Advertisement
ಅಷ್ಟೇ ಅಲ್ಲದೆ, ಕೊಲೆಯಾದ ವ್ಯಕ್ತಿ ಗುರುತು ಪತ್ತೆಹಚ್ಚಿದ್ದು, ಆತನನ್ನು ಕೊಲೆಮಾಡಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಕೆ.ಆರ್.ಪುರ ಸಮೀಪದ ಚಿಕ್ಕ ಬಸನಪುರದ ಐವತ್ತು ವರ್ಷ ವಯಸ್ಸಿನ ಬಸವರಾಜು ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಆತನ ಪತ್ನಿ ಶೋಭಾ, ಮಕ್ಕಳಾದ ಅನುಷಾ, ಅಖೀಲಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೂಬ್ಬ ಆರೋಪಿ, ಮೃತನ ಭಾವಮೈದುನ ರವಿಕುಮಾರ್ ತಲೆಮರೆಸಿಕೊಂಡಿದ್ದಾನೆ.
Related Articles
Advertisement
ಕೊಲೆಯಲ್ಲಿ ಅಂತ್ಯವಾದ ಜಗಳ: ಗಾರೆ ಕೆಲಸ ಮಾಡುತ್ತಿದ್ದ ಬಸವರಾಜು, ವಿಪರೀತ ಮದ್ಯ ವ್ಯಸನಿಯಾಗಿದ್ದ. ನಿತ್ಯ ಮನೆಯಲ್ಲಿ ಗಲಾಟೆ ಮಾಡಿ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಅ.15ರಂದು ರಾತ್ರಿ ಗಲಾಟೆ ತಾರಕಕ್ಕೇರಿ ಊದುಕೊಳವೆಯಿಂದ ಹೊಡೆಯುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದ, ಪುನಃ ಆತ ಹೊಡೆಯಲು ಮುಂದಾದಾಗ ಗಾಜಿನ ಚೂರಿನಿಂದ ಆತನಿಗೆ ಚುಚ್ಚಲು ಹೋದಾಗ ತನ ಕತ್ತು ಕುಯ್ದು ಕೊಲೆಯಾಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಕೃತ್ಯದಲ್ಲಿ ಬಸವರಾಜು ಪತ್ನಿ ಶೋಭಾ, ಇಬ್ಬರು ಹೆಣ್ಣುಮಕ್ಕಳು ಹಾಗೂ ಮತ್ತೂಬ್ಬ ಕಾನೂನು ಸಂಘರ್ಷಕ್ಕೊಳಗಾದ ಮಗಳು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಮೃತದೇಹ ಸಾಗಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ರವಿಕುಮಾರ್ ಹಾಗೂ ಆತನ ಸ್ನೇಹಿತರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅರ್ಧ ಸುಟ್ಟ ಶವ ಮಾಲೂರಿಗೆ ಕೊಂಡೊಯ್ದ: ಬಸವರಾಜು ಕೊಲೆಯಾದ ಬಳಿಕ ಮೃತದೇಹವನ್ನು ತಾಯಿ ಹಾಗೂ ಇಬ್ಬರು ಮಕ್ಕಳು ರಾತ್ರಿಯಿಡೀ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅದೇ ದಿನ ರಾತ್ರಿ ಸ್ವಲ್ಪವೇ ದೂರದಲ್ಲಿ ಸಾಗಿಸಿ ಸುಟ್ಟಿದ್ದಾರೆ. ಪೂರ್ಣ ಸುಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ. ಶೋಭಾ ಅವರು ತಮ್ಮ ಸಹೋದರ ರವಿಕುಮಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ರವಿಕುಮಾರ್ ಕೂಡ ಆತಂಕಗೊಂಡು ಮಾರನೇ ದಿನ ರಾತ್ರಿ ಅರ್ಧಸುಟ್ಟ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಕೊಂಡು ಸ್ನೇಹಿತರ ಜತೆಗೂಡಿ ಮಾಲೂರು ಸಮೀಪದ ರೈಲ್ವೆ ಹಳಿಗಳ ಮೇಲೆ ಮೃತದೇಹ ಎಸೆದು ಪರಾರಿಯಾಗಿದ್ದ ಎಂದು ಅಧಿಕಾರಿ ವಿವರಿಸಿದರು.
* ಮಂಜುನಾಥ್ ಲಘುಮೇನಹಳ್ಳಿ