Advertisement

ಅಪ್ಪ-ಮಗನ ಅಪಹರಣ ಪ್ರಕರಣ ಸುಖಾಂತ್ಯ

12:59 PM Feb 14, 2023 | Team Udayavani |

ಮೈಸೂರು: ನಂಜನಗೂಡಿನ ಅಪ್ಪ-ಮಗನ ಅಪಹರಣ ಪ್ರಕರಣವನ್ನು ಬೇಧಿಸಲಾಗಿದ್ದು, ಈ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

ಆರೋಪಿಗಳಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ಬೈಕ್‌ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.6ರಂದು ಮಧ್ಯಾಹ್ನ 12.30ಕ್ಕೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಹರ್ಷ ಇಂಪೆಕ್ಟ್ ಫ್ಯಾಕ್ಟರಿಯ ಮಾಲೀಕ ದೀಪಕ್‌, ಅವರ ಮಗ ಹರ್ಷನನ್ನು ಅಪಹರಣ ಮಾಡಲಾಗಿತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮಾರಕಾಸ್ತ್ರಗಳಿಂದ ಹೆದರಿಸಿ, ಇವರನ್ನು ಗೋದಾಮಿ ನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದರು. ದೀಪಕ್‌ ಅವರ ಕಾರ್‌ನಲ್ಲೇ ತಂದೆ-ಮಗನನ್ನು ಕಿಡ್ನಾಪ್‌ ಮಾಡಿದ್ದ ಆರೋಪಿಗಳು ಜೀವ ಬೆದರಿಕೆ ಹಾಕಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ವಿವರಿಸಿದರು.

ಬಳಿಕ ಮನೆಯವರು ಸತತ ಮಾತುಕತೆ ನಡೆಸಿ 35 ಲಕ್ಷ ರೂ. ನೀಡಿದ್ದರಿಂದ ಆರೋಪಿಗಳು ಅಪ್ಪ-ಮಗ ನನ್ನು ಬಿಡುಗಡೆ ಮಾಡಿದ್ದರು. ಇಡೀ ಫೆ.6ರಂದು ಮಧ್ಯಾಹ್ನ 12ರ ಹೊತ್ತಿನಲ್ಲಿ ಅಪಹರಣ ಮಾಡಿದ್ದ ಆರೋಪಿಗಳು ಸಂಜೆ 7 ಗಂಟೆಯ ಹೊತ್ತಿಗೆ ಹಣ ಪಡೆದು ಇಬ್ಬರನ್ನು ಬಿಟ್ಟಿದ್ದರು. ಇಷ್ಟೂ ಸಮಯ ಮೈಸೂರು ತಾಲೂಕಿನ ವರುಣಾ, ನಂಜನಗೂಡು ವ್ಯಾಪ್ತಿಯಲ್ಲಿಯೇ ಅಡ್ಡಾಡಿದ್ದಾರೆ ಎಂದು ಹೇಳಿದರು.

ಬಂಧಿತ ಆರೋಪಿಗಳು ವೃತ್ತಿ ಕ್ರಿಮಿನಲ್‌ಗಳು ಎಂಬುದನ್ನು ಅರಿತು, ಒತ್ತೆಯಲ್ಲಿದ್ದವರ ಜೀವಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಂದೆ- ಮಗನ ಬಿಡುಗಡೆಯಾಗುವವರೆಗೂ ಪೊಲೀಸರು ಸುಮ್ಮನಿದ್ದು ಕೇಸ್‌ ಮೇಲೆ ನಿಗಾ ವಹಿಸಿದರು. ಜಿಲ್ಲೆಯ ಎಲ್ಲ ಪೊಲೀಸರು ಬಳಸಿಕೊಂಡು ಪ್ರಮುಖ ರಸ್ತೆಯಲ್ಲಿ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

Advertisement

ಇಬ್ಬರ ಬಿಡುಗಡೆಯ ಬಳಿಕ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಯಿತು. ಅದಕ್ಕಾಗಿ 3 ತಂಡ ರಚಿಸಲಾಯಿತು. ಖಚಿತ ಮಾಹಿತಿ ಮೇರೆಗೆ ಇವರನ್ನು ಬಂಧಿಸಲು ಯಶಸ್ವಿ ಆಗಿದ್ದೇವೆ ಎಂದರು.

