ಕುದೂರು: ಪ್ರಕೃತಿ ಉಳಿಸಿ ಬೆಳೆಸಿ ಎಂಬುದು ಕಾರ್ಯಕ್ಕಿಂತ ಘೋಷಣೆಯೇ ಹೆಚ್ಚು ಶಬ್ದ ಮಾಡುತ್ತಿದೆ. ಆದರೆ ಅದರಂಗಿ ಗ್ರಾಮದ ತಂದೆ-ಮಗ, ಸದ್ದಿಲ್ಲದೇ ಅರಣ್ಯೀಕರಣದಲ್ಲಿ ತೊಡಗಿದ್ದಾರೆ. ಶಿವಗಂಗೆ ಬೆಟ್ಟದಿಂದ ಅದರಂಗಿ ಗ್ರಾಮದವರೆ ಗಿರುವ ಕುರುಚಲು ಕಾಡಿನಲ್ಲಿ ವಿವಿಧ ಜಾತಿಯ ಹಣ್ಣುಗಳನ್ನು ಬಿಡುವ ಗಿಡಗಳ ಬೀಜಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅದರಂಗಿ ಗ್ರಾಮದ ಬಸವರಾಜಯ್ಯ 75 ವರ್ಷದ ವೃದ್ಧ ಹಾಗೂ ಪುತ್ರ ರುದ್ರೇಶ್ ಎಂಬುವರು ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಈ ಇಬ್ಬರೂ ಕಾಡಿಗೆ ಹೋಗಿ ಮಾವು, ಪುತ್ರಂಜೆ, ಅಂಟುವಾಳದಂತಹ ಬೀಜಗಳನ್ನು ಬಿತ್ತಿ ಬರುತ್ತಿದ್ದಾರೆ.
ಬೇಸಿಗೆಯಲ್ಲಿ ಜನರ ವಿಕೃತ ಆನಂದಕ್ಕೆ ಕಾಡಿಗೆ ಬೆಂಕಿಯಿಟ್ಟು ನೂರಾರು ಎಕ್ಕರೆ ಕಾಡನ್ನು ಸುಟ್ಟು ಹಾಕಿದರು. ಇದರಿಂದ ವಿರಳವಾಗಿರುವ ಕಾಡು ಮೆತ್ತೆ ಬೆಳೆಯುವಂತಾಗಬೇಕು. ಅದಕ್ಕಾಗಿ ಗಿಡ ನೆಡೋಣ, ಕಾಡು ಬೆಳೆಸೋಣ ಎಂದು ಘೋಷಣೆ ಕೂಗುತ್ತ ಹೋದರೆ ಕೆಲಸವಾಗುವುದಿಲ್ಲ ಎಂದು ಸ್ವಯಂ ತಂದೆ-ಮಗ, ಬೀಜ ಬಿತ್ತನೆ ಕಾರ್ಯಕ್ಕೆ ಮುಂದಾದರು.
