನಿನಗೆ ಮೊದಲೇ ಅರಿವಿತ್ತಾ? ಅಥವಾ ಹೆತ್ತ ಮಗಳು ಎಂದಿಗೂ ಕುಲಕ್ಕೆ ಹೊರಗಾಗಿಯೇ ಉಳಿಯಬೇಕು ಎನ್ನುವ ತಲೆ ತಲಾಂತರದಿಂದ ಬಂದಿರುವ ಅಘೋಷಿತ ನಿಯಮವನ್ನು ಪಾಲಿಸುವ ಮೂಲಕ ಉತ್ತಮನೆನಿಸಿಕೊಳ್ಳುವ ಅನಿವಾರ್ಯವಿತ್ತೇನು?’ ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರಕಂಡುಕೊಳ್ಳಲು ಜೀವ ಹಾತೊರೆಯುತ್ತದೆ.
ಆ ಕ್ಷಣದಲ್ಲಿ ಏನನ್ನೂ ಹೇಳಿಕೊಳ್ಳಲಾಗದಿದ್ದರೂ ಕನಿಷ್ಠ ಅಪ್ಪನ ತೊಡೆ ಮೇಲೆ ತಲೆಯಿಟ್ಟು ಅವನ ಅರಿವಿಗೆ ಬಾರದಂತೆ ಮುಸುಕಿನೊಳು ಬಿಕ್ಕಿ ಸುಮ್ಮನಾಗಬೇಕು ಎಂದು ಅಂತರಂಗ ಹಪಹಪಿಸುತ್ತದೆ. ಆದರೆ ಅಪ್ಪ “ತನ್ನ ಮಗಳು ಸೇರಿದ ಮನೆಯಲ್ಲಿ ನೂರ್ಕಾಲ ಸುಖವಾಗಿರಲಿ; ಅವಳನ್ನು ಹೊತ್ತು ಹೆತ್ತು ಸಾಕಿ ಸಲುಹಿದ ಮನೆ ತಣ್ಣಗಿರಲಿ’ ಎಂದು ಹಾರೈಸುತ್ತಾನೆ. ಹೀಗಿರುವಾಗ ಒಡಲು ಸುಡುವ ಕಹಿ ಸತ್ಯವನ್ನು ಹೇಳಿ ನೋವ ನೀಡುವ ಬದಲು ಮಂದಹಾಸ ಯುಕ್ತ ಮೌನದ ಆಭರಣ ಧರಿಸಿ ನೆಮ್ಮದಿ ನೀಡುವುದೇ ಸೂಕ್ತ ಅಲ್ಲವೇ? ಹೆಚ್ಚೆಂದರೆ ಅಪ್ಪ ಯಾವಾಗಲೂ ತಾಕೀತು ಮಾಡುವಂತೆ ಸುಮ್ಮನೆ ತಲೆಯಾಡಿಸುವ ಬದಲು ಹೂಂಗುಟ್ಟುವುದು ಉತ್ತಮ ಅಲ್ಲವೇ?
ಹೌದು, ಅಪ್ಪ ಕೂಡ ಅದೆಷ್ಟೋ ಬಾರಿ ಮರೆಯಲ್ಲಿ ನಿಂತು ಹನಿಗಣ್ಣಾಗಿದ್ದಾನೆ. ಆದಾಗ್ಯೂ ನನ್ನೆದುರು ಅದೇ ಸೂಪರ್ ಮ್ಯಾನ್ ಪದವಿಯನ್ನು ಕಾಯ್ದುಕೊಂಡಿದ್ದಾನೆ. ನಾನು ಎಷ್ಟಾದರೂ ಅವನ ರಕ್ತ ಹಂಚಿಕೊಂಡು ಹುಟ್ಟಿದ ಮಗಳು. ನನಗೂ ಅವನ ಸ್ವಭಾವ, ಗುಣ ಕಿಂಚಿತ್ತಾದರೂ ಬರಬೇಕಲ್ಲವೇ? ಮಗಳೆದುರು ಮನಬಿಚ್ಚಿ ಮಾತನಾಡಲಾಗದ ಅವನಿಗಿರುವ ಬಿಗುಮಾನ ನನ್ನಲ್ಲೂ ಕೊಂಚ ಇದ್ದರೇನೇ ಚೆಂದ ಅಲ್ಲವೇ?!
-ಮೇಘನಾ ಕಾನೇಟ್ಕರ್