Advertisement

ಅಪ್ಪನೇ ನನ್ನ ಗುರು- ಅವರ ಅರ್ಧ ಗುಣ ಬಂದರೂ ಸಾಕು

11:49 AM Dec 19, 2017 | |

ಸುಮಾರು 25 ವರ್ಷಗಳ ಹಿಂದೆ ಅರ್ಜುನ್‌ ಸರ್ಜಾ ಅವರು “ಪ್ರತಾಪ್‌’ ಸಿನಿಮಾದ “ಪ್ರೇಮ ಬರಹ ಕೋಟಿ ತರಹ …’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಮಗಳ ಸರದಿ. ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಈಗ “ಪ್ರೇಮ ಬರಹ ಕೋಟಿ ತರಹ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಪ್ಪ ಹಾಡಿ ಕುಣಿದ ಹಾಡಿನಲ್ಲೇ ಮಗಳೂ ಕಾಣಿಸಿಕೊಂಡಂತಾಗಿದೆ.

Advertisement

ಇದಕ್ಕೆ ಕಾರಣವಾಗಿರೋದು “ಪ್ರೇಮ ಬರಹ’ ಚಿತ್ರ. ಇದು ಐಶ್ವರ್ಯಾ ಸರ್ಜಾ ನಾಯಕಿಯಾಗಿ ಲಾಂಚ್‌ ಆಗುತ್ತಿರುವ ಸಿನಿಮಾ. ಅರ್ಜುನ್‌ ಸರ್ಜಾ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಐಶ್ವರ್ಯಾ ಸರ್ಜಾ ತಮ್ಮ ಮೊದಲ ಸಿನಿಮಾದ ಅನುಭವನ್ನು ಹಂಚಿಕೊಂಡಿದ್ದಾರೆ … 

* ನಿಮ್ಮ ಮೊದಲ ಚಿತ್ರ “ಪ್ರೇಮಬರಹ’ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಸಂದರ್ಭ ಹೇಗನಿಸ್ತಾ ಇದೆ?
ತುಂಬಾ ಖುಷಿಯಾಗುತ್ತಿದೆ. ನಮ್ಮ ತಂದೆಯ ನಿರ್ಮಾಣ, ನಿರ್ದೇಶನದಲ್ಲಿ ನಾನು ಲಾಂಚ್‌ ಆಗುತ್ತಿದ್ದೇನೆ. ಅದು ನನಗೆ ಹೆಮ್ಮೆಯ ವಿಷಯ. “ಪ್ರೇಮ ಬರಹ’ ಎಂಬ ಟೈಟಲ್‌ ಕೇಳಿದಾಗ ಇದು ಬರೀ ಲವ್‌ ಸ್ಟೋರಿನಾ ಎಂಬ ಭಾವನೆ ನಿಮಗೆ ಬರಬಹುದು. ಇದು ಕೇವಲ ಲವ್‌ಸ್ಟೋರಿಯಲ್ಲ. ಈ ಕಥೆಗೊಂದು ಎಕ್ಸಟ್ರಾರ್ಡಿನರಿ ಬ್ಯಾಕ್‌ಗ್ರೌಂಡ್‌ ಇದೆ.  ಈ ಸಿನಿಮಾದ ಎಲ್ಲಾ ಕ್ರೆಡಿಟ್ಸ್‌ ನಮ್ಮ ತಂದೆಗೆ ಸೇರುತ್ತದೆ. ಅವರು ಕೇವಲ ನನ್ನ ತಂದೆಯಲ್ಲ. ನನ್ನ ಗುರು ಕೂಡಾ.

* ಗುರು ಅಂದ್ರಿ. ಅವರಿಂದ ಏನೇನು ಕಲಿತಿರಿ?
ಎಲ್ಲಾನೂ ಅವರಿಂದಲೇ ಕಲಿತಿದ್ದು. ಯಾವತ್ತೂ ಅವರು ಹೀಗೆ ಮಾಡಬೇಕೆಂದು ಹೇಳಿಕೊಟ್ಟಿಲ್ಲ. ನಮ್ಮ ಒಳಗೇನಿರುತ್ತೋ ಅದನ್ನು ಅನುಭವಿಸಿ ನಟಿಸಬೇಕು ಎನ್ನುತ್ತಿದ್ದರು. ಹೇಳಿಕೊಡದೇನೇ ಸಾಕಷ್ಟು ವಿಷಯವನ್ನು ಹೇಳಿಕೊಟ್ಟಿದ್ದಾರೆ. ಈ ಸಿನಿಮಾ ವಿಷಯದಲ್ಲಿ ಮಾತ್ರವಲ್ಲ. ಹುಟ್ಟಿದಾಗಿನಿಂದಲೂ ಸಾಕಷ್ಟು ವಿಷಯಗಳನ್ನು ಅವರಿಂದ ಕಲಿತಿದ್ದೇನೆ. ಅವರ ಗುಣದಲ್ಲಿ ನನಗೆ ಅರ್ಧ ಬಂದ್ರು ಸಾಕು, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು.