ಲಾಲ್‌ಬಾಗ್‌ನಿಂದ ಮಾವಿನ ಬೀಜ: ದೊಡ್ಡದಾಗಿ ಬೆಳೆಯುವ ಮಾವಿನ ಮರ ಬೆಳೆಸಲು ಅದರಂಗಿ ಗ್ರಾಮದ ಮಲ್ಲಿಕಾರ್ಜುನ ಬೆಟ್ಟಕ್ಕೆ ಗಿಡ ಹೊತ್ತುಕೊಂಡು ಹೋಗಿ ಗಿಡ ಬೆಳೆಸುವುದು ಕಷ್ಟ. ಅದಕ್ಕಾಗಿ ಪ್ರಕೃತಿ ಸಹಜ ಬೀಜ ಬಿತ್ತನೆ ಮಾಡಿದರೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ರುದ್ರೇಶ್, ಬೆಂಗಳೂರಿನ ಲಾಲ್‌ಭಾಗ್‌ಗೆ ಹೋಗಿ ಅಲ್ಲಿನ ಪರಿಣಿತರಿಂದ ಮಾವಿನ ಬೀಜ ಪಡೆದು ಬೆಟ್ಟದ ಕಾಡಿನಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಪುತ್ರಂಜೆ ಬೀಜಗಳಿಂದ ಪಕ್ಷಿ ಸಂತತಿ ವೃದ್ಧಿ: ಪುತ್ರಂಜೆ ಎನ್ನುವುದು ಹಣ್ಣಿನ ಜಾತಿಯ ಗಿಡ. ಈ ಗಿಡ ಸಣ್ಣ ಹಣ್ಣುಗಳನ್ನು ಕೊಡುತ್ತದೆ. ಇದರಿಂದಾಗಿ ಪಕ್ಷಿ ಸಂಕುಲ ಈ ಹಣ್ಣುಗಳನ್ನು ತಿನ್ನಲು ತಂಡೋಪತಂಡವಾಗಿ ಬರುತ್ತವೆ. ಚಿಕ್ಕ ಗಾತ್ರದ ಪಕ್ಷಿಗಳ ಸಂತತಿಯೇ ಹೆಚ್ಚಾಗಿರುತ್ತದೆ. ಪಕ್ಷಿಗಳು ಹೆಚ್ಚು ಪಕ್ಷಿಗಳು ಇರುವ ಕಡೆಗೆ ಕಾಡು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ರುದ್ರೇಶ್ ವಿವರಿಸಿದರು.
ಒತ್ತುವರಿಯಾಗುತ್ತಿರುವ ಕಾಡು : ಶಿವಗಂಗೆ ಬೆಟ್ಟ, ಕವುಚುಕಲ್ ಮುನೇಶ್ವರ ಸ್ವಾಮಿ ಬೆಟ್ಟವನ್ನು ವಿಸ್ತರಿಸಿದಂತೆ ಸಾವಿರಾರು ಹೆಕ್ಟೇರ್ ಕಾಡು ವಿಸ್ತಾರಗೊಂಡು ಅದರಂಗಿಯಲ್ಲಿ ಮುಕ್ತಾಯವಾಗುತ್ತದೆ. ಈ ಅರಣ್ಯ ಪ್ರದೇಶ ನಮ್ಮ ಸ್ವತ್ತು ಎಂದು ನೂರಾರು ಎಕ್ಕರೆ ಪ್ರದೇಶವನ್ನು ಪ್ರತಿ ವರ್ಷ ಒತ್ತುವರಿಯಾಗುತ್ತಲೇ ಇದೆ. ಅದನ್ನು ಕಂಡು ಕಾಣದಂತೆ ಅರಣ್ಯ ಇಲಾಖೆಯವರು ವರ್ತಿಸುತ್ತಿರುವುದು ಪ್ರಕೃತಿ ಪ್ರೇಮಿಗಳಿಗೆ ಬೇಸರದ ವಿಷಯವಾಗಿದೆ
ಮನುಷ್ಯ ಸ್ವಾರ್ಥಿಯಾಗಬೇಕು. ಆದರೆ ನಮಗೆ ಆಶ್ರಯ ನೀಡಿದ ಈ ಭೂತಾಯಿಯ ಒಡಲನ್ನೇ ಬರಿದು ಮಾಡುವಷ್ಟು ದುಷ್ಟನಾಗಬಾರದು. ಮುಂದಿನ ತಲೆಮಾರಿಗೆ ನಾವು ಉತ್ತಮ ವಾತಾವರಣ ಒದಗಿಸದಿದ್ದರೆ ಅವರು ಬದುಕಿರುವಷ್ಟು ದಿನ ನಮ್ಮನ್ನು ಶಪಿಸುತ್ತಿರುತ್ತಾರೆ.
–ಬಸವರಾಜಯ್ಯ, ರೈತ ಅದರಂಗಿ
-ಕುದೂರು ಮಂಜುನಾಥ್