ಚಿಕ್ಕಬಳ್ಳಾಪುರ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಹಾಗೂ ಆತನ ಸ್ನೇಹಿತ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಸಮೀಪದ ಯಗಲಮಿಡ್ಡಪಲ್ಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಹರೀಶ್ (25) ಎಂದು ಗುರುತಿಸಲಾಗಿದ್ದು ಕೊಲೆ ಆರೋಪಿಗಳಾದ ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶನನ್ನು ಬಾಗೇಪಲ್ಲಿ ಸಿಪಿಐ ನೈಯಾಜ್ ಬೇಗ್ ನೇತೃತ್ವದ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
ಏನಿದು ಘಟನೆ?
ಕೊಲೆಗೀಡಾಗಿರುವ ಹರೀಶನು ವೆಂಕಟೇಶ್ ಪುತ್ರಿ ಸಿರಿಷಾರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಸಿರೀಷಾಳನ್ನು ಕೊಟ್ಟು ಹರೀಶ್‌ಗೆ ಮದುವೆ ಮಾಡಿಕೊಡಲು ವೆಂಕಟೇಶಪ್ಪ ಕುಟುಂಬಕ್ಕೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಕಳೆದ ಹತ್ತು ತಿಂಗಳ ಹಿಂದೆ ಸಿರಿಷಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಹರೀಶ್ ಊರು ಬಿಟ್ಟು ಬೆಂಗಳೂರಿನಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದು ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಂಗಳೂರಿನಿಂದ ವಾಪಸ್ಸು ಬಂದು ಊರಿನಲ್ಲಿದ್ದ್ದ.
ತನ್ನ ಮಗಳ ಸಾವಿಗೆ ಹರೀಶ್ ಕಾರಣ ಎಂದು ಹೇಳಿ ಸಿರಿಷಾ ತಂದೆ ವೆಂಕಟೇಶ್, ಹರೀಶ್‌ನ ಕೊಲೆಗೆ ಸಂಚು ರೂಪಿಸಿ ಕಳೆದ ಶುಕ್ರವಾರ ರಾತ್ರಿ ತನ್ನ ಸ್ನೇಹಿತ ಗಣೇಶ್‌ನೊಂದಿಗೆ ಸೇರಿ ಬೈಕ್‌ನಲ್ಲಿ ಸಂಚರಿಸುವ ವೇಳೆ ಹರೀಶ್ ನನ್ನು ಹಿಂಬಾಲಿಸಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆಯ ಮೇಲೆ ಹಲವಾರು ಬಾರಿ ತಿವಿದು ಕೊಲೆ ಮಾಡಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.