* ಸಿನಿಮಾಕ್ಕೆ ಬರೋ ಮುಂಚೆ ತರಬೇತಿ ಪಡೆದಿದ್ದೀರಾ?
ಟ್ರೈನಿಂಗ್‌ ಏನು ಮಾಡಿಲ್ಲ. ಆದರೆ, ನನಗೆ ಕಾಲೇಜು ದಿನಗಳಿಂದಲೇ ನಟನೆ ಮೇಲೆ ಆಸಕ್ತಿ ಇತ್ತು. ಇನ್ನು, ನಾನು ಮುಂಬೈನಲ್ಲಿ ಕಿಶೋರ್‌ ನಮಿತ್‌ ಕಪೂರ್‌ ಆ್ಯಕ್ಟಿಂಗ್‌ ಸ್ಕೂಲ್‌ ವರ್ಕ್‌ಶಾಪ್‌ನಲ್ಲಿ ಪಾಲ್ಗೊಂಡಿದ್ದೆ.

Advertisement

* ಡಬ್ಬಿಂಗ್‌ನಲ್ಲಿ ಸಿನಿಮಾ ನೋಡಿರುತ್ತೀರಿ. ನಿಮ್ಮ ಪ್ಲಸ್‌ -ಮೈನಸ್‌ ಏನು?
ನಟಿಯಾಗಿ ನಮಗೆ ಯಾವತ್ತೂ ನಮ್ಮ ಮೈನಸ್‌ ಕಾಣೋದು. ನಾನು ಸೂಪರ್‌ ಆಗಿ ಮಾಡಿದ್ದೀನಿ ಅಂತ ಅನಿಸೋದಿಲ್ಲ. ನನ್ನ ಮೈನಸ್‌ ಏನೆಂದು ನನಗೆ ಗೊತ್ತು. ಪ್ಲಸ್‌ ಏನೆಂಬುದನ್ನು ನಮ್ಮ ತಂದೆ ಹೇಳಿದ್ದಾರೆ. ಬೇರೆ ಕಡೆ ಅದರ ಮಾತು ಬೇಡ. ಅವೆರಡೂ ನನ್ನಲ್ಲೇ ಇರಲಿ. 

* ಚಿತ್ರದಲ್ಲಿ ನಿಮ್ಮ ಪಾತ್ರ?
ನಾನಿಲ್ಲಿ ಜರ್ನಲಿಸ್ಟ್‌ ಪಾತ್ರ ಮಾಡಿದ್ದೇನೆ. ಪಾತ್ರ ವಿವಿಧ ಶೇಡ್‌ನೊಂದಿಗೆ ಸಾಗುತ್ತದೆ. ಬಜಾರಿ, ಎಮೋಶನ್‌, ಸಾಫ್ಟ್ .. ಹೀಗೆ ಮೊದಲ ಚಿತ್ರದಲ್ಲೇ ಒಳ್ಳೆಯ ಪಾತ್ರ ಸಿಕ್ಕಿದೆ. 

* ಈ ಹಿಂದೆ ನಟನ ಮಗಳಾಗಿ ಸೆಟ್‌ಗೆ ಹೋಗುತ್ತಿದ್ರಿ. ಈಗ ನೀವೇ ನಟಿಯಾಗಿದ್ದೀರಿ. ಈ ಅನುಭವ ಹೇಗಿತ್ತು?
ಈ ಹಿಂದೆ ಮಗಳಾಗಿ ಅಪ್ಪನ ಸಿನಿಮಾ ಸೆಟ್‌ಗೆ ಹೋಗಿ ಆರಾಮವಾಗಿ ಇದ್ದು ಬರುತ್ತಿದ್ದೆವು. ಆದರೆ, ಈಗ ನಾನೇ ನಟಿಯಾಗಿರೋದು ಹೊಸ ಅನುಭವ. ಅದನ್ನು ವಿವರಿಸೋದು ಕಷ್ಟ. ಬ್ಯೂಟಿಫ‌ುಲ್‌ ಎಕ್ಸ್‌ಪಿರಿಯನ್ಸ್‌.