ಮಂಡ್ಯ ಜಿಲ್ಲೆಯ ಚಂದಗಾಲದ ಕಾರದಪುಡಿ ಬಸವ, ಕುಣಿಗಲ್‌ನ ಅಭಿ, ಪ್ರಮೋದ್‌, ಶಶಿಧರ್‌, ರಾಹುಲ್‌, ಚಂದು, ಶ್ರೀಧರ್‌, ಮಧು, ಸಂಜಯ್‌, ಅಜಯ್‌ ಬಂಧಿತರು. ಇವರಲ್ಲಿ ತುಮಕೂರಿನವರು ಇಬ್ಬರು, ಮಂಡ್ಯದವರು 2, ಬನ್ನೂರಿನವರು 4, ಕೆ.ಆರ್‌.ನಗರದವರು ಇಬ್ಬರಿದ್ದಾರೆ. 11ನೇ ಆರೋಪಿ ರವಿ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಬಂಧಿತರಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ಬೈಕ್‌ ಹಾಗೂ 5 ಡ್ರಾಗರ್‌, 3 ಲಾಂಗ್‌, 11 ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ವಿಚಾರಣೆ: ಬಂಧಿತರಲ್ಲಿ ಮೊದಲನೇ ಆರೋಪಿ ವಿರುದ್ಧ ಈ ಹಿಂದೆ ಮಂಡ್ಯ ಜಿಲ್ಲೆಯ ಪೂರ್ವ, ಪಶ್ಚಿಮ, ಶಿವಳ್ಳಿ, ಕೆ.ಆರ್‌.ಪೇಟೆ, ಮೈಸೂರಿನ ಮೇಟಗಳ್ಳಿ, ಮಂಡಿ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಆರ್ಮ್ಸ್ ಆಕ್ಟ್, ಎನ್‌ ಡಿಪಿಎಸ್‌ ಸೇರಿದಂತೆ 9 ಪ್ರಕರಣ ಗಳು ದಾಖಲಾಗಿವೆ. 21 ವಯಸ್ಸಿನಲ್ಲಿ ಅಪರಾಧ ಕೃತ್ಯ ಎಸಗಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನು ಮೇಲೆ ಹೊರ ಬಂದ ಬಳಿಕ ಕೃತ್ಯ ಎಸಗಿದ್ದಾನೆ ಎಂದು ಹೇಳಿದರು. ‌

2ನೇ ಆರೋಪಿ ವಿರುದ್ಧವೂ ಹಿಂದೆ ಮಂಡ್ಯ ಜಿಲ್ಲೆಯ ಶಿವಳ್ಳಿ ಪೊಲೀಸ್‌ ಠಾಣೆಯಲ್ಲಿ ಆಮ್ಸ್‌ì ಆಕ್ಟ್ ರೀತ್ಯಾ ಒಂದು ಪ್ರಕರಣ ದಾಖಲಾಗಿದೆ. 3ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಶಿವಳ್ಳಿ, ಪಾಂಡವ ಪುರ, ಪಶ್ಚಿಮ ಠಾಣೆ, ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್‌ ಠಾಣೆಗಳಲ್ಲಿ 5 ಕಳ್ಳತನ ಪ್ರಕರಣಗಳಿವೆ. 4ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಗ್ರಾಮಾಂತರ, ಶಿವಳ್ಳಿ, ಪಾಂಡವಪುರ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. 5ನೇ, 6ನೇ ಆರೋಪಿಗಳ ವಿರುದ್ಧ ಬನ್ನೂರು ಠಾಣೆ ಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿ ಗಳು ಒಂದಿಲ್ಲವೊಂದ ಅಪರಾಧ ಕೃತ್ಯ ಎಸಗಿದ್ದಾರೆ. ಇವರ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು.

