Advertisement

ಮಗನ ಕೊಲೆಗೆ ಯತ್ನಿಸಿ ಆತ್ಮಹತ್ಯೆಗೈದ ತಂದೆ 

11:35 AM Sep 13, 2018 | Team Udayavani |

ಆಲಂಕಾರು: ಮಗನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ತಂದೆ ಬಳಿಕ ಚಾಕುವಿನಿಂದ ತನ್ನ ಮರ್ಮಾಂಗ ಮತ್ತು ಕುತ್ತಿಗೆಯನ್ನು ಕೊಯ್ದು ಆತ್ಮಹತ್ಯೆ ಮಾಡಿದ ಘಟನೆ ಆಲಂಕಾರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಆಲಂಕಾರು ಗ್ರಾಮದ ಪಟ್ಟೆಮಜಲು ಶೀನಪ್ಪ ಪೂಜಾರಿ ಅವರ ಪುತ್ರ ರಾಜೀವ ಪೂಜಾರಿ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಆತನ ಪುತ್ರ ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿ ರತನ್‌ (20) ಗಾಯಾಳು. ಕುತ್ತಿಗೆಗೆ ಗಂಭೀರ ಗಾಯಗೊಂಡಿರುವ ರತನ್‌ನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಅನ್ಯೋನ್ಯ ಕುಟುಂಬ
ಪತ್ನಿ, ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದ ರಾಜೀವ ಕುಟುಂಬದೊಂದಿಗೂ ಇತರರೊಂದಿಗೂ ಅನ್ಯೋನ್ಯವಾಗಿದ್ದರು. ಪಕ್ಕದಲ್ಲೇ ಹಿರಿಯ ಸಹೋದರ ಮತ್ತು ಹೆತ್ತವರು ಬೇರೆ ಮನೆಯಲ್ಲಿ ವಾಸವಾಗಿದ್ದರು. 2016ರಲ್ಲಿ ರಾಜೀವ ಅವರ ಕಿರಿಯ ಪುತ್ರ ಕಿರಣ್‌ ಮಾನಸಿಕ ಸಮಸ್ಯೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆಯೂ ಖನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ 2017ರಲ್ಲಿ ರಾಜೀವ ಪೂಜಾರಿ 10 ದಿನ ಮನೆಯಿಂದ ನಾಪತ್ತೆಯಾಗಿದ್ದರು. ಮರಳಿದ ಬಳಿಕ ಯಾರೊಂದಿಗೂ ಹೆಚ್ಚು ಬೆರೆಯದೆ ಮೌನವಾಗಿರುತ್ತಿದ್ದರು. 2 ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದರು. 

ಬಳಿಕ ಅವರನ್ನು ತಂದೆ ಶೀನಪ್ಪ ಪೂಜಾರಿ ಅವರು ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಮುಂದುವರಿಸುವುದಕ್ಕಾಗಿ ತನ್ನ ಮನೆಯಲ್ಲೇ ನಿಲ್ಲಿಸಿಕೊಂಡಿದ್ದರು. ಪ್ರತಿದಿನ ಬೆಳಗ್ಗೆ ತನ್ನ ಮನೆಗೆ ತೆರಳಿ ದನಗಳಿಗೆ ಹುಲ್ಲು ಮತ್ತು ಸೊಪ್ಪನ್ನು ತಂದು ಹಾಕಿದ ಬಳಿಕ ರಾಜೀವ ಮತ್ತೆ ತಂದೆಯ ಮನೆಯಲ್ಲೇ ವಾಸಿಸುತ್ತಿದ್ದರು.

ಏಕಾಏಕಿ ದಾಳಿ
ಬುಧವಾರ ಜಯಂತಿ ಪತಿಯೊಂದಿಗೆ ಹುಲ್ಲು ತರಲು ಕತ್ತಿ ಮಸೆಯುತ್ತಿದ್ದರು. ಪುತ್ರ ಕಾಲೇಜಿಗೆ ಹೊರಡುತ್ತಿದ್ದ. ಈ ವೇಳೆ ಏಕಾಏಕಿ ಮಗನ ಕುತ್ತಿಗೆಗೆ ಕತ್ತಿಯಿಂದ ಕಡಿದರು. ತತ್‌ಕ್ಷಣ ಜಾಗೃತಳಾದ ತಾಯಿ ಮಗನನ್ನು ಎಳೆದುಕೊಂಡು ಅತ್ತೆ ಮಾವನವರ ಮನೆಗೆ ಓಡಿ ಬಂದಿದ್ದರು.

ತಾಯಿಯೆದುರೇ ಸಾವು
ಪ್ರಥಮ ಚಿಕಿತ್ಸೆ ನೀಡಿ ಗಾಯಾಳುವನ್ನು ಆಲಂಕಾರಿಗೆ ರಿಕ್ಷಾದಲ್ಲಿ ತಂದು ಬಳಿಕ 108 ಆ್ಯಂಬುಲೆನ್ಸ್‌ನಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮಗ ಎಲ್ಲಿದ್ದಾನೆ ಎಂದು ಹುಡುಕಿಕೊಂಡು ರಾಜೀವನ ತಾಯಿ ದೇಜಮ್ಮ ಮಗನ ಮನೆಗೆ ಬಂದು ಹುಡುಕಾಡಿದಾಗ ಹಟ್ಟಿಯ ಬಳಿ ತನ್ನ ಮರ್ಮಾಂಗ ಮತ್ತು ಕತ್ತನ್ನು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಹೊರಳಾಡುತ್ತಿರುವುದು ಕಂಡುಬಂತು. ‘ತತ್‌ಕ್ಷಣ ಮಗನಿಗೆ ನೀರು ಕುಡಿಸಿದೆ. ನನ್ನ ಕಣ್ಣೆದುರಲ್ಲೇ ಮಗನ ಪ್ರಾಣಪಕ್ಷಿ ಹಾರಿ ಹೋಯಿತು’ ಎಂದು ತಾಯಿ ದೇಜಮ್ಮ ಪೊಲೀಸರಿಗೆ ಮಾಹಿತಿ ನೀಡಿದರು.

Advertisement

ಮೃತನ ಪತ್ನಿ ಜಯಂತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಕಡಬ ಠಾಣಾಧಿಕಾರಿ ಪ್ರಕಾಶ್‌ ದೇವಾಡಿಗ, ಉಪಠಾಣಾಧಿಕಾರಿ ಚೆಲುವಯ್ಯ ಚಂದ್ರಶೇಖರ, ಪುಟ್ಟಸೋಮಪ್ಪ, ಮೋನಪ್ಪ, ಶಿವರಾಜ್‌ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next