* ಸ್ಟಾರ್‌ ಮಕ್ಕಳಾದರೆ ಸಿನಿಮಾಕ್ಕೆ ಬರೋದು ಸುಲಭ ಎಂಬ ಮಾತಿದೆಯಲ್ಲ?
ಸ್ಟಾರ್‌ ಕಿಡ್‌ ಎಂದಾಕ್ಷಣ ಎಲ್ಲವೂ ಸುಲಭ ಎಂಬ ಭಾವನೆ ಜನರಲ್ಲಿ ಇವತ್ತಿಗೂ ಇದೆ. ಅದೊಂಥರ ಬದಲಾಗದ ಯೋಚನೆ. ಸ್ಟಾರ್‌ ಕಿಡ್‌ ಆದರೆ ಜನ ಬೇಗನೇ ಗುರುತಿಸಬಹುದಷ್ಟೇ ಹೊರತು, ಉಳಿದೆಲ್ಲಾ ಪ್ರಯತ್ನ, ಶ್ರಮ ಬೇಕೇ ಬೇಕು. ಯಾರ ಮನೆಯಲ್ಲೂ ಮರದಲ್ಲಿ ದುಡ್ಡು ಬೆಳೆಯಲ್ಲ. ನಾನು ಈ ಸಿನಿಮಾವನ್ನು ಲೈಟಾಗಿ ತಗೊಂಡಿಲ್ಲ. ನಟಿಯಾಗಿ ಸೀರಿಯಸ್‌ ಆಗಿ ಈ ಸಿನಿಮಾದ ಪಾತ್ರಕ್ಕೆ ನ್ಯಾಯ ಕೊಡಲು ಪ್ರಯತ್ನಿಸಿದ್ದೇನೆ. ಸ್ಟಾರ್‌ ಕಿಡ್‌ ಆದರೆ, ನೀವು ಟ್ಯಾಲೆಂಟೆಡ್‌ ಎಂಬುದನ್ನು ಬೇಗನೇ ಸಾಬೀತು ಮಾಡಬೇಕಾಗುತ್ತದೆ.

* ಸೆಟ್‌ನಲ್ಲಿ ನಿರ್ದೇಶಕರಿಂದ ಬೈಸಿಕೊಂಡಿದ್ದೀರಾ?
ಒಮ್ಮೆ ರೇಗಿದ್ದರು. ಅದು ಸ್ವಿಟ್ಜರ್ಲೆಂಡ್‌ನ‌ಲ್ಲಿ. ಅಂದು ಶೂಟಿಂಗ್‌ ಸ್ಪಾಟ್‌ಗೆ ಫಾರಿನ್‌ ಪ್ರಸ್‌ ಬಂದಿತ್ತು. ಆದರೆ, ನಾನು ಸೆಟ್‌ಗೆ ಸ್ವಲ್ಪ ತಡವಾಗಿ ಹೋಗಿದ್ದೆ. ಆಗ ಸಿಟ್ಟಾಗಿ ರೇಗಾಡಿದ್ದರು. ಅದು ಬಿಟ್ಟರೆ ಯಾವತ್ತೂ ಬೈದಿಲ್ಲ. 

* “ಪ್ರೇಮ ಬರಹ’ದಲ್ಲಿ ನಿಮ್ಮ ತಂದೆ ಜಾಗದಲ್ಲಿ ಬೇರೆ ನಿರ್ದೇಶಕರು ಇದ್ದಿದ್ರೆ?
ಬೇರೆ ನಿರ್ದೇಶಕರು ಇದ್ದಿದ್ರೆ ಈ ಪಾತ್ರ ಸಿಗುತ್ತಿತ್ತೋ ಗೊತ್ತಿಲ್ಲ. ಆದರೆ, ಅಪ್ಪ ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರ ಕೊಟ್ಟಿದ್ದಾರೆ. ಒಂದು ದಿನವೂ ಯಾವ ರೀತಿ ಮಾಡುತ್ತೀಯಾ ಎಂದು ಕೇಳಿಲ್ಲ. ಏಕೆಂದರೆ ಅವರಿಗೆ ನನ್ನ ಮೇಲೆ ನಂಬಿಕೆ ಇತ್ತು.

* ಅರ್ಜುನ್‌ ಸರ್ಜಾ ರಫ್ ಅಂಡ್‌ ಟಫ್ ಅಂತಾರೆ?
ನನಗೆ ಅವರು ಯಾವತ್ತೂ ರಫ್ ಅಂಡ್‌ ಟಫ್ ಆಗಿ ಕಾಣಿಸಿಲ್ಲ. ಆ ಇಮೇಜ್‌ ನನಗೆ ಗೊತ್ತೇ ಇಲ್ಲ. ಮನೆಯಲ್ಲಿ ಜಾಲಿಯಾಗಿರುತ್ತಾರೆ. ಸಿನಿಮಾದ ತಲೆಬಿಸಿಯನ್ನು ಅವರು ಯಾವತ್ತೂ ಮನೆಯಲ್ಲಿ ತೋರಿಸಿಲ್ಲ. ಇವತ್ತಿಗೂ ನಮ್ಮನ್ನು ಪುಟ್ಟ ಮಕ್ಕಳ ತರಹನೇ ಟ್ರೀಟ್‌ ಮಾಡ್ತಾರೆ.

* ಮುಂದಿನ ಸಿನಿಮಾ?
ಸದ್ಯ ಕಥೆ ಕೇಳುತ್ತಿದ್ದೇನೆ. “ಪ್ರೇಮ ಬರಹ’ ಬಿಡುಗಡೆಯಾದ ನಂತರ ಎರಡನೇ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ. 

Advertisement

Udayavani is now on Telegram. Click here to join our channel and stay updated with the latest news.

Next