ಪತ್ತೆ ಕಾರ್ಯದಲ್ಲಿ ನಂಜನಗೂಡಿನ ಡಿವೈ ಎಸ್‌ಪಿ ಗೋವಿಂದರಾಜು, ಇನ್ಸ್‌ಪೆಕ್ಟರ್‌ ಶಿವನಂಜ ಶೆಟ್ಟಿ, ಪಿಎಸ್‌ಐಗಳಾದ ಚೇತನ, ರಮೇಶ್‌ ಕರಕಿಕಟ್ಟಿ, ಕೃಷ್ಣ ಕಾಂತಕೋಳಿ, ಕಮಲಾಕ್ಷಿ, ಸಿ.ಕೆ.ಮಹೇಶ್‌, ಪ್ರೊಬೆ ಷನರಿ ಪಿಎಸ್‌ಐ ಚರಣ್‌ಗೌಡ, ಎಎಸ್‌ಐಗಳಾದ ಶಿವ ಕುಮಾರ್‌, ವಸಂತಕುಮಾರ್‌, ಸಿಬ್ಬಂದಿಯಾದ ಸುರೇಶ್‌, ವಸಂತಕುಮಾರ್‌, ಸುನೀತಾ, ಕೃಷ್ಣ, ಭಾಸ್ಕರ್‌, ಅಬ್ದುಲ್‌ ಲತೀಪ್‌, ನಿಂಗರಾಜು, ಸುರೇಶ್‌, ಸುಶೀಲ್‌ ಕುಮಾರ್‌, ರಾಜು, ಚೇತನ್‌, ವಿಜಯ್‌ಕುಮಾರ್‌, ಮಂಜು, ಚೆಲುವರಾಜು ಇದ್ದರು.

ಈ ತಂಡಕ್ಕೆ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ ಎಂದು ಹೇಳಿದರು.

ಒಂದು ವರ್ಷದ ಹಿಂದೆ ಬೆದರಿಕೆ : ಹಣಕ್ಕಾಗಿ ದೀಪಕ್‌ ಅವರನ್ನು ಒಂದು ವರ್ಷದ ಹಿಂದೆ ಬೆದರಿಸಲಾಗಿತ್ತು. ಅವರು ದೂರವಾಣಿಯ ಕರೆಯ ಸಂಭಾಷಣೆ, ಮೊಬೈಲ್‌ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಟ್ಟಿದ್ದರು. ವಿಚಾರಣೆ ವೇಳೆ ಇದುವೇ ಸುಳಿವು ನೀಡಿತು. ಇವರ ಕಾರ್ಖಾನೆ ಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಆರೋಪಿಗಳಿಗೆ ಮಾಹಿತಿ ನೀಡಿ ಈ ಕೃತ್ಯ ಎಸಗುವಂತೆ ಮಾಡಿದ್ದಾನೆ ಎಂದು ತಿಳಿಸಿದರು.

ಸುಲಿಗೆ ಹಣದಲ್ಲಿ ದೇವರಿಗೂ ಪಾಲು! :

ಮೈಸೂರು: ಅಪ್ಪ-ಮಗ ಅಪಹರಣ ಮಾಡಿ, ಅವರಿಂದ 35 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಗಳು ಹಣದ ಒಂದಿಷ್ಟು ಪಾಲನ್ನುವನ್ನು ದೇವರಿಗೂ ನೀಡಿರುವ ಸ್ವಾರಸ್ಯಕರ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರತಿ ದುಷ್ಕೃತ್ಯ ಎಸಗಿದ ಬಳಿಕ ಕದ್ದ, ಸುಲಿಗೆ ಮಾಡಿದ ಹಣದಲ್ಲಿ ಇಂತಿಷ್ಟು ಹಣವನ್ನು ದೇವರ ಹುಂಡಿ ಹಾಕುತ್ತಿದ್ದ. ಅದೇ ರೀತಿ ಕಿಡ್ನಾಪ್‌ ಕೇಸ್‌ನ ಬಳಿಕ 55 ಸಾವಿರ ರೂ. ಹಣವನ್ನು ಮೂಗುರು ದೇವಸ್ಥಾನದ ದೇವರ ಹುಂಡಿಗೆ ಹಾಕಿ, “ನನ್ನನ್ನು ಕಾಪಾಡು’ ಎಂದು ದೇವರಲ್ಲಿ ಪ್ರಾರ್ಥಿಸಿದ್ದ. ಆದರೆ, ಆ ದೇವರು ಸಹ ಇವನ ನೆರವಿಗೆ ಬರಲಿಲ್ಲ. ಮತ್ತೆ ಜೈಲು ಪಾಲಾಗುವುದನ್ನೂ ತಪ್ಪಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next